ಭಾರತದ ಬೆಳವಣಿಗೆ ದರ ಶೇ.6ಕ್ಕೆ ಇಳಿಯಲಿದೆ: ವಿಶ್ವ ಬ್ಯಾಂಕ್

Update: 2019-10-13 14:45 GMT

ಹೊಸದಿಲ್ಲಿ, ಅ.13: ಭಾರತದ ಆರ್ಥಿಕ ಬೆಳವಣಿಗೆಯ ಪ್ರಮಾಣ 2019-20ರಲ್ಲಿ ಶೇ.6ಕ್ಕೆ ಕುಸಿಯಲಿದೆ ಎಂದು ವಿಶ್ವಬ್ಯಾಂಕ್‌ನ ವರದಿಯಲ್ಲಿ ಅಂದಾಜಿಸಿದ್ದು, ಈ ತೀವ್ರ ಮಂದಗತಿ ತತ್ತರಿಸಿರುವ ಆರ್ಥಿಕ ಕ್ಷೇತ್ರವನ್ನು ಮತ್ತಷ್ಟು ದುರ್ಬಲಗೊಳಿಸಲಿದೆ ಎಂದು ಎಚ್ಚರಿಸಿದೆ.

ಆದರೆ ಹಣಕಾಸು ನೀತಿ ಅನುಕೂಲಕರವಾಗಿದ್ದರೆ ಆರ್ಥಿಕ ಬೆಳವಣಿಗೆ ಕ್ರಮೇಣ ಚೇತರಿಸಿಕೊಂಡು 2021ರಲ್ಲಿ ಶೇ.6.9 ಮತ್ತು 2022ರಲ್ಲಿ ಶೇ.7.2ಕ್ಕೆ ತಲುಪಲಿದೆ ಎಂದು ವಿಶ್ವಬ್ಯಾಂಕ್‌ನ ‘ಸೌತ್ ಏಶ್ಯ ಇಕನಾಮಿಕ್ಸ್ ಫೋಕಸ್’ನ ವರದಿ ತಿಳಿಸಿದೆ.

ದಕ್ಷಿಣ ಏಶ್ಯಾದಲ್ಲಿ ವಿಕೇಂದ್ರೀಕರಣ ಪ್ರಕ್ರಿಯೆ ಇನ್ನೂ ನಿರೀಕ್ಷಿತ ಫಲ ನೀಡಿಲ್ಲ. ಇದನ್ನು ಸೂಕ್ತವಾಗಿ ನಿಭಾಯಿಸದಿದ್ದರೆ ವಿಭಾಗೀಕರಣಕ್ಕೆ ಕಾರಣವಾಗಬಹುದು. ವಿಕೇಂದ್ರೀಕರಣ ಪ್ರಕ್ರಿಯೆಯ ಅನುಕೂಲ ಜನರಿಗೆ ಲಭಿಸುವಂತಾಗಲು ದಕ್ಷಿಣ ಏಶ್ಯಾ ರಾಷ್ಟ್ರಗಳ ಸರಕಾರಗಳು ತಮ್ಮ ಸಂಪನ್ಮೂಲಗಳನ್ನು ವಿವೇಚನೆಯಿಂದ ಹಂಚಿಕೆ ಮಾಡಬೇಕು ಹಾಗೂ ಮಾರುಕಟ್ಟೆಯ ಸ್ಪರ್ಧೆಯನ್ನು ಎದುರಿಸಲು ಸ್ಥಳೀಯ ಉದ್ಯಮಿಗಳನ್ನು ಪ್ರೋತ್ಸಾಹಿಸಬೇಕು ಎಂದು ವಿಶ್ವಬ್ಯಾಂಕ್‌ನ ದಕ್ಷಿಣ ಏಶ್ಯಾ ವಲಯದ ಮುಖ್ಯ ಅರ್ಥಶಾಸ್ತ್ರಜ್ಞ ಹ್ಯಾನ್ಸ್ ಟಿಮರ್ ಹೇಳಿದ್ದಾರೆ.

 ಸತತ ಎರಡನೇ ವರ್ಷ ಭಾರತದ ಆರ್ಥಿಕ ಬೆಳವಣಿಗೆ ದರ ನಿಧಾನಗೊಂಡಿದೆ ಎಂದು ದಕ್ಷಿಣ ಏಶ್ಯಾಗಳ ಆರ್ಥಿಕತೆಯನ್ನು ಕೇಂದ್ರೀಕರಿಸಿ ತಯಾರಿಸಿದ ಇತ್ತೀಚಿನ ವರದಿಯಲ್ಲಿ ವಿಶ್ವಬ್ಯಾಂಕ್ ತಿಳಿಸಿದೆ. 2018-19ರಲ್ಲಿ ಆರ್ಥಿಕ ಬೆಳವಣಿಗೆ ಪ್ರಮಾಣ ಶೇ.6.8ರಲ್ಲಿದ್ದರೆ 2017-18ರಲ್ಲಿ ಶೇ.7.2ರಷ್ಟಿತ್ತು. ವಿಶ್ವಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯ ವಾರ್ಷಿಕ ಸಭೆಗೂ ಮುನ್ನ ಈ ವರದಿ ಬಿಡುಗಡೆಗೊಂಡಿದೆ. ಖಾಸಗಿ ಬಳಕೆ ಕಡಿಮೆಯಾಗಿರುವುದರಿಂದ ಬೇಡಿಕೆ ಕುಸಿದಿದ್ದರೆ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರದಲ್ಲಿ ಬೆಳವಣಿಗೆ ಕುಂಠಿತಗೊಂಡು ಪೂರೈಕೆಯೂ ಕುಸಿದಿರುವುದರಿಂದ ಭಾರತದ ಆರ್ಥಿಕತೆಯ ಮೇಲೆ ಹೊಡೆತ ಬಿದ್ದಿದೆ.

 ಭಾರತವು ಹೂಡಿಕೆ ದುರ್ಬಲಗೊಳ್ಳಲು ಕಾರಣವಾಗಿರುವ ರಚನಾತ್ಮಕ ಅಂಶ ಹಾಗೂ ಖಾಸಗಿ ಬಳಕೆ ಕಡಿಮೆಯಾಗಲು ಕಾರಣವಾಗಿರುವ ಅಂಶಗಳತ್ತ ಮೊದಲು ಗಮನ ಹರಿಸಬೇಕು ಎಂದು ವರದಿ ತಿಳಿಸಿದೆ. ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಆಡಳಿತದಲ್ಲಿ ಸುಧಾರಣೆ ಮಾಡುವ ಮೂಲಕ ಆರ್ಥಿಕ ವಲಯವನ್ನು ಸದೃಢಗೊಳಿಸುವ ಜೊತೆಗೆ, ಬ್ಯಾಂಕಿಂಗೇತರ ವಿತ್ತ ಸಂಸ್ಥೆ(ಎನ್‌ಬಿಎಫ್‌ಸಿ)ಗಳ ನಿಯಂತ್ರಣಾ ಚೌಕಟ್ಟನ್ನು ಬಲಗೊಳಿಸಬೇಕಿದೆ. ಆರ್ಥಿಕವಾಗಿ ಬಲಷ್ಟವಾಗಿರುವ ಎನ್‌ಬಿಎಫ್‌ಸಿಗಳಿಗೆ ಸಾಕಷ್ಟು ಸಾಲ ಪಡೆಯಲು ಅವಕಾಶ ನೀಡಬೇಕು ಎಂದು ವರದಿ ತಿಳಿಸಿದೆ.

ಜಿಡಿಪಿಯಲ್ಲಿ ಚಾಲ್ತಿ ಖಾತೆ ಕೊರತೆ(ಕರೆಂಟ್ ಅಕೌಂಟ್ ಡಿಫಿಸಿಟ್) 2017-18ರಲ್ಲಿ 1.8% ಇದ್ದರೆ, 2018-19ರಲ್ಲಿ ಇದು 2.1%ಕ್ಕೆ ಹೆಚ್ಚಿದ್ದು ಇದು ವ್ಯಾಪಾರ ಸಮತೋಲನ(ಆಮದು-ರಫ್ತುಗಳ ವ್ಯತ್ಯಾಸ)ದ ಮೇಲೆ ಪರಿಣಾಮ ಬೀರಿದೆ. ಸರಕಾರದ ಸ್ಥೂಲ ಕೊರತೆ 0.2%ದಷ್ಟು ವಿಸ್ತೃತಗೊಂಡು 2018-19ರ ಜಿಡಿಪಿಯ 5.9%ಕ್ಕೆ ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ. ಎಪ್ರಿಲ್‌ನಿಂದ ಜೂನ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ಅಭಿವೃದ್ಧಿ ದರ ಕಳೆದ ಆರು ವರ್ಷಗಳಲ್ಲೇ ಕನಿಷ್ಟ ಪ್ರಮಾಣವಾದ ಶೇ.5ಕ್ಕೆ ಕುಸಿದಿದ್ದು ಸತತ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಕುಸಿತ ಕಂಡಿದೆ. ರಿಸರ್ವ್ ಬ್ಯಾಂಕ್ ಅಕ್ಟೋಬರ್ 4ರಂದು ಭಾರತದ ಯೋಜಿತ ಅಭಿವೃದ್ಧಿ ದರವನ್ನು ಶೇ.6.1ಕ್ಕೆ ಪರಿಷ್ಕರಿಸಿದೆ. ಎಡಿಬಿ(ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್) ಕೂಡಾ ಭಾರತದ ಯೋಜಿತ ಅಭಿವೃದ್ಧಿ ದರವನ್ನು ಶೇ. 7ರಿಂದ ಶೇ.6.5ಕ್ಕೆ ಇಳಿಸಿದೆ.

ಜಿಎಸ್‌ಟಿ, ನೋಟು ರದ್ದತಿಯಿಂದ ಜನಸಾಮಾನ್ಯರಿಗೆ ಆಘಾತ

ಸರಕು ಮತ್ತು ಸೇವಾ ತೆರಿಗೆ, ಅಧಿಕ ಮುಖಬೆಲೆಯ ಕರೆನ್ಸಿ ನೋಟುಗಳ ರದ್ದತಿ , ದೇಶದ ಗ್ರಾಮೀಣ ಆರ್ಥಿಕತೆಯ ಮೇಲೆ ಹೆಚ್ಚಿದ ಒತ್ತಡ ಹಾಗೂ ಅಧಿಕ ನಿರುದ್ಯೋಗ ಪ್ರಮಾಣವು ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದವರು ಮತ್ತು ಜನಸಾಮಾನ್ಯರಿಗೆ ಮಾರಕ ಆಘಾತ ನೀಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದ್ದರಿಂದ ಪ್ರಥಮ ತ್ರೈಮಾಸಿಕದಲ್ಲಿ ಗಮನಾರ್ಹ ಆರ್ಥಿಕ ಕುಸಿತದ ಕಾರಣ ಈ ಆರ್ಥಿಕ ವರ್ಷವಿಡೀ ಅಭಿವೃದ್ಧಿ ದರ ಶೇ.6ರ ಪ್ರಮಾಣವನ್ನು ಮೀರುವ ಸಾಧ್ಯತೆಯಿಲ್ಲ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News