ಭಾರತವನ್ನು ಹಿಂದಿಕ್ಕಿ ಬೆಳವಣಿಗೆ ಸಾಧಿಸಲಿರುವ ಬಾಂಗ್ಲಾದೇಶ, ನೇಪಾಳ: ವಿಶ್ವ ಬ್ಯಾಂಕ್ ವರದಿ

Update: 2019-10-13 14:46 GMT

ವಾಷಿಂಗ್ಟನ್, ಅ.13: ಬಾಂಗ್ಲಾದೇಶ ಮತ್ತು ನೇಪಾಳ ದೇಶಗಳ ಆರ್ಥಿಕ ಬೆಳವಣಿಗೆ ಪ್ರಮಾಣ 2019ರಲ್ಲಿ ಭಾರತಕ್ಕಿಂತ ಹೆಚ್ಚಿರಲಿದೆ ಎಂದು ವಿಶ್ವಬ್ಯಾಂಕ್‌ನ ವರದಿ ತಿಳಿಸಿದೆ.

ಜಾಗತಿಕ ಆರ್ಥಿಕ ಮಂದಗತಿಯ ಕಾರಣ ದಕ್ಷಿಣ ಏಶ್ಯಾದಲ್ಲಿ ಒಟ್ಟಾರೆ ಅಭಿವೃದ್ಧಿ ಗತಿ ಕುಂಠಿತವಾಗಲಿದ್ದು ಎಪ್ರಿಲ್‌ನಲ್ಲಿ ಅಂದಾಜಿಸಿದ್ದ ದರಕ್ಕಿಂತಲೂ 1.1% ಕಡಿಮೆಯಾಗಲಿದೆ ಎಂದು ವರದಿ ತಿಳಿಸಿದೆ. ಭಾರತದಲ್ಲಿ ಈ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇ.6ಕ್ಕೆ ಕುಸಿಯಲಿದ್ದರೆ, ಬಾಂಗ್ಲಾದೇಶದಲ್ಲಿ ಜಿಡಿಪಿ ದರ 8.1%ಕ್ಕೆ ಹೆಚ್ಚಲಿದೆ. 2018ರಲ್ಲಿ ಬಾಂಗ್ಲಾದ ಜಿಡಿಪಿ ದರ ಶೇ.7.9ರಲ್ಲಿತ್ತು. ಬಾಂಗ್ಲಾದ ಜಿಡಿಪಿ 2020ರಲ್ಲಿ 7.2% ಹಾಗೂ 2021ರಲ್ಲಿ 7.3% ಎಂದು ಅಂದಾಜಿಸಲಾಗಿದೆ. ಇದೀಗ ಚೀನಾ ಮತ್ತು ಅಮೆರಿಕ ನಡುವೆ ಇರುವ ವ್ಯಾಪಾರ ಸಂಘರ್ಷದಿಂದ ಬಾಂಗ್ಲಾದೇಶದ ಗಾರ್ಮೆಂಟ್ಸ್ ಉದ್ಯಮ ಅಪಾರ ಅನುಕೂಲ ಪಡೆದಿದೆ ಎಂದು ವಿಶ್ವಬ್ಯಾಂಕ್‌ನ ದಕ್ಷಿಣ ಏಶ್ಯಾ ವಲಯದ ಮುಖ್ಯ ಅರ್ಥಶಾಸ್ತ್ರಜ್ಞ ಹ್ಯಾನ್ಸ್ ಟಿಮರ್ ಹೇಳಿದ್ದಾರೆ.

 ಸ್ಥೂಲವಾಗಿ ಹೇಳುವುದಾದರೆ, ಬಾಂಗ್ಲಾ ದೇಶದ ಕೈಗಾರಿಕಾ ಉತ್ಪಾದನೆ, ರಫ್ತು ಹೆಚ್ಚಿರುವುದರಿಂದ ಈ ದೇಶವು ವಲಯದ ಇತರ ರಾಷ್ಟ್ರಗಳಿಗಿಂತ, ಅದರಲ್ಲೂ ಮುಖ್ಯವಾಗಿ ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನಕ್ಕಿಂತ ಉತ್ತಮ ನಿರ್ವಹಣೆ ತೋರಿದೆ. ಪ್ರಮುಖವಾಗಿ ರಫ್ತು ಉದ್ಯಮದಲ್ಲಿ ಬಾಂಗ್ಲಾದ ನಿರ್ವಹಣೆ ಅತ್ಯುತ್ತಮವಾಗಿದೆ ಎಂದು ಟಿಮರ್ ಹೇಳಿದ್ದಾರೆ. ನೇಪಾಳದಲ್ಲಿ ಈ ವರ್ಷ ಹಾಗೂ ಮುಂದಿನ ವರ್ಷ ಜಿಡಿಪಿಯನ್ನು 6.5% ಎಂದು ಅಂದಾಜಿಸಲಾಗಿದೆ. ಈ ದೇಶಕ್ಕೆ ಪ್ರವಾಸಿಗರ ಆಗಮನ ಹೆಚ್ಚಿರುವುದು, ಸೇವಾ ವಲಯ ಹಾಗೂ ನಿರ್ಮಾಣ ವಲಯ ಬಲಿಷ್ಟವಾಗಿರುವುದು ಜಿಡಿಪಿ ಚೇತರಿಕೆಗೆ ಕಾರಣವಾಗಿದೆ.

ಶ್ರೀಲಂಕಾದಲ್ಲಿ ರಾಜಕೀಯ ಅನಿಶ್ಚಿತತೆ ಹಾಗೂ ಭದ್ರತಾ ಸಮಸ್ಯೆಯ ಕಾರಣ 2019ರಲ್ಲಿ ಜಿಡಿಪಿ ದರ 2.7% ಎಂದು ಅಂದಾಜಿಸಲಾಗಿದೆ. ಆದರೆ ಹೂಡಿಕೆ ಮತ್ತು ರಫ್ತು ಚೇತರಿಸಿಕೊಂಡರೆ 2020ರಲ್ಲಿ ಇದು 3.3%, 2021ರಲ್ಲಿ 3.7%ಕ್ಕೆ ಹೆಚ್ಚಲಿದೆ ಎಂದು ವರದಿ ತಿಳಿಸಿದೆ. ಪಾಕಿಸ್ತಾನ ಮತ್ತೊಮ್ಮೆ ಬೃಹತ್ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿರುವುದರ ಜೊತೆಗೆ, ಅಂತರಾಷ್ಟ್ರೀಯ ಮೀಸಲು ನಿಧಿ ಅತ್ಯಂತ ಕನಿಷ್ಟ ಇರುವುದರಿಂದ ಆ ದೇಶದ ಜಿಡಿಪಿ ದರ ಕಡಿಮೆಯಿದೆ. ಐಎಂಎಫ್ ಹೆಚ್ಚುವರಿ ಆರ್ಥಿಕ ನೆರವು ಒದಗಿಸಿದರೂ ಆ ದೇಶದ ಜಿಡಿಪಿ ಮುಂದಿನ ವರ್ಷದಲ್ಲಿ ಹೆಚ್ಚುವ ಸಾಧ್ಯತೆಯಿಲ್ಲ.

ಅಪಘಾನಿಸ್ತಾನದಲ್ಲಿ ಚುನಾವಣೆಯ ಬಳಿಕ ಜಿಡಿಪಿ ಚೇತರಿಸಿಕೊಂಡು 2020ರಲ್ಲಿ 3%, 2021ರಲ್ಲಿ 3.5%; ಭೂತಾನ್‌ನಲ್ಲಿ ಜಿಡಿಪಿ ಈ ವರ್ಷ 7.4%ಕ್ಕೆ ಜಿಗಿಯುವ ನಿರೀಕ್ಷೆಯಿದೆ. ಮಾಲ್ದೀವ್ಸ್‌ನ ಜಿಡಿಪಿ 2019ರಲ್ಲಿ 5.2%ರ ಪ್ರಮಾಣದಲ್ಲಿ ಇರಲಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News