ಪ್ರಧಾನಿಯ 56 ಇಂಚಿನ ಎದೆಯಲ್ಲಿ ತಾಯಿ ಹೃದಯವಿಲ್ಲ: ಸಿದ್ದರಾಮಯ್ಯ

Update: 2019-10-10 13:42 GMT

ಬೆಂಗಳೂರು, ಅ.10: ಪ್ರಧಾನಿ ನರೇಂದ್ರ ಮೋದಿ ತನಗೆ 56 ಇಂಚಿನ ಎದೆ ಇದೆ ಎನ್ನುತ್ತಾರೆ. ಆದರೆ, ಆ ಎದೆಯಲ್ಲಿ ಜನರ ಸಂಕಷ್ಟಗಳಿಗೆ ಮಿಡಿಯುವಂತಹ ತಾಯಿ ಹೃದಯ ಇಲ್ಲವಲ್ಲ ಎಂಬ ಬೇಸರವಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಆರಂಭಗೊಂಡ ಬಳಿಕ ನೆರೆ ಪರಿಸ್ಥಿತಿ ಕುರಿತು ಚರ್ಚೆ ಆರಂಭಿಸಿದ ಅವರು, ಪ್ರಧಾನಿ ವಿದೇಶ ಪ್ರವಾಸ ಮಾಡಲಿ. ಆದರೆ, ಅವರ ಆದ್ಯತೆ ಏನಾಗಿರಬೇಕು? ವಿದೇಶ ಪ್ರವಾಸ ಮಾಡದಿದ್ದರೆ ಪ್ರಳಯ ಆಗಲ್ಲ. ಇಲ್ಲಿ ಲಕ್ಷಾಂತರ ಜನ ಬೀದಿ ಪಾಲಾಗಿದ್ದಾರೆ. ಅವರಿಗೆ ಸ್ಪಂದಿಸುವ ಕೆಲಸ ಮಾಡಬಾರದೇ ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿಗೆ ನಮ್ಮ ರಾಜ್ಯದ ಬಗ್ಗೆ ಯಾಕೆ ಅಸಹನೆ, ತಿರಸ್ಕಾರ ಇದೆಯೋ ಗೊತ್ತಿಲ್ಲ. ಕೇಂದ್ರ ಗೃಹ ಸಚಿವ ಹಾಗೂ ಹಣಕಾಸು ಸಚಿವರು ಬಂದು ನೆರೆ ಪರಿಸ್ಥಿತಿಯ ವೈಮಾನಿಕ ಸಮೀಕ್ಷೆ ನಡೆಸಿದರೂ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ಪ್ರಧಾನಿಗೆ ನಮ್ಮ ರಾಜ್ಯದಲ್ಲಿ ಪ್ರವಾಹ ಬಂದಿರುವ ಮಾಹಿತಿ ಇದೆಯೋ ಇಲ್ಲವೋ ಗೊತ್ತಿಲ್ಲ ಎಂದು ಅವರು ಟೀಕಿಸಿದರು.

ರಾಜ್ಯದ ನೆರೆ ಪರಿಸ್ಥಿತಿ ಕುರಿತು ಮನವರಿಕೆ ಮಾಡಿಕೊಡಲು ನಮಗೆ ಕಾಲಾವಕಾಶ ನೀಡುವಂತೆ ಪ್ರಧಾನಿಗೆ ಪತ್ರ ಬರೆಯಲಾಗಿತ್ತು. ಆದರೆ, ನಮ್ಮ ಪತ್ರಕ್ಕೆ ಬಿಡಿಗಾಸಿನ ಬೆಲೆಯನ್ನು ನೀಡಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪಗೆ ಕಾಲಾವಕಾಶ ನೀಡದವರು, ನಮಗೆ ಎಲ್ಲಿಂದ ಸಮಯ ನೀಡಬೇಕು ಎಂದು ಸಿದ್ದರಾಮಯ್ಯ ಕಿಚಾಯಿಸಿದರು.

ರಾಜ್ಯ ಸರಕಾರವೇ ನೀಡಿರುವ ಮಾಹಿತಿಯಂತೆ ನೆರೆ ಹಾವಳಿಯಿಂದ 38 ಸಾವಿರ ಕೋಟಿ ರೂ.ನಷ್ಟವಾಗಿದೆ. ಆದರೆ, ಕೇಂದ್ರ ಸರಕಾರ ಕೊಟ್ಟಿರುವ ಪರಿಹಾರ ಕೇವಲ 1200 ಕೋಟಿ ರೂ.ಗಳು. ನಮ್ಮ ಅಂದಾಜಿನ ಪ್ರಕಾರ ಸುಮಾರು ಒಂದು ಲಕ್ಷ ಕೋಟಿ ರೂ.ಗಳ ಹಾನಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

2005ರಲ್ಲಿ ರಾಜ್ಯದಲ್ಲಿ ಉಂಟಾದ ನೆರೆ ಹಾವಳಿ ವೇಳೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮಧ್ಯಂತರವಾಗಿ 500 ಕೋಟಿ ರೂ.ಗಳನ್ನು ಘೋಷಣೆ ಮಾಡಿದ್ದರು. ಅದೇ ರೀತಿ 2009ರಲ್ಲಿ ಮತ್ತೊಮ್ಮೆ ಪ್ರವಾಹವಾದಾಗ ವೈಮಾನಿಕ ಸಮೀಕ್ಷೆ ನಡೆಸಿ 1600 ಕೋಟಿ ರೂ.ಗಳ ಮಧ್ಯಂತರ ಪರಿಹಾರ ಘೋಷಣೆ ಮಾಡಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಕೃಷ್ಣಭೈರೇಗೌಡ, 2009ರಲ್ಲಿ ನೆರೆ ಹಾವಳಿಯಿಂದ ಉಂಟಾದ ನಷ್ಟ 7400 ಕೋಟಿ ರೂ., ಕೇಂದ್ರ ಸರಕಾರ ಪರಿಹಾರ ನೀಡಿದ್ದು 1600 ಕೋಟಿ ರೂ.ಗಳು. ಆದರೆ, ಈ ಬಾರಿ ಆಗಿರುವ ನಷ್ಟ ಸರಕಾರದ ವರದಿಯಂತೆ 38 ಸಾವಿರ ಕೋಟಿ ರೂ.ಗಳು, ಕೇಂದ್ರ ಸರಕಾರ ನೀಡಿರುವುದು 1200 ಕೋಟಿ ರೂ.ಗಳು ಎಂದರು.

ಅಲ್ಲದೇ, 1200 ಕೋಟಿ ರೂ.ಗಳಲ್ಲಿ ಎಸ್‌ಡಿಆರ್‌ಎಫ್ ಅಡಿಯಲ್ಲಿ ನಮಗೆ ಬರಬೇಕಿರುವ 303 ಕೋಟಿ ರೂ.ಸೇರಿದೆ. ಇನ್ನುಳಿದಂತೆ ಎನ್‌ಡಿಆರ್‌ಎಫ್ ಅಡಿಯಲ್ಲಿ ಕೇಂದ್ರ ಸರಕಾರ ನೀಡಿರುವುದು 897 ಕೋಟಿ ರೂ.ಗಳು ಮಾತ್ರ ಎಂದು ಕೃಷ್ಣಭೈರೇಗೌಡ ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕಂದಾಯ ಸಚಿವ ಆರ್.ಅಶೋಕ್, 2009ರಲ್ಲಿ ಮನಮೋಹನ್ ಸಿಂಗ್ ಸರಕಾರ 1703 ಕೋಟಿ ರೂ.ಗಳ ಪರಿಹಾರ ನೀಡಿದೆ. 2009-14ರ ಅವಧಿಯಲ್ಲಿ ಯುಪಿಎ ಸರಕಾರ ಎನ್‌ಡಿಆರ್‌ಎಫ್ ಅಡಿಯಲ್ಲಿ ನಮ್ಮ ರಾಜ್ಯಕ್ಕೆ ನೀಡಿರುವುದು 2669 ಕೋಟಿ ರೂ., 2014-19ರವರೆಗೆ ಎನ್‌ಡಿಎ ಸರಕಾರ ನೀಡಿರುವುದು 8744.61 ಕೋಟಿ ರೂ. ಕೇಂದ್ರ ಸರಕಾರದಿಂದ ನಮ್ಮ ರಾಜ್ಯಕ್ಕೆ ಯಾವುದೇ ಅನ್ಯಾಯವಾಗಿಲ್ಲ ಎಂದರು.

ನಂತರ ಮಾತು ಮುಂದುವರೆಸಿದ ಸಿದ್ದರಾಮಯ್ಯ, 2013ರಲ್ಲಿ ನಾನು ಮಂಡಿಸಿದ ಬಜೆಟ್ ಗಾತ್ರ 1.05 ಲಕ್ಷ ಕೋಟಿ ರೂ.ಗಳದ್ದು, 2018ರಲ್ಲಿ ಮಂಡಿಸಿದ ಬಜೆಟ್ 2 ಲಕ್ಷ ಕೋಟಿ ರೂ.ಗಳನ್ನು ದಾಟ್ಟಿತ್ತು. ಐದು ವರ್ಷಗಳಲ್ಲಿ ಬಜೆಟ್ ಗಾತ್ರ ದುಪ್ಪಟ್ಟು ಆಗಿತ್ತು. ಇಂದು ಹಣದ ಮೌಲ್ಯ ಹೆಚ್ಚಾಗಿದೆ ಎಂದರು. ಇಂತಹ ಸಂದರ್ಭದಲ್ಲಿ 38 ಸಾವಿರ ಕೋಟಿ ರೂ.ನಷ್ಟವಾಗಿರುವ ರಾಜ್ಯಕ್ಕೆ 1200 ಕೋಟಿ ರೂ.ಗಳ ಪರಿಹಾರ ನೀಡಿದರೆ ಏನು ಅರ್ಥ? ಈ ಪ್ರವಾಹದಿಂದಾಗಿ 22 ಜಿಲ್ಲೆಯ 103 ತಾಲೂಕಿನ ಜನ ತತ್ತರಿಸಿದ್ದಾರೆ. 7 ಲಕ್ಷ ಜನ ಸಂತ್ರಸ್ತರಾಗಿದ್ದಾರೆ. 2 ಲಕ್ಷ ಮನೆಗಳು ನೆಲಸಮವಾಗಿದೆ. 90 ಜನ ಪ್ರಾಣ ಕಳೆದುಕೊಂಡಿದ್ದರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News