ಮಾಮಲ್ಲಪುರಂ ಬೀಚ್ ನಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡ ಪ್ರಧಾನಿ ಮೋದಿ

Update: 2019-10-12 05:59 GMT

ಚೆನ್ನೈ: ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜತೆ ಅನೌಪಚಾರಿಕ ಭೇಟಿಗಾಗಿ ಮಾಮಲ್ಲಪುರಂನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಜಿನ್ ಪಿಂಗ್ ಜತೆಗೆ ಎರಡನೇ ಸುತ್ತಿನ ಮಾತುಕತೆಗೂ ಮುನ್ನ ಮಾಮಲ್ಲಪುರಂ ಬೀಚಿನಲ್ಲಿ ಸುಮಾರು 30 ನಿಮಿಷಗಳ ಕಾಲ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು.

ಟ್ವಿಟ್ಟರ್ ನಲ್ಲಿ ಈ ಕುರಿತಂತೆ ಕಿರು ವೀಡಿಯೋವನ್ನು ಪ್ರಧಾನಿ ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ಪ್ರಧಾನಿ ಬೀಚ್ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಾಟಲಿ, ಪ್ಲೇಟ್ ಮತ್ತಿತರ ತ್ಯಾಜ್ಯವನ್ನು ಹೆಕ್ಕಿ ಒಂದು ಚೀಲದೊಳಗೆ ಹಾಕುತ್ತಿರುವುದು ಕಾಣಿಸುತ್ತದೆ. ತಾವು ತಂಗಿರುವ ಮಾಮಲ್ಲಪುರಂನ ತಾಜ್ ಫಿಶರ್‍ಮೆನ್ಸ್ ಕೋವ್ ರಿಸಾರ್ಟ್ ಎಂಡ್ ಸ್ಪಾ ಹತ್ತಿರದ ಬೀಚ್ ನಲ್ಲಿ ಕಪ್ಪು ಬಣ್ಣದ ಕುರ್ತಾ-ಪೈಜಾಮ ಧರಿಸಿದ ಪ್ರಧಾನಿ ತಮ್ಮ ಮುಂಜಾನೆಯ ವಾಕಿಂಗ್ ವೇಳೆ ಈ ಸ್ವಚ್ಛತಾ ಕಾರ್ಯ ಕೈಗೊಂಡರು.

'ಪ್ಲಾಗಿಂಗ್ ಎಟ್ ಎ ಬೀಚ್ ಇನ್ ಮಾಮಲ್ಲಪುರಂ ದಿಸ್ ಮಾರ್ನಿಂಗ್. ಇಟ್ ಲಾಸ್ಟೆಡ್ ಫಾರ್ ಓವರ್ 30 ಮಿನಿಟ್ಸ್,'' ಎಂದು ತಮ್ಮ ವೀಡಿಯೋ ಜತೆ ಪ್ರಧಾನಿ ಬರೆದಿದ್ದಾರೆ.

"ನಮ್ಮ ಸಾರ್ವಜನಿಕ ಸ್ಥಳಗಳು ಸ್ವಚ್ಛ ಹಾಗೂ ಅಂದವಾಗಿರುವಂತೆ ನೋಡಿಕೊಳ್ಳೋಣ" ಎಂದೂ ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಬೀಚ್ ನಲ್ಲಿ ತಾವು ಬೆಳಗ್ಗಿನ ವಾಕಿಂಗ್ ಮಾಡುವ ಹಲವು ಚಿತ್ರಗಳನ್ನೂ ಪ್ರಧಾನಿ ಪೋಸ್ಟ್ ಮಾಡಿದ್ದಾರೆ. ''ಮಾಮಲ್ಲಪುರಂನ ಸುಂದರ ಕರಾವಳಿಯಲ್ಲಿ ಉಲ್ಲಾಸಮಯ ವಾಕಿಂಗ್ ಮತ್ತು ವ್ಯಾಯಾಮಗಳು'' ಎಂದೂ ಅವರು ತಮ್ಮ ವಾಕಿಂಗ್ ಅನ್ನು ವರ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News