ಮರಗಳ ಗಣತಿಯನ್ನು ತಿಂಗಳೊಳಗಾಗಿ ಪ್ರಾರಂಭಿಸಿ: ಹೈಕೋರ್ಟ್

Update: 2019-10-10 15:53 GMT

ಬೆಂಗಳೂರು, ಅ.10: ನಗರದಲ್ಲಿನ ಮರಗಳ ಗಣತಿಯನ್ನು ಒಂದು ತಿಂಗಳೊಳಗಾಗಿ ಪ್ರಾರಂಭಿಸಬೇಕೆಂದು ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶಿಸಿದೆ. ಈ ಕುರಿತು ಮರಗಳ ರಕ್ಷಣೆಗೆ ಸಂಬಂಧಿಸಿದಂತೆ ದತ್ತಾತ್ರೇಯ ಟಿ. ದೇವರೆ ಮತ್ತು ಬೆಂಗಳೂರು ಪರಿಸರ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಬಿಬಿಎಂಪಿ ಪರ ವಾದಿಸಿದ ವಕೀಲರು, ಐಡಬ್ಲೂಎಸ್‌ಟಿ ಅವರು ಒಂದು ತಿಂಗಳಲ್ಲಿ ಮರಗಳ ಗಣತಿಯನ್ನು ಪ್ರಾರಂಭಿಸಲಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಮರಗಳ ಗಣತಿ ಕುರಿತಂತೆ 2019ರ ಆ.20ರಂದು ನಿರ್ದೇಶನ ನೀಡಲಾಗಿತ್ತು. ಆದರೆ, ನೀವುಗಳು ಇಲ್ಲಿಯವರೆಗೆ ಮರಗಳ ಗಣತಿಯನ್ನು ಪ್ರಾರಂಭಿಸಲಿಲ್ಲ ಏಕೆ ಎಂದು ಬಿಬಿಎಂಪಿ ವಿರುದ್ಧ ಕಿಡಿಕಾರಿತು. ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ 1976 ಜಾರಿಗೆ ಬಂದು 43 ವರ್ಷಗಳು ಕಳೆದರೂ ಮರಗಳ ಕಡಿಯುವುದರಲ್ಲಿ ಯಾವುದೇ ನಿಯಂತ್ರಣವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು. ಹಾಗೂ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News