ಮಾನಹಾನಿ ಪ್ರಕರಣ: ಸೂರತ್ ನ್ಯಾಯಾಲಯಕ್ಕೆ ಹಾಜರಾದ ರಾಹುಲ್ ಗಾಂಧಿ

Update: 2019-10-10 07:03 GMT

ಸೂರತ್(ಗುಜರಾತ್), ಅ.10: ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾನಹಾನಿ ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಸೂರತ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

  ರಾಹುಲ್ ಕಳೆದ ಎಪ್ರಿಲ್‌ನಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಲೋಕಸಭಾ ಚುನಾವಣೆಯ ರ್ಯಾಲಿಯ ವೇಳೆ ದೇಶದಲ್ಲಿ ‘ಎಲ್ಲಾ ಕಳ್ಳರೂ ಮೋದಿ ಎಂಬ ಉಪನಾಮವನ್ನೇ ಹೊಂದಿದ್ದಾರೆ’ಎಂದು ಅಪಹಾಸ್ಯ ಮಾಡಿದ್ದರು. ದೇಶದ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಸಾವಿರಾರೂ ಕೋಟಿ ರೂ. ಲೂಟಿ ಮಾಡಿ ವಿದೇಶಕ್ಕೆ ಪರಾರಿಯಾಗಿದ್ದ ನೀರವ್ ಮೋದಿ ಹಾಗೂ ಲಲಿತ್ ಮೋದಿ ಅವರನ್ನು ಉಲ್ಲೇಖಿಸಿ ರಾಹುಲ್ ಈ ಹೇಳಿಕೆ ನೀಡಿದ್ದರು.

‘‘ರಾಜಕೀಯ ಎದುರಾಳಿಗಳು ನನ್ನ ವಿರುದ್ಧ ದಾಖಲಿಸಿರುವ ಮಾನಹಾನಿ ಪ್ರಕರಣದ ವಿಚಾರಣೆಗೆ ಹಾಜರಾಗಲು ನಾನು ಇಂದು ಸೂರತ್‌ಗೆ ಆಗಮಿಸಿದ್ದೇನೆ. ನನಗೆ ನೈತಿಕಸ್ಥೈರ್ಯ ತುಂಬಲು ಇಲ್ಲಿ ನೆರೆದಿರುವ ಕಾಂಗ್ರೆಸ್ ಕಾರ್ಯಕರ್ತರ ಪ್ರೀತಿ ಹಾಗೂ ವಿಶ್ವಾಸಕ್ಕೆ ತುಂಬಾ ಸಂತೋಷವಾಗಿದೆ’’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಸೂರತ್‌ನ ಸ್ಥಳೀಯ ಬಿಜೆಪಿ ನಾಯಕ ಪೂರ್ಣೇಶ್ ಐಪಿಸಿ ಸೆಕ್ಷನ್ 499 ಹಾಗೂ 500ರ ಅಡಿ ರಾಹುಲ್ ವಿರುದ್ಧ ಮಾನಹಾನಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ದೂರನ್ನು ಸ್ವೀಕರಿಸಿದ ಮ್ಯಾಜಿಸ್ಟ್ರೇಟ್ ಕಪಾಡಿಯಾ ಕಳೆದ ಮೇನಲ್ಲಿ ರಾಹುಲ್‌ಗೆ ಸಮನ್ಸ್ ನೀಡಿದ್ದರು. ಕಳೆದ ಜುಲೈನಲ್ಲಿ ನ್ಯಾಯಾಲಯದಲ್ಲಿ ಹಾಜರಾಗಲು ವಿನಾಯಿತಿ ಕೋರಿ ರಾಹುಲ್ ಪರ ವಕೀಲರು ಮನವಿ ಸಲ್ಲಿಸಿದ್ದರು.ರಾಹುಲ್ ಮನವಿಗೆ ಸಮ್ಮತಿ ಸೂಚಿಸಿದ್ದ ನ್ಯಾಯಾಲಯ ಅರ್ಜಿಗೆ ಉತ್ತರಿಸುವ ದಿನಾಂಕವನ್ನು ಅ.10ಕ್ಕೆ ನಿಗದಿಪಡಿಸಿತ್ತು. ಈ ಪ್ರಕರಣದ ಸಂಬಂಧ ವಿಚಾರಣೆಗೆ ರಾಹುಲ್ ಗುರುವಾರ ಸೂರತ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾದರು.

ಆರೋಪಗಳಿಗೆ ತಾನು ತಪ್ಪಿತಸ್ಥನಲ್ಲ ಎಂದು ಒಪ್ಪಿಕೊಂಡ ರಾಹುಲ್ ಗಾಂಧಿ, ಈ ಪ್ರಕರಣದಲ್ಲಿ ಮುಂದಿನ ನ್ಯಾಯಾಲಯದ ವಿಚಾರಣೆಯಿಂದ ಶಾಶ್ವತ ವಿನಾಯಿತಿಗಾಗಿ ಅರ್ಜಿ ಸಲ್ಲಿಸಿದರು. ಅರ್ಜಿಗೆ ಉತ್ತರಿಸುವ ದಿನಾಂಕವನ್ನು ಡಿಸೆಂಬರ್ 10ಕ್ಕೆ ನಿಗದಿಪಡಿಸಿದ ನ್ಯಾಯಾಲಯ ಈ ವಿಚಾರಣೆಗೆ ರಾಹುಲ್ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿಲ್ಲ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News