ಸುಪ್ರೀಂ ಆದೇಶ ನೀಡಿದರೂ ಮಾಹಿತಿ ಆಯೋಗಕ್ಕೆ ಆಯುಕ್ತರ ನೇಮಿಸದ ಕೇಂದ್ರ ಸರಕಾರ

Update: 2019-10-12 17:31 GMT

ಹೊಸದಿಲ್ಲಿ, ಅ.12: ಸರ್ವೋಚ್ಚ ನ್ಯಾಯಾಲಯದ ಆದೇಶದ ಹೊರತಾಗಿಯೂ ಕೇಂದ್ರ ಸರಕಾರ ಕೇಂದ್ರ ಮಾಹಿತಿ ಆಯೋಗಕ್ಕೆ ಆಯುಕ್ತರನ್ನು ನೇಮಿಸಿಲ್ಲ. ಇದರ ಪರಿಣಾಮವಾಗಿ ವಿವಿಧ ರಾಜ್ಯಗಳಲ್ಲಿ ಬಾಕಿಯುಳಿದ ದೂರುಗಳ ಸಂಖ್ಯೆಯಲ್ಲಿ ಬಹಳಷ್ಟು ಏರಿಕೆಯಾಗಿದೆ ಎಂದು ಭಾರತದ ಮಾಹಿತಿ ಆಯೋಗಗಳ ನಿರ್ವಹಣೆಯ ವರದಿ 2018-19ರಲ್ಲಿ ತಿಳಿಸಲಾಗಿದೆ.

ಸತರ್ಕ್ ನಾಗರಿಕ್ ಸಂಘಟನ್ (ಎಸ್‌ಎನ್‌ಎಸ್) ಮತ್ತು ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್ (ಸಿಇಎಸ್) ಸಿದ್ಧಪಡಿಸಿರುವ ವರದಿಯಲ್ಲಿ ಆರ್‌ಟಿಐ ಕಾಯ್ದೆ, 2005ರಡಿ ರಚಿಸಲಾಗಿರುವ ಎಲ್ಲ 29 ಮಾಹಿತಿ ಆಯೋಗಗಳನ್ನು ಒಳಪಡಿಸಲಾಗಿದೆ. ಈ ವರದಿಯನ್ನು ಸಿದ್ಧಪಡಿಸಲು ಮಾಹಿತಿ ಹಕ್ಕಿನಡಿ ಒಟ್ಟು 129 ಅರ್ಜಿಗಳನ್ನು ಹಾಕಲಾಗಿದೆ. ಈ ಕಾಯ್ದೆಯನ್ನು ದೇಶಾದ್ಯಂತ ಬಳಸಲಾಗುತ್ತಿದ್ದು ವಾರ್ಷಿಕ 40ರಿಂದ 60 ಲಕ್ಷ ಅರ್ಜಿಗಳನ್ನು ದಾಖಲಿಸಲಾಗುತ್ತದೆ.

 ಆರ್‌ಟಿಐ ಸಹಾಯದಿಂದ ಜನರು ಸ್ಥಳೀಯ ಸರಕಾರ ಮತ್ತು ಪ್ರತಿನಿಧಿಗಳ ಕಾರ್ಯವೈಖರಿ ಬಗ್ಗೆ ತಿಳಿದು ಅವರನ್ನು ಹೊಣೆಗಾರರನ್ನಾಗಿ ಮಾಡಬಹುದಾಗಿದೆ. ಜೊತೆಗೆ ಮೂಲಭೂತ ಹಕ್ಕುಗಳು ಮತ್ತು ಪಾಲನ್ನು ಪಡೆಯಲು ಸಾಧ್ಯವಾಗುತ್ತದೆ. ಆರ್‌ಟಿಐ ಕಾಯ್ದೆ ಅನುಷ್ಟಾನಗೊಂಡ 14 ವರ್ಷಗಳ ನಂತರವೂ ಮಾಹಿತಿ ಆಯುಕ್ತರ ಹುದ್ದೆಗಳು ಖಾಲಿಯಾಗಿರುವ ಕಾರಣ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾಹಿತಿ ಆಯುಕ್ತರನ್ನು ನೇಮಿಸುವಲ್ಲಿ ವಿಫಲವಾಗಿವೆ ಎಂದು ವರದಿ ತಿಳಿಸಿದೆ. ಫೆಬ್ರವರಿ 2019ರಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಆರ್‌ಟಿಐ ಕಾಯ್ದೆಯ ಪರಿಣಾಮಕಾರಿ ಅನುಷ್ಟಾನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಮಾಹಿತಿ ಆಯುಕ್ತರನ್ನು ನೇಮಿಸುವುದು ಮತ್ತು ಆಯೋಗ ಸೂಕ್ತ ಕಾರ್ಯಾಚರಿಸುವಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ ಎಂದು ತಿಳಿಸಿತ್ತು.

ಮಾಹಿತಿ ಆಯೋಗಗಳು ಓರ್ವ ಮುಖ್ಯಸ್ಥ ಮತ್ತು ಕೆಲಸದ ಒತ್ತಡಕ್ಕೆ ಅನುಗುಣವಾಗಿ ಗರಿಷ್ಠ ಹತ್ತು ಆಯುಕ್ತರನ್ನು ಹೊಂದಿರಬೇಕು ಎಂದು ಶ್ರೇಷ್ಠ ನ್ಯಾಯಾಲಯ ಸೂಚಿಸಿತ್ತು. ಸರ್ವೋಚ್ಚ ನ್ಯಾಯಾಲಯದ ಆದೇಶದ ಹೊರತಾಗಿಯೂ ಕೇಂದ್ರ ಮಾಹಿತಿ ಆಯೋಗದಲ್ಲಿ ಇನ್ನೂ ನಾಲ್ಕು ಆಯುಕ್ತರ ಹುದ್ದೆಗಳು ಖಾಲಿ ಬಿದ್ದಿದೆ ಎಂದು ವರದಿ ತಿಳಿಸಿದೆ.

ಅನೇಕ ರಾಜ್ಯಗಳಲ್ಲಿ ಮುಖ್ಯ ಮಾಹಿತಿ ಆಯುಕ್ತರ ಹುದ್ದೆಯೇ ಖಾಲಿಯಿದೆ ಎಂದು ವರದಿ ಬಹಿರಂಗಪಡಿಸಿದೆ. ರಾಜಸ್ಥಾನದಲ್ಲಿ 2018ರ ಡಿಸೆಂಬರ್‌ನಿಂದ ಮಾಹಿತಿ ಆಯುಕ್ತರು ಇಲ್ಲದಿದ್ದರೆ ತಮಿಳುನಾಡಿನಲ್ಲಿ 2019ರ ಮೇಯಿಂದ ಆಯುಕ್ತರ ಸ್ಥಾನ ತೆರವುಗೊಂಡಿದೆ. ಇನ್ನು ಅನೇಕ ರಾಜ್ಯಮಾಹಿತಿ ಆಯೋಗಗಳು (ಎಸ್‌ಐಸಿ) ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸಿವೆ. ಇವುಗಳಲ್ಲಿ ಪ್ರಮುಖವಾಗಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಎಸ್‌ಐಸಿಯಾಗಿ ಕಾರ್ಯಾಚರಿಸುತ್ತಿದ್ದ ಆಂಧ್ರ ಪ್ರದೇಶ ಸಿಐಸಿ 2017ರ ಮೇ ನಂತರ ಸ್ತಭ್ಧಗೊಂಡಿತ್ತು. ಸದ್ಯ ಮೂವರು ಆಯುಕ್ತರೊಂದಿಗೆ ಕಾರ್ಯಾಚರಿಸುತ್ತಿದೆ.

ತ್ರಿಪುರದ ಆಯೋಗ 2019ರ ಎಪ್ರಿಲ್‌ನಿಂದ ಸ್ಥಗಿತಗೊಂಡಿದೆ. ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ಕೇರಳ, ತೆಲಂಗಾಣ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಎಸ್‌ಐಸಿಗಳು ಅಗತ್ಯಕ್ಕಿಂತ ಕಡಿಮೆ ಆಯುಕ್ತರನ್ನು ಹೊಂದಿದೆ ಎಂದು ವರದಿ ತಿಳಿಸಿದೆ.

ಇದರ ಪರಿಣಾಮವಾಗಿ, ಮಹಾರಾಷ್ಟ್ರದಲ್ಲಿ ಮಾರ್ಚ್ 31,2019ರ ವೇಳೆಗೆ 46,000, ಉತ್ತರ ಪ್ರದೇಶದಲ್ಲಿ ಜನವರಿ 1, 2019ರ ವೇಳೆಗೆ 51,682, ಕೇರಳದಲ್ಲಿ ಮಾರ್ಚ್ 2018 ವೇಳೆಗೆ 15,000, ತೆಲಂಗಾಣದಲ್ಲಿ ಮಾರ್ಚ್ 31, 2019ರ ವೇಳೆಗೆ 9,000, ಒಡಿಶಾದಲ್ಲಿ ಇದೇ ವೇಳೆ 11,500 ಮತ್ತು ಪಶ್ಚಿಮ ಬಂಗಾಳದಲ್ಲಿ 8,000 ಅರ್ಜಿಗಳು ವಿಲೇವಾರಿಯಾಗದೆ ಬಾಕಿಯುಳಿದಿವೆ ಎಂದು ವರದಿ ತಿಳಿಸಿದೆ.

ವಿಭಿನ್ನ ಹಿನ್ನೆಲೆಯ ವ್ಯಕ್ತಿಗಳನ್ನು ಆಯುಕ್ತರಾಗಿ ನೇಮಿಸಬೇಕು ಎಂದು ಆರ್‌ಟಿಐ ಕಾಯ್ದೆಯಲ್ಲಿ ಸೂಚಿಸಲಾಗಿದ್ದು ಶೇ 58 ಆಯುಕ್ತರು ನಿವೃತ್ತ ಸರಕಾರಿ ಅಧಿಕಾರಿಗಳಾಗಿದ್ದಾರೆ. ಆಯುಕ್ತರ ಪೈಕಿ ಕೇವಲ ಶೇ.10 ಮಹಿಳೆಯರಾಗಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News