ಐಟಿ ದಾಳಿ ನಂತರ ಡಾ.ಜಿ.ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆ

Update: 2019-10-12 16:33 GMT

ಬೆಂಗಳೂರು, ಅ.12: ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ನಿವಾಸ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ನಡೆದ ಐಟಿ ದಾಳಿ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದ್ದು, ಅವರ ಆಪ್ತ ಸಹಾಯಕ ರಮೇಶ್, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲತಃ ರಾಮನಗರ ಜಿಲ್ಲೆಯ ರಮೇಶ್(40), ಕೆಂಗೇರಿ ವ್ಯಾಪ್ತಿಯ ಉಲ್ಲಾಳ ರಸ್ತೆಯ ಅಮ್ಮ ಆಶ್ರಮದ ಬಳಿಯ ನಿವಾಸದಲ್ಲಿ ವಾಸವಾಗಿದ್ದರು. ಅ.10ರಂದು ಪರಮೇಶ್ವರ್ ಅವರ ನಿವಾಸ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ರಮೇಶ್ ಅವರನ್ನು ವಿಚಾರಣೆ ನಡೆಸಿದ್ದರು. ಇದರಿಂದ ಗಾಬರಿಗೊಂಡ ಅವರು, ಶನಿವಾರ ಮುಂಜಾನೆ ಜ್ಞಾನಭಾರತಿ ವಿಶ್ವವಿದ್ಯಾಲಯದ ಆವರಣದಲ್ಲಿನ ಸಾಯಿ ಗ್ರೌಂಡ್ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಕಳೆದ ಎಂಟು ವರ್ಷಗಳಿಂದ ಪರಮೇಶ್ವರ್ ಅವರ ಸಹಾಯಕನಾಗಿ ರಮೇಶ್ ಕೆಲಸ ಮಾಡುತ್ತಿದ್ದರು. ಈ ಹಿಂದೆಯೂ ರಮೇಶ್ ಕೆಪಿಸಿಸಿ ಕಚೇರಿಯಲ್ಲಿ ಬೆರಳಚ್ಚು ಗಾರನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ಆಪ್ತರ ಬಳಿ ಅಳಲು: ಆತ್ಮಹತ್ಯೆಗೂ ಮುನ್ನ, ತನ್ನ ಸ್ನೇಹಿತರೊಂದಿಗೆ ಮೊಬೈಲ್ ಕರೆ ಮೂಲಕ ಮಾತನಾಡಿದ್ದ ರಮೇಶ್, ನಾನು ಬಡವ. ಹೀಗಿದ್ದರೂ ಅಧಿಕಾರಿಗಳು ನನ್ನ ಮನೆ ಮೇಲೆ ಐಟಿ ದಾಳಿ ನಡೆಸಿದ್ದಾರೆ. ನನಗೆ ಐಟಿ ವಿಚಾರಣೆ ಎದುರಿಸುವುದಕ್ಕೆ ಆಗುವುದಿಲ್ಲ. ಅವರ ಪ್ರಶ್ನೆಗಳಿಗೆ ಉತ್ತರಿಸಲು ಆಗುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದ ಎಂದು ಹೇಳಲಾಗುತ್ತಿದೆ.

ಡೆತ್‌ನೋಟ್ ಪತ್ತೆ: ಆತ್ಮಹತ್ಯೆಗೆ ಮುನ್ನ ಡೆತ್‌ನೋಟ್ ಬರೆದಿರುವ ಅವರು, ನಾನು ಆತ್ಮಹತ್ಯೆಗೆ ಶರಣಾಗಿದ್ದೇನೆ. ನನ್ನ ಪತ್ನಿ, ಮಕ್ಕಳಿಗೆ ಕಿರುಕುಳ ನೀಡಬೇಡಿ. ನನ್ನ ಮನೆಯಲ್ಲಿ ನಡೆದ ಐಟಿ ದಾಳಿಯಿಂದ ನಾನು ಹೆದರಿದ್ದೇನೆ. ಬಡವರು ಬಡವರಾಗಿಯೇ ಉಳಿಯಬೇಕೆಂಬ ಸಂಸ್ಕೃತಿಯಿಂದ ತುಂಬಾ ಬೇಜಾರಾಗಿದ್ದೇನೆ ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಆಕ್ರಂದನ: ಮೃತ ದೇಹದ ಬಳಿ ಜಮಾಯಿಸಿದ ರಮೇಶ್ ಸ್ನೇಹಿತರು, ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್, ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ಎಂ.ಕೃಷ್ಣಪ್ಪ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.

ಪರಮೇಶ್ವರ್ ಅವರ ನಿವಾಸ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದ ಬೆನ್ನಲ್ಲೇ ರಮೇಶ್ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

‘ಐಟಿ ಕಿರುಕುಳಕ್ಕೆ ಆತ್ಮಹತ್ಯೆ’

ರಮೇಶ್ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ. ಆತ ಯಾರಿಂದ ಯಾವುದೇ ಹಣ ಪಡೆದಿಲ್ಲ. ಆದರೂ, ಐಟಿ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ. ಹೀಗಾಗಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ರಮೇಶ್ ಸಹೋದರ ಸತೀಶ್ ಗಂಭೀರ ಆರೋಪ ಮಾಡಿದರು.

‘ನನ್ನ ಮಾರ್ಯದೆ ವಿಷಯ’

ಐಟಿ ದಾಳಿಯ ನಂತರ, ರಮೇಶ್ ಅವರು ನೊಂದಿದ್ದರು. ಇದು ನನ್ನ ಮರ್ಯಾದೆಯ ವಿಷಯವಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದರು.

-ಸೌಮ್ಯಾ, ರಮೇಶ್ ಪತ್ನಿ

ನಾಳೆ ಅಂತ್ಯ ಸಂಸ್ಕಾರ

ರಾಮನಗರದ ಮೇಳಹಳ್ಳಿಯಲ್ಲಿ ರವಿವಾರ(ಅ.13) ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News