ಜಾತೀಯತೆ ಸಂಪೂರ್ಣ ನಿರ್ಮೂಲನೆ ಗಾಂಧೀಜಿಯ ಗುರಿಯಾಗಿತ್ತು: ಸಚಿವ ಸಿ.ಟಿ.ರವಿ

Update: 2019-10-10 13:53 GMT

ಬೆಂಗಳೂರು, ಅ.10: ಅಸ್ಪೃಶ್ಯತೆಯನ್ನು ಮಹಾತ್ಮ ಗಾಂಧೀ ಬಲವಾಗಿ ವಿರೋಧಿಸಿದ್ದರು. ಜಾತೀಯತೆಯನ್ನು ಸಂಪೂರ್ಣವಾಗಿ ತೊಡೆದುಹಾಕಬೇಕು ಎಂಬುದು ಗಾಂಧೀಜಿ ಅವರ ಗುರಿಯಾಗಿತ್ತು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಗುರುವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ‘ಗಾಂಧೀ-150 ಸಂಭ್ರಮಾಚರಣೆ ಮತ್ತು ಅವಲೋಕನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ ಬಂದು 70 ವರ್ಷಗಳಾದರೂ ನಾವು ಅವರ ತತ್ವಗಳನ್ನು ಅನುಸರಿಸದೆ ಅವನತಿಯತ್ತ ಸಾಗಿದ್ದೇವೆ. ಈ ದೇಶವನ್ನು ಪ್ರೀತಿಸುವವರು ಕೇವಲ ಭಾರತ ಮಾತಾ ಕಿ ಜೈ ಎಂದರೆ ಸಾಕಾಗುವುದಿಲ್ಲ. ಬದಲಿಗೆ, ಅಸ್ಪೃಶ್ಯತೆ ಮತ್ತು ಜಾತೀಯತೆಗೆ ನಮ್ಮ ಮನೆ ಮತ್ತು ಮನಸ್ಸಿನಲ್ಲಿ ಜಾಗವಿಲ್ಲ ಎಂದು ಸಂಕಲ್ಪ ಮಾಡಬೇಕು. ಸ್ವಚ್ಛತೆ ಕಾಪಾಡುವ ಮತ್ತು ಬೇರೊಬ್ಬರಿಗೆ ಹಾನಿಯಾಗದಂತಹ ಸುಳ್ಳುಗಳನ್ನು ಹೇಳದಿರುವ ಬಗ್ಗೆ ಗಾಂಧೀಜಿ ಅವರ ನೆನಪಿನಲ್ಲಿ ದೀಕ್ಷೆ ಮಾಡೋಣ ಎಂದು ಕರೆನೀಡಿದರು.

ನಾವು ಕೇವಲ ಭಾಷಣದ ಮೂಲಕ ಸಂದೇಶಗಳನ್ನು ನೀಡುತ್ತೇವೆ. ಆದರೆ, ಗಾಂಧೀಜಿ ಅವರ ರೀತಿ ‘ನನ್ನ ಜೀವನವೇ ನನ್ನ ಸಂದೇಶ’ ಎಂದು ಹೇಳುವ ಎದೆಗಾರಿಕೆ ನಮಗಾರಿಗೂ ಇಲ್ಲ. ಗಾಂಧೀ ಏನೂ ಅವತಾರ ಪುರುಷನಲ್ಲ. ಎಲ್ಲರಂತೆ ಹುಟ್ಟಿ, ಬೆಳೆದರು. ಅವರು ಬದುಕಿನ ದಾರಿಯಿಂದಾಗಿ ಮಹಾತ್ಮರಾದರು ಎಂದು ನುಡಿದರು.

ನಾವು ಮೋಹನದಾಸ ಕರಮಚಂದ ಗಾಂಧಿಯನ್ನು ದಕ್ಷಿಣ ಆಫ್ರಿಕಾಗೆ ಕಳುಹಿಸಿಕೊಟ್ಟೆವು. ಆದರೆ, ದಕ್ಷಿಣ ಆಫ್ರಿಕಾದವರು ಅವರನ್ನು ಮಹಾತ್ಮನನ್ನಾಗಿ ಮಾಡಿ ಭಾರತಕ್ಕೆ ವಾಪಸ್ ಕಳುಹಿಸಿದರು. ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳವಳಿ, ಚಲೇಜಾವ್ ಚಳವಳಿ ಸೇರಿದಂತೆ ಸ್ವಾತಂತ್ರ್ಯ ಚಳವಳಿಯನ್ನು ಜನಸಾಮಾನ್ಯರ ಹಂತಕ್ಕೆ ಕೊಂಡೊಯ್ದು ಜನಾಂದೋಲನವನ್ನಾಗಿ ರೂಪಿಸಿದ್ದಾರೆ ಎಂದು ತಿಳಿಸಿದರು.

ಕವಿ ಡಾ.ಸಿದ್ದಲಿಂಗಯ್ಯ ಮಾತನಾಡಿ, ಮಹಾತ್ಮ ಗಾಂಧೀ ದೇಶದಲ್ಲಿ ಮೊದಲ ಬಾರಿಗೆ ಸ್ವಚ್ಛತಾ ಆಂದೋಲನ ಪ್ರಾರಂಭಿಸಿದರು. ಆದರೆ, ಈಗಲೂ ದೇಶದಲ್ಲಿ ಬಯಲು ಶೌಚ ಪದ್ಧತಿ, ಮಲಹೊರುವ ಪದ್ಧತಿ, ಸಾಯಿ ಕರ್ಮಚಾರಿ ಪದ್ಧತಿಗಳು ಜಾರಿಯಲ್ಲಿರುವುದು ವಿಷಾದದ ಸಂಗತಿಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಜಾಫಟ್ ಮಾತನಾಡಿ, ಕೆಲವರು ಗಾಂಧೀ ಜಯಂತಿ ಆಚರಣೆ ಕುರಿತಂತೆ ಗೊಂದಲ ಸೃಷ್ಟಿಸಲು ಯತ್ನಿಸಿದರು. ಯಾವುದೇ ಕಾರಣಕ್ಕೂ ಗಾಂಧೀ ಜಯಂತಿಯನ್ನು ನಿಲ್ಲಿಸುವ ಉದ್ದೇಶವಿಲ್ಲ. ಗಾಂಧೀ, ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ಮಹಾನುಭಾವರ ಜಯಂತಿಗಳನ್ನು ವಿಶೇಷವಾಗಿ ಆಚರಣೆ ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು. ಬಾಕ್ಸ್

ಹಿಂದೆ ನಾವೆಲ್ಲಾ ಬೇರೆಯವರನ್ನು ಲೇವಡಿ ಮಾಡಲು ಗಾಂಧಿ ಹೆಸರನ್ನು ಬಳಸಿಕೊಳ್ಳುತ್ತಿದ್ದೆವು. ಆದರೆ, ಒಮ್ಮೆ ಗಾಂಧೀಜಿ ಅವರ ಕೃತಿಗಳನ್ನು ಓದಿದ ನಂತರ, ಸಂಪೂರ್ಣ ಬದಲಾದೆ. ಹೀಗಾಗಿ, ಭಾರತದ ಆತ್ಮವನ್ನು ಅರಿಯಬೇಕಾದರೆ ಮಹಾತ್ಮ ಗಾಂಧೀಜಿ ಅವರನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ, ಅರ್ಥೈಸಿಕೊಳ್ಳಬೇಕು.

-ಸಿ.ಟಿ.ರವಿ, ಪ್ರವಾಸೋದ್ಯಮ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News