ಕಲಾಪ ವರದಿಗೆ ಮಾಧ್ಯಮಗಳಿಗೆ ನಿರ್ಬಂಧ ಸಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-10-12 11:35 GMT

ಬೆಂಗಳೂರು, ಅ. 12: ‘ಸದನ ಕಲಾಪ ವರದಿಗಾರಿಕೆಗೆ ಖಾಸಗಿ ಸುದ್ದಿ ವಾಹಿನಿಗಳ ನಿರ್ಬಂಧ ಸಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಾಧ್ಯಮಗಳಿಗೆ ಕಡಿವಾಣ ಒಳ್ಳೆಯ ಬೆಳವಣಿಗೆಯಲ್ಲ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಆಕ್ಷೇಪಿಸಿದ್ದಾರೆ.

ಶನಿವಾರ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಮಾಧ್ಯಮಗಳಿಗೆ ನಿರ್ಬಂಧ ಹೇರಿರುವ ಸ್ಪೀಕರ್ ಕಾಗೇರಿ ಅವರು ತಮ್ಮ ತೀರ್ಮಾನವನ್ನು ಪುನರ್ ಪರಿಶೀಲಿಸಬೇಕು. ಈ ಕ್ರಮಕ್ಕೆ ಆಡಳಿತ ಪಕ್ಷದ ಸದಸ್ಯರ ಒಪ್ಪಿಗೆ ಇಲ್ಲವೆಂದು ನಾನು ಭಾವಿಸಿದ್ದೇನೆ ಎಂದರು.

ಸ್ವತಃ ಸಿಎಂ ಯಡಿಯೂರಪ್ಪನವರಿಗೆ ಒಪ್ಪಿಗೆ ಇಲ್ಲ. ಈ ಹಿಂದೆಯೇ ವಿಧಾನಸಭೆ ಮತ್ತು ಪರಿಷತ್‌ನಲ್ಲಿ ಸುದ್ದಿ ವಾಹಿನಿಗಳ ನಿರ್ಬಂಧ ಪ್ರಸ್ತಾಪವಿತ್ತು. ಆದರೆ, ಅನಂತರ ಅದನ್ನು ಕೈಬಿಡಲಾಗಿತ್ತು. ಸದನದ ಪಾರದರ್ಶಕತೆ ಕಾಯ್ದುಕೊಳ್ಳಲು ಮಾಧ್ಯಮಗಳಿಗೆ ನಿರ್ಬಂಧ ಹೇರಬಾರದು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಜೆ.ಸಿ.ಮಾದುಸ್ವಾಮಿ, ಮಾಧ್ಯಮ ನಿರ್ಬಂಧ ಸ್ಪೀಕರ್ ಕಾಗೇರಿಯವರ ನಿರ್ಧಾರವಲ್ಲ. ಸ್ಪೀಕರ್ ಸಮ್ಮೇಳನದಲ್ಲೇ ತೀರ್ಮಾನ ಆಗಿದೆ. ಲೋಕಸಭೆ ಮತ್ತು ಬೇರೆ ರಾಜ್ಯಗಳಲ್ಲಿ ಈ ವ್ಯವಸ್ಥೆ ಇದೆ. ನಾವು ವಿದ್ಯುನ್ಮಾನ ಮಾಧ್ಯಮವನ್ನು ನಿರ್ಬಂಧಿಸಿಲ್ಲ.

ಒಂದು ಸುದ್ದಿ ವಾಹಿನಿಯ ಮೂಲಕ ಎಲ್ಲರಿಗೂ ನೀಡುತ್ತಿದ್ದೇವೆ. ಇದು ಸ್ಪೀಕರ್ ಒಬ್ಬರ ತೀರ್ಮಾನದಂತೆ ಬಿಂಬಿಸುವುದು ಬೇಡ. ಹತ್ತು ವರ್ಷದ ಹಿಂದೆಯೇ ಈ ಬಗ್ಗೆ ಚರ್ಚೆಗಳಾಗಿ ತೀರ್ಮಾನಗಳಾಗಿದ್ದವು. ಅದನ್ನು ಈಗಿನ ಸ್ಪೀಕರ್ ಕಾಗೇರಿ ಅವರು ಅನುಷ್ಠಾನ ಮಾಡಿದ್ದಾರೆ. ಅದು ಸರಿಯೋ, ತಪ್ಪೋ ಬೇರೆ ವಿಚಾರ ಎಂದು ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News