ಸರಕಾರ ಸ್ಪಂದಿಸಿದರೆ ನಾಳೆಯೇ ಸತ್ಯಾಗ್ರಹ ವಾಪಸ್: ಹಿರಿಯ ರಂಗಕರ್ಮಿ ಪ್ರಸನ್ನ

Update: 2019-10-10 14:17 GMT

ಬೆಂಗಳೂರು, ಅ.10: ಪವಿತ್ರ ಆರ್ಥಿಕತೆಗಾಗಿ ಒತ್ತಾಯಿಸಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಸರಕಾರ ಪೂರಕವಾಗಿ ಸ್ಪಂದಿಸಿದರೆ ನಾಳೆಯೇ(ಅ.11) ಸತ್ಯಾಗ್ರಹವನ್ನು ಹಿಂಪಡೆಯಲಾಗುವುದು ಎಂದು ಹಿರಿಯ ರಂಗಕರ್ಮಿ ಪ್ರಸನ್ನ ತಿಳಿಸಿದ್ದಾರೆ.

ನಗರದ ವಲಭನಿಕೇತನದಲ್ಲಿ ಕಳೆದ 8ದಿನದಿಂದ ಪವಿತ್ರ ಆರ್ಥಿಕತೆಗಾಗಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಭೇಟಿ ನೀಡಿ, ಉಪವಾಸ ನಿರತರಾಗಿರುವ ರಂಗಕರ್ಮಿ ಪ್ರಸನ್ನರೊಂದಿಗೆ ಸಮಾಲೋಚನೆ ನಡೆಸಿದರು.

45 ದಿನಗಳೊಳಗೆ ರಾಜ್ಯ ಸರಕಾರವು, ಕೇಂದ್ರ ಸರಕಾರದ ಕೇಂದ್ರ ಕಾರ್ಯದರ್ಶಿಗಳ ಮಟ್ಟದ ಸಭೆಯೊಂದನ್ನು ಆಯೋಜಿಸಿ, ಸಮರ್ಥ ಆರ್ಥಿಕ ತಜ್ಞರ ಸಹಕಾರದೊಂದಿಗೆ ಸಮಾಲೋಚನೆ ನಡೆಸಲು ಒಪ್ಪಿಗೆ ಸೂಚಿಸಿದರೆ ನಾಳೆಯೇ ಉಪವಾಸ ಸತ್ಯಾಗ್ರಹ ಕೈಬಿಡುತ್ತೇನೆ ಎಂದು ಪ್ರಸನ್ನ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ, ಎಲ್ಲಾ ಕ್ಷೇತ್ರಗಳಲ್ಲೂ ಯಾಂತ್ರಿಕತೆ ಕಡಿಮೆ ಮಾಡುವ ಮತ್ತು ಮಾನವ ಶಕ್ತಿಯನ್ನು ಬಳಸಿಕೊಳ್ಳುವುದು ಒಮ್ಮೆಲೇ ಸಾಧ್ಯವಿಲ್ಲದಿದ್ದರೂ ಪ್ರಯತ್ನಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಶಾಸಕ ಬಿ.ಆರ್.ಪಾಟೀಲ್, ಜೆಡಿಯು ಮುಖಂಡ ಎಂ.ಪಿ.ನಾಡಗೌಡ, ಸಾಮಾಜಿಕ ಹೋರಾಟಗಾರರಾದ ನೂರ್ ಶ್ರೀಧರ್, ಮಲ್ಲಿಗೆ ಸಿರಿಮನೆ, ಇಂದಿರಾ ಕೃಷ್ಣಪ್ಪ, ಶ್ರೀಧರ್ ವಿ.ಎಸ್, ಪ್ರೊ.ನರಸಿಂಹಪ್ಪ, ವನಮಾಲಾ ವಿಶ್ವನಾಥ್, ಕಲಾವಿದ ಚಂದ್ರಶೇಖರ್, ನಿರ್ದೇಶಕ ಬಿ.ಸುರೇಶ್, ಕೆ.ಎಸ್.ವಿಮಲಾ, ಮೈಸೂರು ರಂಗಾಯಣ ಮಾಜಿ ನಿರ್ದೇಶಕಿ ಭಾಗೀರಥಿ ಬಾಯಿ ಕದಂ, ಗಾಂಧಿವಾದಿ ಶಿವರಾಜ್ ಸೇರಿದಂತೆ ವಿವಿಧ ವಲಯದ ಹಲವಾರು ಮುಖಂಡರು ಭಾಗವಹಿಸಿದ್ದರು. ಸತ್ಯಾಗ್ರಹಕ್ಕೆ ಬೆಂಬಲವಾಗಿ ಎಂ.ಡಿ.ಪಲ್ಲವಿ ಮತ್ತು ನಾದ ಮಣಿನಾಲ್ಕೂರು ಅವರಿಂದ ಮೂಲ ರಾಮಾಯಣದ ರಂಗ ಗಾಯನ ಮತ್ತು ವಾಚನ ನಡೆಯಿತು.

ಈಗಾಗಲೇ ವ್ಯವಸ್ಥಿತವಾಗಿ ಸಾಲ ಸೌಲಭ್ಯ, ಸಬ್ಸಿಡಿ ಮೂಲಕ ಕೈಮಗ್ಗಕ್ಕೆ ಸಹಾಯ ಮಾಡುತ್ತಾ ಇದ್ದೇವೆ. ಸ್ಥಳೀಯ ಸರಕಾರಗಳ ಮಟ್ಟದಲ್ಲಿ ಇದನ್ನೆಲ್ಲಾ ನಾವೇ ಮಾಡುತ್ತಾ ಇರುವುದರಿಂದ ಸತ್ಯಾಗ್ರಹವನ್ನು ಕೇಂದ್ರ ಸರಕಾರದವರೆಗೂ ಬೆಳಸುವ ಅಗತ್ಯವಿಲ್ಲ.

-ಅಶ್ವಥ್ ನಾರಾಯಣ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News