ಮನೆ ನಿರ್ಮಾಣಕ್ಕೆ ಕನಿಷ್ಠ 10 ಲಕ್ಷ ರೂ.ಪರಿಹಾರ ಒದಗಿಸಿ: ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್

Update: 2019-10-10 16:31 GMT

ಬೆಂಗಳೂರು, ಅ.10: ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲು 5 ಲಕ್ಷ ರೂ.ಬದಲಿಗೆ ಕನಿಷ್ಠ 10 ಲಕ್ಷ ರೂ.ನೆರವು ನೀಡಬೇಕೆಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಒತ್ತಾಯಿಸಿದ್ದಾರೆ. 

ಗುರುವಾರ ವಿಧಾನ ಪರಿಷತ್‌ನಲ್ಲಿ ನಿಯಮ 68ರಡಿಯಲ್ಲಿ ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರವಾಹದಿಂದಾಗಿ ಉತ್ತರ ಕರ್ನಾಟಕ ಸೇರಿ ಇತರೆ ಜಿಲ್ಲೆಗಳ ಜನರು ಮನೆ, ಬೆಳೆದ ಬೆಳೆ, ಕೃಷಿ ಸಾಮಗ್ರಿ ಸೇರಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಒಂದು ಅಂದಾಜಿನ ಪ್ರಕಾರ 1 ಲಕ್ಷ ಕೋಟಿ ರೂ.ರಾಜ್ಯದಲ್ಲಿ ನಷ್ಟವುಂಟಾಗಿದೆ. ಹೀಗಾಗಿ, ಮನೆ ನಿರ್ಮಾಣಕ್ಕೆ 10 ಲಕ್ಷ ರೂ.ನೀಡಬೇಕು. ರೈತರ ಸಾಲ, ಸಣ್ಣ ಪುಟ್ಟ ವ್ಯಾಪಾರಸ್ಥರ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ರೈತರು ಒಂದು ಎಕರೆ ಜಮೀನಿನಲ್ಲಿ ಕಬ್ಬು ಬೆಳೆದರೆ ಒಂದು ಲಕ್ಷ ರೂ.ಆದಾಯವನ್ನು ತೆಗೆಯುತ್ತಿದ್ದರು. ಈ ಬಾರಿ ಕಬ್ಬು ಬೆಳೆ ನಷ್ಟವುಂಟಾಗಿದ್ದರಿಂದ ಒಂದು ಎಕರೆಗೆ ಕನಿಷ್ಠ 50 ಸಾವಿರ ಪರಿಹಾರ ನೀಡಬೇಕು. ಇಲ್ಲವೇ 1 ಲಕ್ಷ ರೂ.ಪರಿಹಾರವನ್ನು ನೀಡಿಯಾದರೂ ರೈತರಿಗೆ ಆರ್ಥಿಕ ಶಕ್ತಿಯನ್ನು ತುಂಬಬೇಕು. ಪ್ರವಾಹ ಬಂದಂತಹ ಸಂದರ್ಭದಲ್ಲಿ ಎನ್‌ಡಿಆರ್‌ಎಫ್ ಪರಿಹಾರವನ್ನು ನೀಡುತ್ತದೆ. ಆದರೆ, ಆ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ. ಈ ಎನ್‌ಡಿಆರ್‌ಎಫ್ ಕೂಡ ಹಳೆಯ ಪದ್ಧತಿಯದಾಗಿದ್ದು, ಇದನ್ನು ಸುಧಾರಿಸುವ ಅವಶ್ಯಕತೆ ಇದೆ ಎಂದು ಹೇಳಿದರು. ಒಂದೆ ಶೆಡ್‌ನಲ್ಲಿ 400 ಕುಟುಂಬಗಳು ವಾಸಿಸಬೇಕೆಂದರೆ ತುಂಬಾ ಕಷ್ಟವಾಗುತ್ತದೆ. ಮಹಿಳೆಯರು, ಮಕ್ಕಳು, ವೃದ್ಧರಿಗೆ ಶೌಚಾಲಯಕ್ಕೆ, ಸ್ನಾನದ ಗೃಹಗಳಿಗೆ ಹೋಗಲು ತುಂಬಾ ಕಷ್ಟವಾಗುತ್ತದೆ. ಈ ಕೂಡಲೇ ರಾಜ್ಯ ಸರಕಾರ ತಾತ್ಕಾಲಿಕವಾಗಿ ಒಂದು ಕುಟುಂಬಕ್ಕೆ ಒಂದು ಶೆಡ್‌ನ್ನು ನಿರ್ಮಿಸಿಕೊಡಬೇಕು. ಪ್ರವಾಹಕ್ಕೆ ಸಿಲುಕಿದವರನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಉತ್ತಮವಾಗಿ ಗೌರವಯುತವಾಗಿ ಬದುಕಲು ಮನೆಗಳನ್ನು ನಿರ್ಮಾಣ ಮಾಡಿಕೊಡಬೇಕು. ಆಲಮಟ್ಟಿ ಎತ್ತರವನ್ನು ಎತ್ತರಿಸಿ ರೈತರ ಜಮೀನಿಗೆ ನೀರಾವರಿ ಕಲ್ಪಿಸಿಕೊಡಬೇಕೆಂದು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಂದ್ರಯಾನ 2 ವೀಕ್ಷಣೆಗೆ ಬಂದಾಗ ಪ್ರವಾಹ ಪೀಡಿತ ಜಿಲ್ಲೆಗಳಿಗೂ ಬಂದು ಜನರಲ್ಲಿ ಆತ್ಮಸ್ಥೈರ್ಯವನ್ನು ತುಂಬುತ್ತಾರೆ ಎಂದುಕೊಂಡಿದ್ದೆವು. ಆದರೆ, ಮೋದಿ ಅವರು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಬರದೇ ಹೋದರು. ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅವರು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಬಂದರೂ ಯಾವುದೇ ಪರಿಹಾರದ ಘೋಷಣೆಯನ್ನು ಮಾಡದೆ ಹಾಗೆಯೇ ವಾಪಸ್ ಹೋದರು ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕದ ಜನರು ಬೆಳಗಾವಿಯ ಸುವರ್ಣಸೌಧದ ಮುಂದೆ ಧರಣಿ, ಪ್ರತಿಭಟನೆ ನಡೆಸುತ್ತಾರೆ ಎಂಬ ವಿಚಾರ ಗೊತ್ತಿದ್ದರೂ ನಾವು ಅಲ್ಲಿಯೇ ಅಧಿವೇಶನವನ್ನು ಮಾಡಿ ಅಲ್ಲಿಯ ಜನರ ಆತ್ಮಸ್ಥೈರ್ಯವನ್ನು ತುಂಬಲು ಪ್ರಯತ್ನಿಸಿದೆವು. ಆದರೆ, ರಾಜ್ಯದಲ್ಲಿ ಪ್ರಸ್ತುತ ಆಡಳಿತದಲ್ಲಿ ಇರುವ ಬಿಜೆಪಿ ಸರಕಾರ ಬೆಳಗಾವಿಯಲ್ಲಿ ಅಧಿವೇಶನವನ್ನು ಕರೆಯದೇ ಬೆಂಗಳೂರಿನಲ್ಲಿ ಕೇವಲ 3 ದಿನ ಅಧಿವೇಶನವನ್ನು ಕರೆದಿದ್ದಾರೆ. ಈ 3 ದಿನದ ಅಧಿವೇಶನ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಾಕಾಗುವುದಿಲ್ಲ. ಹೀಗಾಗಿ, ಗರಿಷ್ಠ 30 ದಿನ, ಕನಿಷ್ಠ 15 ದಿನವಾದರೂ ಅಧಿವೇಶನ ನಡೆಯಬೇಕು.

-ಎಸ್.ಆರ್.ಪಾಟೀಲ್, ಪ್ರತಿಪಕ್ಷದ ನಾಯಕ, ವಿಧಾನ ಪರಿಷತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News