ಆಧುನೀಕರಣದಿಂದ ಅಂಚೆ-ಸಾರ್ವಜನಿಕರ ನಡುವೆ ಹೆಚ್ಚಿದ ಅಂತರ: ಇಂದಿರಾ ಕೃಷ್ಣಪ್ಪ

Update: 2019-10-10 16:09 GMT

ಬೆಂಗಳೂರು, ಅ.10: ಆಧುನೀಕರಣದ ಪ್ರಭಾವದಿಂದಾಗಿ ಅಂಚೆ ಹಾಗೂ ಸಾರ್ವಜನಿಕರ ನಡುವಿನ ಸಂಬಂಧ ಕಳೆದು ಹೋಗುತ್ತಿದೆ ಎಂದು ಗಾಂಧಿ ಸ್ಮಾರಕ ನಿಧಿ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಗಾಂಧಿಭವನದಲ್ಲಿ ಕರ್ನಾಟಕ ಅಂಚೆ ನೌಕರರ ಸಾಹಿತ್ಯ ಬಳಗ, ಗಾಂಧಿ ಸ್ಮಾರಕ ನಿಧಿ, ಸುಮಂಗಲಿ ಸೇವಾಶ್ರಮ ಸಹಯೋಗದಲ್ಲಿ ಆಯೋಜಿಸಿದ್ದ ‘ವಿಶ್ವ ಅಂಚೆ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಪ್ರಥಮ ಅಂಚೆ ನೌಕರರ ಸಾಹಿತ್ಯ ಸಮ್ಮೇಳನ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಡಿಜಿಟಲೀಕರಣದ ಪ್ರಭಾವದಿಂದ, ಆಧುನಿಕ ಯುಗದಲ್ಲಿ ಜನರಿಗೆ ತ್ವರಿತವಾಗಿ ಎಲ್ಲವೂ ಸಿಗುತ್ತಿವೆ. ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದು, ಅಂಚೆ ಇಲಾಖೆಯು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಅಂಚೆ ಇಲಾಖೆಯು ಹೊಸತನವನ್ನು ಅಳವಡಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ ಎಂದು ನುಡಿದರು.

ಮನುಷ್ಯನಿಗೆ ವೃತ್ತಿಯೊಂದೇ ಬದುಕು ಅಲ್ಲ. ತಮ್ಮ ಬದುಕಿನಲ್ಲಿ ಎಲ್ಲವೂ ಒಳಗೊಂಡಿರಬೇಕು. ಅದು ಅವರಿಗೆ ಹೆಚ್ಚು ಗೌರವನ್ನು ತಂದುಕೊಡುತ್ತದೆ. ವೃತ್ತಿಯ ಜತೆಗೆ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಇಂದಿರಾ ಕೃಷ್ಣಪ್ಪ ಸಲಹೆ ನೀಡಿದರು.

ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವಂತಹ ನೌಕರರು ಕೇವಲ ದುಡಿಮೆಗೆ ಸೀಮಿತವಾಗದೇ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ಸಂತಸದ ಸಂಗತಿ. ಆ ಮೂಲಕ ತಮ್ಮಲ್ಲಿರುವ ನೋವು, ನಲಿವು, ದುಃಖ, ದುಮ್ಮಾನ, ಸಂತೋಷ, ಅತೃಪ್ತಿ ಎಲ್ಲವನ್ನೂ ಹೊರ ಹಾಕಲು ಸಾಧ್ಯವಾಗುತ್ತದೆ. ಅದು ಮತ್ತಷ್ಟು ಜನರನ್ನು ಜಾಗೃತಿಗೊಳಿಸುತ್ತದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್ ಮಾತನಾಡಿ, ಚಿಕ್ಕದಾಗಿ ಪ್ರಾರಂಭವಾದ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಅಖಿಲ ಮಟ್ಟದಲ್ಲಿ ನಡೆಯುತ್ತದೆ. ಅದೇ ರೀತಿ ಅಂಚೆ ನೌಕರರ ಸಾಹಿತ್ಯ ಸಮ್ಮೇಳನವು ನಡೆಯುತ್ತಿದೆ. ಮುಂದೊಂದು ದಿನ ಇದು ಬೃಹತ್ ಮಟ್ಟದಲ್ಲಿ ಬೆಳೆಯಲಿದೆ ಎಂದರು.

ಮುಂದಿನ ವರ್ಷದಿಂದ ಇಂತಹ ಸಾಹಿತ್ಯ ಸಮ್ಮೇಳನಗಳನ್ನು ಉತ್ತೇಜಿಸುವ ಉದ್ದೇಶದಿಂದ ಇಲಾಖೆಯೇ ತನ್ನ ನಿಧಿಯಿಂದ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಬೇಕಿದೆ. ಆಗಷ್ಟೇ ಕಲೆ, ಸಾಹಿತ್ಯ, ಸಂಸ್ಕೃತಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಅವರು ನುಡಿದರು.

ಪ್ರಧಾನ ಪೋಸ್ಟ್ ಮಾಸ್ಟರ್ ಜನರಲ್ ಚಾರ್ಲ್ಸ್ ಲೋಬೋ ಮಾತನಾಡಿ, ಕನ್ನಡ ಅಂಚೆ ನೌಕರರು ಮಾತ್ರವಲ್ಲ ಎಲ್ಲ ಭಾಷೆಗಳ ಅಂಚೆ ನೌಕರರು ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ಅನೇಕರು ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ ಎಂದು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಸಣ್ಣನಾಯಕ್, ಪೋಸ್ಟ್ ನಾರಾಯಣಸ್ವಾಮಿ, ಅಂಚೆ ಬಳೆ ಸೀತಾರಾಮಯ್ಯ, ಎನ್.ಶ್ರೀದೇವಿ, ಕೆ.ಕೆ.ಗಂಗಾಧರ್ ಅವರಿಗೆ ಅಂಚೆರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಂಚೆ ನಂಟು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಸುಮಂಗಲಿ ಸೇವಾಶ್ರಮ ಕಾರ್ಯದರ್ಶಿ ಎಸ್.ಜಿ.ಸುಶೀಲಮ್ಮ, ಸಾಹಿತಿ ಎಂ.ಎಸ್.ನರಸಿಂಹಮೂರ್ತಿ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News