ಹ್ಯಾಕರ್ಸ್‌ಗಳಿಗೆ 70 ಲಕ್ಷ ರೂ. ಪಾವತಿಸಿದ ಝೊಮ್ಯಾಟೊ: ಕಾರಣವೇನು ಗೊತ್ತಾ?

Update: 2019-10-10 14:24 GMT

ಹೊಸದಿಲ್ಲಿ,ಅ.10: ತನ್ನ ಜಾಲತಾಣದಿಂದ ಗ್ರಾಹಕರ ಅಮೂಲ್ಯ ಮಾಹಿತಿ ಕಳವಾಗುವುದನ್ನು ತಡೆಯಲು ಆಹಾರ ಪೂರೈಕೆ ಜಾಲತಾಣ ಝೊಮ್ಯಾಟೊ ಈವರೆಗೆ 435 ಹ್ಯಾಕರ್ಸ್‌ಗಳಿಗೆ ರೂ. 70 ಲಕ್ಷ ರೂ.ಗೂ ಅಧಿಕ ಹಣ ಪಾವತಿಸಿದೆ ಎಂದು ಹ್ಯಾಕರ್‌ವನ್ ಎಂಬ ತಂಡ ಸುದ್ದಿ ಸಂಸ್ಥೆ ಐಎಎನ್‌ಎಸ್‌ಗೆ ತಿಳಿಸಿದೆ.

ಈ ಪೈಕಿ 8.7 ಲಕ್ಷ ರೂ.ವನ್ನು ಕಳೆದ 90 ದಿನಗಳಲ್ಲಿ ಪಾವತಿಸಲಾಗಿದೆ ಎಂದು ಅದು ತಿಳಿಸಿದೆ. ತನ್ನ ಬಗ್ ಬೌಂಟಿ ಪ್ರೋಗ್ರಾಮ್‌ನ ಸಹಾಯದಿಂದ ಝೊಮ್ಯಾಟೊ 2017 ಜುಲೈಯಿಂದ ಇಂತಹ 775 ಪ್ರಯತ್ನಗಳನ್ನು ಯಶಸ್ವಿಯಾಗಿ ನಿಯಂತ್ರಿಸಿದೆ ಎಂದು ಹ್ಯಾಕರ್‌ವನ್ ತಂಡ ತಿಳಿಸಿದೆ.

ತನ್ನ ಜಾಲತಾಣಕ್ಕೆ ಮಾಸಿಕ ಭೇಟಿ ನೀಡುವ 5.5 ಕೋಟಿ ವಿಶಿಷ್ಟ ಗ್ರಾಹಕರ ಸೂಕ್ಷ್ಮ ಮಾಹಿತಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ಝೊಮ್ಯಾಟೊ ಭದ್ರತಾ ತಂಡ ಹೊಂದಿದೆ ಎಂದು ತಂಡ ತಿಳಿಸಿದೆ.

ತನ್ನ ಜಾಲತಾಣದಲ್ಲಿದ್ದ ಗಂಭೀರ ದೋಷ (ಬಗ್) ವನ್ನು ಪತ್ತೆಹಚ್ಚಲು ಝೊಮ್ಯಾಟೊ ಭದ್ರತಾ ಸಂಶೋಧಕರಿಗೆ 1.42ಲಕ್ಷ ರೂ. ಮತ್ತು ಅತೀಹೆಚ್ಚು ಪರಿಣಾಮ ಬೀರುವ ದೋಷಗಳಿಗೆ 50,000ರೂ. ಪಾವತಿಸಿದೆ. 2017 ಮೇನಲ್ಲಿ ಝೊಮ್ಯಾಟೊ ಆಹಾರ ಪೂರೈಕೆ ಸೇವೆಗೆ ಕನ್ನ ಹಾಕಿದ ಹ್ಯಾಕರ್‌ಗಳು ಕಂಪೆನಿಯ ಸುಮಾರು 1.7 ಕೋಟಿ ನೋಂದಾಯಿತ ಬಳಕೆದಾರರ ಇಮೇಲ್ ವಿಳಾಸಗಳು ಮತ್ತು ಪಾಸ್‌ವರ್ಡ್‌ಗಳನ್ನು ಕಳವುಗೈದಿದ್ದರು. ಬಳಕೆದಾರರ ಪಾವತಿ ಕುರಿತ ಮಾಹಿತಿ ಅಥವಾ ಕ್ರೆಡಿಟ್ ಕಾರ್ಡ್ ದತ್ತಾಂಶವನ್ನು ಕಳವುಗೈಯ್ಯಲಾಗಿಲ್ಲ ಅಥವಾ ಸೋರಿಕೆಯಾಗಿಲ್ಲ. ತಾನು ಎಲ್ಲ ಭಾದಿತ ಬಳಕೆದಾರರ ಪಾಸ್‌ವರ್ಡನ್ನು ಮರುರಚಿಸಿದ್ದು ಅವರನ್ನು ಆ್ಯಪ್ ಮತ್ತು ಜಾಲತಾಣದಿಂದ ಲಾಗೌಟ್ ಮಾಡಲಾಗಿದೆ ಎಂದು ಝೊಮ್ಯಾಟೊ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News