ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುವುದಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-10-12 11:31 GMT

ಬೆಂಗಳೂರು, ಅ. 12: ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ಸದಸ್ಯರೆಂಬ ಭೇದ-ಭಾವ ಮಾಡುವುದಿಲ್ಲ. ಎಲ್ಲ ಕ್ಷೇತ್ರಗಳ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಶನಿವಾರ ವಿಧಾನಸಭೆಯಲ್ಲಿ 2019-20ನೆ ಸಾಲಿನ ಅನುದಾನ ಬೇಡಿಕೆಗಳ ಮೇಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಆಡಳಿತ-ವಿಪಕ್ಷ ಎಂಬ ಭೇದವಿಲ್ಲದೆ ಎಲ್ಲರಿಗೂ ಸರಿ ಸಮಾನವಾಗಿ ಅನುದಾನ ನೀಡುತ್ತೇವೆ. ಏನಾದರೂ ವ್ಯತ್ಯಾಸಗಳಿದ್ದರೆ ಸರಿಪಡಿಸುತ್ತೇನೆ, ನನ್ನ ಮೇಲೆ ವಿಶ್ವಾಸವಿಡಿ ಎಂದು ಮನವಿ ಮಾಡಿದರು.

ಯಾವುದೇ ಪಕ್ಷದ ಶಾಸಕರಿಗೆ ಈ ಬಗ್ಗೆ ಆತಂಕ ಬೇಡ. ಸಿಎಂ ಆಗಿ ಎಲ್ಲರಿಗೂ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಯಾವುದೇ ಕ್ಷೇತ್ರಕ್ಕೆ ಅನುದಾನ ಹೆಚ್ಚಾಗಿ ನೀಡಿದ್ದರೆ ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದು ಯಡಿಯೂರಪ್ಪ, ಶಾಸಕರಿಗೆ ಅಭಯ ನೀಡಿದರು.

ಬೇರೆ-ಬೇರೆ ಕಾರಣಕ್ಕೆ ತಾತ್ಕಾಲಿಕವಾಗಿ ಕೆಲವು ಕ್ಷೇತ್ರಗಳಿಗೆ ಅನುದಾನ ತಡೆ ಹಿಡಿಯಲಾಗಿದ್ದು, ಅದನ್ನು ಸರಿಪಡಿಸಲು ಸಮಯ ಬೇಕಾಗುತ್ತದೆ. ವಿಪಕ್ಷ ನಾಯಕರ ಜತೆ ಸಮಾಲೋಚನೆ ನಡೆಸಿ ಅದನ್ನು ಸರಿಪಡಿಸುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.

ಪ್ರಗತಿಯಲ್ಲಿರುವ ಹಲವು ಕಾಮಗಾರಿಗಳನ್ನು ಸ್ಥಗಿತಗೊಳಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು. ಇದರಿಂದ ಕೆರಳಿದ ಬಿಎಸ್‌ವೈ, ನಿಮ್ಮ ಸರಕಾರ ಆಡಳಿತದಲ್ಲಿದ್ದ ವೇಳೆ ಎಷ್ಟು ಅನುದಾನ ಪಡೆದಿದ್ದೀರೆಂದು ನಾನು ಹೇಳಲೇ ಎಂದು ತಿರುಗೇಟು ನೀಡಿದರು.

ಜಟಾಪಟಿ: ‘ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಕಳೆದ ವರ್ಷ ನಯಾಪೈಸೆ ಅನುದಾನ ನೀಡಿಲ್ಲ. ಬಿಟಿಎಂ ಲೇಔಟ್ ಕ್ಷೇತ್ರಕ್ಕೆ 860 ಕೋಟಿ ರೂ.ಅನುದಾನ ನೀಡಿದ್ದು, ಬಿಜೆಪಿ ಸದಸ್ಯರ ಕ್ಷೇತ್ರಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಬಿಜೆಪಿ ಸದಸ್ಯ ಸತೀಶ್ ರೆಡ್ಡಿ ಆರೋಪಿಸಿದರು.

ಇದರಿಂದ ಕೆರಳಿದ ರಾಮಲಿಂಗಾರೆಡ್ಡಿ, ‘ನಿಮ್ಮ ಅವಧಿಯಲ್ಲಿ ನಮ್ಮ ಕ್ಷೇತ್ರಕ್ಕೆ ಅನುದಾನ ನೀಡಬಾರದು ಎಂದು ಎಲ್ಲಿದೆ. ಎಲ್ಲ ಕ್ಷೇತ್ರಗಳಿಗೂ ಅನುದಾನ ನೀಡಬೇಕು. ವೈಟ್ ಟ್ಯಾಪಿಂಗ್ ಕಾಮಗಾರಿಯಲ್ಲಿ ಅವ್ಯವಹಾರದ ನೆಪದಲ್ಲಿ ತಡೆ ಹಿಡಿಯಲಾಗಿದೆ. ತನಿಖೆ ನಡೆಸಲಿ. ಆದರೆ, ಅನುದಾನ ಕಡಿತ ಮಾಡುವುದು ಸಲ್ಲ ಎಂದು ಏರಿದ ಧ್ವನಿಯಲ್ಲಿ ತಿರುಗೇಟು ನೀಡಿದರು.

ಕೆಲ ಕಾಲ ರಾಮಲಿಂಗಾರೆಡ್ಡಿ ಮತ್ತು ಸತೀಶ್ ರೆಡ್ಡಿ ಮಧ್ಯೆ ವಾಗ್ವಾದ ನಡೆಯಿತು. ಬಳಿಕ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ, ಬೆಂಗಳೂರು ನಗರದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲ ಶಾಸಕರ ಸಭೆ ಕರೆದು ಎಲ್ಲ ಕ್ಷೇತ್ರಗಳಿಗೂ ಸಮರ್ಪಕವಾಗಿ ಅನುದಾನ ಹಂಚಿಕೆ ಮಾಡಬೇಕೆಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News