ಸಚಿವ ಮಾಧುಸ್ವಾಮಿ ವಿರುದ್ಧ ವಿಪಕ್ಷ ಸದಸ್ಯರ ಆಕ್ರೋಶ

Update: 2019-10-10 14:30 GMT

ಬೆಂಗಳೂರು, ಅ.10: ಸದನ ಕಲಾಪ ಸಲಹಾ ಸಮಿತಿಯಲ್ಲಿ ಚರ್ಚೆ ನಡೆಸಿರುವಂತೆ ರಾಜ್ಯದಲ್ಲಿನ ನೆರೆ ಹಾವಳಿ, ಅತಿವೃಷ್ಟಿ ಇಂದು ಹಾಗೂ ನಾಳೆ(ಶುಕ್ರವಾರ) ಚರ್ಚೆ ನಡೆಯಲಿದ್ದು, ಭೋಜನ ವಿರಾಮದ ಮುನ್ನ ಚರ್ಚೆಗೆ ಸರಕಾರದ ಪರವಾಗಿ ಮುಖ್ಯಮಂತ್ರಿ ಉತ್ತರ ನೀಡಲಿದ್ದಾರೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಗುರುವಾರ ವಿಧಾನಸಭೆ ಕಲಾಪ ಭೋಜನ ವಿರಾಮದ ಬಳಿಕ ಆರಂಭಗೊಂಡ ತಕ್ಷಣ ಮಾತನಾಡಿದ ಅವರು, ಶುಕ್ರವಾರ ಮಧ್ಯಾಹ್ನದ ಬಳಿಕ ವಿತ್ತೀಯ ಕಾರ್ಯಕಲಾಪಗಳು ನಡೆಯಲಿವೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ಎಂ.ಬಿ.ಪಾಟೀಲ್, 100 ವರ್ಷಗಳ ನಂತರ ಸಂಭವಿಸಿದ ಭೀಕರ ಪ್ರವಾಹ ಇದಾಗಿದೆ. ಕೇವಲ ಒಂದು ದಿನದಲ್ಲಿ ಈ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸಾಧ್ಯವೇ? ಕನಿಷ್ಠ ಒಂದು ವಾರ ಅಧಿವೇಶವನ್ನು ವಿಸ್ತರಿಸಿ, ಆ ಭಾಗದ ಶಾಸಕರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶವಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಚರ್ಚೆ ನಡೆಸಲು ನಿಮಗೆ ಅವಕಾಶ ನೀಡಲಾಗಿದೆ. ಚರ್ಚೆ ಮಾಡಿ ನಾವು ನಿಮಗೆ ಬೇಡ ಎಂದಿಲ್ಲ ಎಂದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು, ಮಾಧುಸ್ವಾಮಿ ವಿರುದ್ಧ ತಿರುಗಿಬಿದ್ದರು. 

ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಮಾತನಾಡಿ, ಈ ಸದನ ನಿಮ್ಮ ಸ್ವತ್ತಲ್ಲ. ಪ್ರತಿಯೊಂದು ನೀವು ಹೇಳಿದ ಹಾಗೆಯೇ ನಡೆಯಬೇಕೆಂದಿಲ್ಲ. 38 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಕನಿಷ್ಠ 10 ದಿನಗಳ ಕಾಲ ಈ ಬಗ್ಗೆ ಚರ್ಚೆಯಾಗಲಿ. 7 ಲಕ್ಷ ಜನ ಬೀದಿ ಪಾಲಾಗಿದ್ದಾರೆ. ಇದೇ ಪರಿಸ್ಥಿತಿ ನಿಮ್ಮ ತುಮಕೂರು ಜಿಲ್ಲೆಯಲ್ಲಿ ಆಗಿದ್ದರೆ ಸುಮ್ಮನೆ ಇರುತ್ತಿದ್ರಾ ಎಂದು ಕಿಡಿಗಾರಿದರು.

ನೆರೆ ಸಂತ್ರಸ್ತರ ಬಗ್ಗೆ ಸಚಿವರು, ಶಾಸಕರು, ಸಂಸದರು ನೀಡಿರುವ ಹಗುರವಾದ ಹೇಳಿಕೆಗಳನ್ನು ನಾವು ಗಮನಿಸಿದ್ದೇವೆ. ಸರಕಾರ ನೆರೆ ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಯಾವ ರೀತಿಯಲ್ಲಿ ವಿಫಲವಾಗಿದೆ ಎಂಬುದರ ಬಗ್ಗೆ ನಾವು ಬೆಳಕು ಚೆಲ್ಲಬೇಕಲ್ಲವೇ. ಆದುದರಿಂದ, ಅಧಿವೇಶನವನ್ನು ವಿಸ್ತರಿಸಿ ಎಂದು ಎಂ.ಬಿ.ಪಾಟೀಲ್ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News