ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ

Update: 2019-10-10 14:00 GMT

ಬೆಂಗಳೂರು, ಅ.10: ಇತ್ತೀಚೆಗೆ ಅಗಲಿದ ವಿಧಾನ ಪರಿಷತ್, ವಿಧಾನಸಭೆಯ ಮಾಜಿ ಸದಸ್ಯರು ಹಾಗೂ ಗಣ್ಯರಿಗೆ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಗುರುವಾರ ವಿಧಾನ ಪರಿಷತ್‌ನಲ್ಲಿ ಸಭಾಪತಿ ಕೆ.ಪ್ರತಾಪಚಂದ್ರಶೆಟ್ಟಿ ಹಾಗೂ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಕ ನಿರ್ಣಯ ಮಂಡಿಸಿ, ಮಾಜಿ ಸದಸ್ಯರಾದ ಪ್ರವೀಣ್‌ಚಂದ್ರ ಕಮಲಾನಿ, ಎ.ಕೆ. ಸುಬ್ಬಯ್ಯ, ವಿಧಾನಸಭೆಯ ಮಾಜಿ ಸದಸ್ಯ ಉಮೇಶ್ ಭಟ್, ಟಿ.ವೀರಭದ್ರಯ್ಯ, ಅರ್ಜುನ ರಾವ್ ಹಿಶೋಬಿಕರ್, ಕೇಂದ್ರದ ಮಾಜಿ ಸಚಿವರಾದ ಸುಷ್ಮಾಸ್ವರಾಜ್, ಅರುಣ್ ಜೇಟ್ಲಿ ಹಾಗೂ ರಾಮ್ ಜೇಠ್ಮಲಾನಿ ನಿಧನರಾಗಿದ್ದಾರೆ. ಅವರ ನಿಧನ ನಾಡಿಗೆ, ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಸಭಾಪತಿಗಳ ಮಾತಿಗೆ ದನಿಗೂಡಿಸಿದ ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ಎ.ಕೆ,ಸುಬ್ಬಯ್ಯ ಅವರು ಬಿಜೆಪಿ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಆಳುವ ಪಕ್ಷದ ವಿರುದ್ಧ ಚಾಟಿ ಬೀಸುತ್ತಿದ್ದರೆ, ಸಚಿವರ ಜಂಘಾಬಲವೇ ಉಡುಗಿ ಹೋಗುತ್ತಿತ್ತು. ಅವರ ನಿಧನದಿಂದ ಉತ್ತಮ ಸಂಸದೀಯ ಪಟುವನ್ನು ಕಳೆದುಕೊಂಡಂತಾಗಿದೆ ಎಂದರು.

ವಿದೇಶಾಂಗ ಸಚಿವೆಯಾಗಿ ಕೆಲಸ ಮಾಡಿದ ಸುಷ್ಮಾಸ್ವರಾಜ್, ಮಾತೃ ಹೃದಯಿಯಾಗಿದ್ದು, ಯಾವುದೇ ಸಮಸ್ಯೆಗೆ ಶೀಘ್ರ ಸ್ಪಂದಿಸುತ್ತಿದ್ದರು. ರಾಜ್ಯಕ್ಕೂ ಅವರಿಗೂ ಅವಿನಾಭಾವ ಸಂಬಂಧವಿತ್ತು. ಬಳ್ಳಾರಿಯೊಂದಿಗೆ ನಿಕಟ ಭಾಂದವ್ಯ ಇಟ್ಟುಕೊಂಡಿದ್ದರು. ಅದೇ ರೀತಿ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ, ನ್ಯಾಯವಾದಿಯಾಗಿಯೂ ಸೇವೆ ಸಲ್ಲಿಸಿದ್ದರು. ಯಾವುದೇ ಪ್ರಕರಣವನ್ನು ಗೆಲ್ಲುವ ತನಕ ಬಿಡುತ್ತಿರಲಿಲ್ಲ. ಈ ಗಣ್ಯರ ನಿಧನ ದೇಶಕ್ಕೆ ತುಂಬಲಾರದ ನಷ್ಟವೆಂದು ಸಂತಾಪ ಸೂಚಿಸಿದರು.

ಪ್ರತಿಪಕ್ಷದ ನಾಯಕ ಎಸ್.ಆರ್ ಪಾಟೀಲ್ ಮಾತನಾಡಿ, ಅನ್ಯಾಯದ ವಿರುದ್ಧ ಹರಿತ ನಾಲಿಗೆಯ ಸುಬ್ಬಯ್ಯ ಎಂದೇ ಎ.ಕೆ.ಸುಬ್ಬಯ್ಯ ಹೆಸರು ವಾಸಿಯಾಗಿದ್ದರು. ಸರಕಾರದ ವಿರುದ್ಧ ಅವರು ಮಾತನಾಡುತ್ತಿದ್ದರೆ ಮಂತ್ರಿಗಳೇ ಹೆದರುತ್ತಿದ್ದರು. ಅವರೊಬ್ಬ ಉತ್ತಮ ಸಂಸದೀಯ ಪಟುವಾಗಿದ್ದರು ಎಂದು ಮೃತರ ಬಗ್ಗೆ ಮೆಚ್ಚುಗೆಯ ಮಾತನಾಡಿದರು.

ಇದೇ ವೇಳೆ ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಲ್ಲಿ ಮೃತಪಟ್ಟ ರಾಜ್ಯದ ಹಲವು ಭಾಗಗಳ ಜನರಿಗೂ ಸಂತಾಪ ಸೂಚಿಸಲಾಯಿತು. ಬಳಿಕ ಮೃತರ ಗೌರವಾರ್ಥ ಒಂದು ನಿಮಿಷ ಮೌನ ಆಚರಿಸಲಾಯಿತು. ಈ ವೇಳೆ ಸಭಾಪತಿ ಕೆ.ಪ್ರತಾಪ ಚಂದ್ರಶೆಟ್ಟಿ, ಸದನದಲ್ಲಿ ಕೈಗೊಂಡ ಸಂತಾಪ ನಿರ್ಣಯವನ್ನು ಕುಟುಂಬದ ಸದಸ್ಯರಿಗೆ ತಲುಪಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News