ಕೇಂದ್ರ-ರಾಜ್ಯ ಸರಕಾರಗಳ ವಿರುದ್ಧ ದೇವೇಗೌಡ ನೇತೃತ್ವದಲ್ಲಿ ಪ್ರತಿಭಟನೆ: ಬಿಎಸ್‌ವೈ ರಾಜೀನಾಮೆಗೆ ಪಟ್ಟು

Update: 2019-10-10 12:58 GMT

ಬೆಂಗಳೂರು, ಅ.10: ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ನೇತೃತ್ವದಲ್ಲಿ ಬೃಹತ್ ರ‍್ಯಾಲಿ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದರು.

ಗುರುವಾರ ನಗರದ ಶೇಷಾದ್ರಿ ಪುರಂನ ಜೆಡಿಎಸ್ ಪಕ್ಷದ ಕಚೇರಿಯಿಂದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಮಾರ್ಗದ ಮೂಲಕ ಪ್ರತಿಭಟನಾ ರ‍್ಯಾಲಿ ಆರಂಭಿಸಿ ಸ್ವಾತಂತ್ರ್ಯ ಉದ್ಯಾನದವರೆಗೂ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಚ್.ಡಿ.ದೇವೇಗೌಡ ಅವರು, ಗೌರವಾನ್ವಿತ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಂದ್ರದ ಮುಂದೆ 36 ಸಾವಿರ ಕೋಟಿ ರೂ.ಗಳ ಬೇಡಿಕೆ ಇಟ್ಟಿದ್ದರು. ಆದರೆ, 1200 ಕೋಟಿ ಮಾತ್ರ ನೀಡಿದ್ದಾರೆ. ಇದು ಹೇಯವಾದ ಕೃತ್ಯ ಅಲ್ಲವೆ ಎಂದು ಪ್ರಶ್ನಿಸಿದರು.

ಒಂದು ಪಕ್ಷದ ಸರಕಾರ ಕೇಂದ್ರ ಮತ್ತು ರಾಜ್ಯದಲ್ಲಿದೆ. ಆದರೆ ಅವರು ನಡೆದುಕೊಂಡ ರೀತಿ ಬೇಸರ ತಂದಿದೆ. ಯಡಿಯೂರಪ್ಪಅವರು ಅಪ್ಪ-ಮಕ್ಕಳನ್ನು ಮುಗಿಸುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ, ನಾವು ಮಾಡಿರುವ ತಪ್ಪಾದರೂ ಏನು. ನಮ್ಮ ಹೋರಾಟಗಳನ್ನು ಒಮ್ಮೆ ನೋಡಿ, ನಾನು ಯಾವುದೇ ಜಾತಿಗೆ ಸೀಮಿತವಾಗಿಲ್ಲ ಎಂದರು.

ಎಚ್.ಡಿ. ಕುಮಾರಸ್ವಾಮಿ ಅವರ ಹದಿನಾಲ್ಕು ತಿಂಗಳ ಆಡಳಿತದಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆದರೆ, ಕಳೆದ ಆರು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕೇಂದ್ರದ ಎನ್‌ಡಿಎ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗಾಗಿ ಏನು ಮಾಡಿದ್ದಾರೆಂದು ಪ್ರಶ್ನಿಸಿದರು.

ರಾಜೀನಾಮೆ ನೀಡಿ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಕರ್ನಾಟಕದಲ್ಲಿ ಕುಮಾರಸ್ವಾಮಿ ಸರಕಾರ ಇದ್ದ ಸಂದರ್ಭದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ, ದೂರವಾಣಿ ಕರೆ ಮಾಡಿ, ಮಾತುಕತೆ ನಡೆಸುವುದಷ್ಟೇ ಅಲ್ಲದೆ, ರಾಜ್ಯಕ್ಕಾಗಿ ಸ್ಪಂದಿಸುತ್ತಿದ್ದರು. ಆದರೆ, ಈಗ ಏನಾಗಿದೆ ಎಂದು ಬಿಜೆಪಿ ನಾಯಕರೇ ಅರ್ಥ ಮಾಡಿಕೊಳ್ಳಲಿ ಎಂದು ಹೇಳಿದರು.

ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರಕಾರ ಇದ್ದರೆ, ಬಂಗಾರ ಆಗುತ್ತದೆ ಎಂದು ಸುಳ್ಳು ಹಬ್ಬಿಸಿ ರಾಜಕೀಯ ಲಾಭ ಪಡೆದ ನಾಯಕರು, ಈಗ ಎಲ್ಲಿ ಹೋಗಿದ್ದಾರೆ. ಅಲ್ಲದೇ, ಈಗ ಬಂಗಾರ ಇರಲಿ, ಕಬ್ಬಿಣವೂ ರಾಜ್ಯಕ್ಕೆ ಸಿಕ್ಕಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪರಾಜೀನಾಮೆ ನೀಡುವುದೇ ಸೂಕ್ತ ಎಂದರು.

ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಯಡಿಯೂರಪ್ಪ ಸರಕಾರದ ವಿರುದ್ಧ ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದು ಜನವಿರೋಧಿ ಸರಕಾರ ಎಂದು ಈಗಾಗಲೇ ಸಾಬೀತಾಗಿದೆ. ಹಾಗಾಗಿ, ಕುಮಾರಸ್ವಾಮಿ ಸರಕಾರದ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಪುಟ್ಟರಾಜು, ಸಾ.ರಾ.ಮಹೇಶ್, ಬಂಡೆಪ್ಪ ಕಾಂಶೆಪೂರ್, ಮುಖಂಡರಾದ ಟಿ.ಎ.ಶರವಣ, ಶಿವರಾಮೇಗೌಡ, ಕೋನರೆಡ್ಡಿ, ಪ್ರಕಾಶ್ ಸೇರಿದಂತೆ ಜೆಡಿಎಸ್ ಪದಾಧಿಕಾರಿಗಳು ಭಾಗಿಯಾಗಿದ್ದರು.

‘ಗಂಡಸುತನ ಇಲ್ಲದ ಸರಕಾರ’

10 ಸಾವಿರ ರೂಪಾಯಿ ಭಿಕ್ಷೆಗಾಗಿ ಒಂದು ರಾಜ್ಯದ ಮುಖ್ಯಮಂತ್ರಿ ಕೇಂದ್ರ ಸರಕಾರದ ಮುಂದೆ ನಿಲ್ಲುತ್ತಾರೆ ಎಂದರೆ, ರಾಜ್ಯದಲ್ಲಿ ಎಂತಹ ಸರಕಾರ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ, ಕುಮಾರಸ್ವಾಮಿ ಸರಕಾರಕ್ಕೆ ಇದ್ದ ಗಂಡಸುತನ, ಈಗಿನ ಸರಕಾರಕ್ಕೆ ಇಲ್ಲ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ವಾಗ್ದಾಳಿ ನಡೆಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News