ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ ಕಾಂಗ್ರೆಸ್ ಅವಸಾನ: ಜ್ಯೋತಿರಾದಿತ್ಯ ಸಿಂಧಿಯಾ

Update: 2019-10-10 03:58 GMT

ಹೊಸದಿಲ್ಲಿ: ಹಿರಿಯ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಅವರು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್‍ ಗಾಂಧಿಯವರದ್ದು ಪಲಾಯನವಾದ ಎಂದು ಟೀಕಿಸಿದ ಬೆನ್ನಲ್ಲೇ ಮತ್ತೊಬ್ಬ ಪ್ರಭಾವಿ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ, ಪಕ್ಷ ಅವಸಾನದ ಅಂಚಿಗೆ ತಲುಪುವುದನ್ನು ತಡೆಯಲು ಆತ್ಮಾವಲೋಕನ ಅನಿವಾರ್ಯ ಎಂದು ಪ್ರತಿಪಾದಿಸಿದ್ದಾರೆ.

ಪಕ್ಷದ "ನಾಯಕತ್ವ ಶೂನ್ಯ ವಾತಾವರಣ"ದ ಬಗ್ಗೆ ಖುರ್ಷಿದ್ ವ್ಯಕ್ತಪಡಿಸಿದ ಅಭಿಪ್ರಾಯದ ಬಗ್ಗೆ ಪ್ರಶ್ನಿಸಿದಾಗ "ಇತರರು ನೀಡಿದ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕಾದ್ದು ಅತ್ಯಗತ್ಯ. ಪಕ್ಷದ ಸ್ಥಿತಿಗತಿಯನ್ನು ಮೌಲ್ಯಮಾಪನ ಮಾಡಿ ಸುಧಾರಿಸಿಕೊಳ್ಳಬೇಕಾದ್ದು, ಇಂದಿನ ಅಗತ್ಯ" ಎಂದು ಉತ್ತರಿಸಿದರು.

ರಾಹುಲ್‍ ಗಾಂಧಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಿಂಧಿಯಾ, ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಪಕ್ಷದ ಹಳೆ ಹುಲಿಗಳು ಇದುವರಗೆ ಇದನ್ನು ಯಶಸ್ವಿಯಾಗಿ ತಡೆಯುತ್ತಾ ಬಂದಿದ್ದಾರೆ.

ಸಿಂಧಿಯಾ ಅವರನ್ನು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡದಿದ್ದರೆ ಅವರು ಬಿಜೆಪಿ ಸೇರುತ್ತಾರೆ ಎಂಬ ವದಂತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಜಮ್ಮು ಕಾಶ್ಮೀರ ವಿಚಾರದಲ್ಲಿ ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿತ್ತು. ಆದರೆ ಕಾಂಗ್ರೆಸ್ ಇಂತಹ ಸಾಧ್ಯತೆಯನ್ನು ಅಲ್ಲಗಳೆದಿದೆ.

ಮಹಾರಾಷ್ಟ್ರ ಹಾಗೂ ಹರ್ಯಾಣದಂಥ ರಾಜ್ಯಗಳ ಮಹತ್ವದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೇ ರಾಹುಲ್‍ ಗಾಂಧಿ ವಿದೇಶ ಪ್ರವಾಸ ಕೈಗೊಳ್ಳಲು ಮುಂದಾಗಿರುವುದು ಪಕ್ಷದ ಕೆಲ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ರಾಹುಲ್ ಕಾಂಬೋಡಿಯಾಗೆ ಧ್ಯಾನಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದ್ದು, ಗುರುವಾರ ಸೂರತ್ ಕೋರ್ಟ್‍ನಲ್ಲಿ ಮಾನಹಾನಿ ಪ್ರಕರಣವೊಂದರ ವಿಚಾರಣೆಗೆ ಹಾಜರಾಗುವ ನಿರೀಕ್ಷೆ ಇದೆ.

ಕಳೆದ ಲೋಕಸಭಾ ಚುನಾವಣೆಯ ಆಘಾತದಿಂದ ಇನ್ನೂ ಚೇತರಿಸಿಕೊಳ್ಳದ ಕಾಂಗ್ರೆಸ್ ಪಕ್ಷದಿಂದ ಹಲವು ಮುಖಂಡರು ಬಿಜೆಪಿ ಹಾಗೂ ಶಿವಸೇನೆಗೆ ವಲಸೆ ಹೋಗುತ್ತಿರುವುದು ಮತ್ತಷ್ಟು ಆಘಾತ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News