ದ್ವಿತೀಯ ಟೆಸ್ಟ್: ಮಾಯಾಂಕ್ ಆಕರ್ಷಕ ಶತಕ

Update: 2019-10-11 04:38 GMT

ಪುಣೆ, ಅ.10: ಸತತ ಎರಡನೇ ಶತಕ ಸಿಡಿಸಿದ ಆರಂಭಿಕ ಬ್ಯಾಟ್ಸ್‌ಮನ್ ಮಾಯಾಂಕ್ ಅಗರ್ವಾಲ್ ಮತ್ತೊಮ್ಮೆ ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದರು. ಮಾಯಾಂಕ್ ಆಕರ್ಷಕ ಶತಕದ ಬಲದಿಂದ ಗುರುವಾರ ಇಲ್ಲಿ ಆರಂಭವಾದ ದ್ವಿತೀಯ ಟೆಸ್ಟ್‌ನ ಮೊದಲ ದಿನದಾಟದಂತ್ಯಕ್ಕೆ ಆತಿಥೇಯರು 3 ವಿಕೆಟ್ ನಷ್ಟಕ್ಕೆ 273 ರನ್ ಕಲೆ ಹಾಕಿ ಉತ್ತಮ ಮೊತ್ತದತ್ತ ಹೆಜ್ಜೆ ಇಟ್ಟಿದ್ದಾರೆ.

 28ರ ಹರೆಯದ ಕರ್ನಾಟಕದ ಬ್ಯಾಟ್ಸ್ ಮನ್ ಮಾಯಾಂಕ್ ತನ್ನ ಶ್ರೇಷ್ಠ ಫಾರ್ಮ್‌ನ್ನು ಮುಂದುವರಿಸಿದ್ದು 195 ಎಸೆತಗಳ ಇನಿಂಗ್ಸ್ ನಲ್ಲಿ 16 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಿತ 108 ರನ್ ಗಳಿಸಿ ವೇಗದ ಬೌಲರ್ ಕಾಗಿಸೊ ರಬಾಡಗೆ ವಿಕೆಟ್ ಒಪ್ಪಿಸಿದರು. ಕಳೆದ ವಾರ ವಿಶಾಖಪಟ್ಟಣದಲ್ಲಿ ಜೀವನಶ್ರೇಷ್ಠ ಇನಿಂಗ್ಸ್(215) ಆಡಿದ್ದ ಮಾಯಾಂಕ್ ತನ್ನ 6ನೇ ಪಂದ್ಯದಲ್ಲಿ 2ನೇ ಶತಕ ಸಿಡಿಸಿದರು.

ಮಾಯಾಂಕ್ ದ.ಆಫ್ರಿಕಾ ವಿರುದ್ಧ ಸತತ 2 ಶತಕ ಸಿಡಿಸಿದ ಭಾರತದ 2ನೇ ಆರಂಭಿಕ ದಾಂಡಿಗ ಎನಿಸಿಕೊಂಡರು. 2009-10ರಲ್ಲಿ ವೀರೇಂದ್ರ ಸೆಹ್ವಾಗ್ ಈ ಸಾಧನೆ ಮಾಡಿದ್ದರು.

ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಭಾರತ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಮಾಯಾಂಕ್ ಜೊತೆ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ(14 ರನ್) 10ನೇ ಓವರ್‌ನಲ್ಲಿ ರಬಾಡಗೆ ವಿಕೆಟ್ ಒಪ್ಪಿಸಿದರು. ಆಗ ಭಾರತದ ಸ್ಕೋರ್ 25.

ರೋಹಿತ್ ಬೇಗನೆ ಔಟಾದಾಗ ಚೇತೇಶ್ವರ ಪೂಜಾರ(58, 112 ಎಸೆತ, 9 ಬೌಂಡರಿ, 1 ಸಿಕ್ಸರ್)ಜೊತೆ ಕೈಜೋಡಿಸಿದ ಮಾಯಾಂಕ್ ಅಗರ್ವಾಲ್ ಎರಡನೇ ವಿಕೆಟ್ ಜೊತೆಯಾಟದಲ್ಲಿ 138 ರನ್ ಗಳಿಸಿದರು. ಮಂದ ಬೆಳಕಿನಿಂದಾಗಿ ದಿನದಾಟ 86ನೇ ಓವರ್‌ಗೆ ಕೊನೆಗೊಂಡಾಗ ನಾಯಕ ವಿರಾಟ್ ಕೊಹ್ಲಿ(ಔಟಾಗದೆ 63, 105 ಎಸೆತ, 10 ಬೌಂಡರಿ) ಅಜಿಂಕ್ಯ ರಹಾನೆ(ಔಟಾಗದೆ 18, 70 ಎಸೆತ, 3 ಬೌಂಡರಿ)ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 75 ರನ್ ಸೇರಿಸಿದ್ದಾರೆ. 91 ಎಸೆತಗಳಲ್ಲಿ ಟೆಸ್ಟ್ ಜೀವನದ 23ನೇ ಅರ್ಧಶತಕ ಸಿಡಿಸಿದ ಕೊಹ್ಲಿ ಎರಡನೇ ದಿನಕ್ಕೆ ತನ್ನ ಆಟವನ್ನು ಕಾಯ್ದಿರಿಸಿದರು. ಮಾಯಾಂಕ್ ದಕ್ಷಿಣ ಆಫ್ರಿಕಾದ ವೇಗದ ಹಾಗೂ ಸ್ಪಿನ್ ಬೌಲರ್‌ಗಳನ್ನು ಸಮನಾಗಿ ಎದುರಿಸಿ ಗಮನ ಸೆಳೆದರು. ಎಡಗೈ ಸ್ಪಿನ್ನರ್ ಕೇಶವ ಮಹಾರಾಜ್ ಬೌಲಿಂಗ್‌ನಲ್ಲಿ ಸತತ 2 ಸಿಕ್ಸರ್‌ಗಳನ್ನು ಸಿಡಿಸಿದ ಮಾಯಾಂಕ್, ವೇಗಿ ವೆರ್ನಾನ್ ಫಿಲ್ಯಾಂಡರ್ ಬೌಲಿಂಗ್‌ನಲ್ಲಿ ಬೌಂಡರಿ ಗಳಿಸಿ ಎರಡನೇ ಟೆಸ್ಟ್ ಶತಕ ಪೂರೈಸಿದರು. ತಾಳ್ಮೆ ಹಾಗೂ ಆಕ್ರಮಣಕಾರಿ ಮಿಶ್ರಣದೊಂದಿಗೆ ಪರಿಪೂರ್ಣ ಇನಿಂಗ್ಸ್ ಕಟ್ಟಿದ ಮಾಯಾಂಕ್ 18 ಎಸೆತಗಳಲ್ಲಿ 74 ರನ್ ಹಾಗೂ 177 ಎಸೆತಗಳಲ್ಲಿ ಉಳಿದ 34 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಬೌಲರ್‌ಗಳ ಪೈಕಿ ವೇಗಿ ಕಾಗಿಸೊ ರಬಾಡ(3-48, 18.1 ಓವರ್‌ಗಳು)ಯಶಸ್ವಿ ಬೌಲರ್ ಎನಿಸಿಕೊಂಡರು. ಇನಿಂಗ್ಸ್‌ನ 10ನೇ ಓವರ್‌ನಲ್ಲಿ ರಬಾಡ ಎಸೆದ ಸೊಗಸಾದ ಎಸೆತ ರೋಹಿತ್ ಬ್ಯಾಟ್ ಅಂಚನ್ನು ಸವರಿ ವಿಕೆಟ್‌ಕೀಪರ್ ಕ್ವಿಂಟರ್‌ಡಿಕಾಕ್ ಅವರ ಕೈಗವಚವನ್ನು ಸೇರಿತು. ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಪೂಜಾರ 22ನೇ ಅರ್ಧಶತಕ ಗಳಿಸಿದ ಬಳಿಕ ರಬಾಡ ಬೌಲಿಂಗ್‌ನಲ್ಲಿ ್ಲೆಸಿಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News