ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಸೂಕ್ತ ಕ್ರಮ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-10-13 12:21 GMT

ಬೆಂಗಳೂರು, ಅ.13: ಪರಿಶಿಷ್ಟ ವರ್ಗ(ಎಸ್ಟಿ)ದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಸದ್ಯದಲ್ಲೇ ಒಂದು ತೀರ್ಮಾನಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಭರವಸೆ ನೀಡಿದ್ದಾರೆ.

ರವಿವಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮತ್ತು ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಪರಿಶಿಷ್ಟ ವರ್ಗದವರಿಗೆ ಜನಸಂಖ್ಯೆಗೆ ಅನುಗಣವಾಗಿ ಮೀಸಲಾತಿ ನೀಡುವ ಸಂಬಂಧ ನ್ಯಾ.ಎಚ್.ಎನ್. ನಾಗಮೋಹನದಾಸ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಶೀಘ್ರ, ಈ ಸಮಿತಿಯ ವರದಿ ಪಡೆದು ಮೀಸಲಾತಿ ಹೆಚ್ಚಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಯಾವುದೇ ಸಮುದಾಯ ಸುಶಿಕ್ಷಿತರಾದರೆ ಮಾತ್ರ ಆ ಸಮುದಾಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಹೀಗಾಗಿ ಪರಿಶಿಷ್ಟ ಜಾತಿ, ವರ್ಗದ ಕಲ್ಯಾಣಕ್ಕೆ ಸರಕಾರ ಬದ್ಧವಾಗಿದೆ. ವಾಲ್ಮೀಕಿ ಸಮುದಾಯದ ಪ್ರಸನ್ನಾನಂದಪುರಿ ಸ್ವಾಮೀಜಿ, ಸಮುದಾಯದ ಅಭಿವೃದ್ಧಿಗೆ ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ. ಹೀಗಾಗಿ 2020ರ ಫೆಬ್ರವರಿಯಲ್ಲಿ ನಡೆಯುವ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಅವರು ತಿಳಿಸಿದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ವಾಲ್ಮೀಕಿ ಸಮುದಾಯ ಸೇರಿದಂತೆ ಎಲ್ಲ ಸಮುದಾಯಗಳ ಅಭಿವೃದ್ಧಿಗೂ ಸರಕಾರ ಬದ್ಧ. ಸರಕಾರ ಪರಿಶಿಷ್ಟ ವರ್ಗದ ಕಲ್ಯಾಣಕ್ಕೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಸುಮಾರು 3.71 ಲಕ್ಷ ಮಕ್ಕಳು ಓದುತ್ತಿದ್ದಾರೆ. ಸಮುದಾಯದ ಯುವಜನತೆಯನ್ನು ಎಲ್ಲ ಕ್ಷೇತ್ರಗಳಲ್ಲೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಸಕ ನರಸಿಂಹನಾಯಕ ಮಾತನಾಡಿ, ವಾಲ್ಮೀಕಿ ಸಮುದಾಯ ಯಡಿಯೂರಪ್ಪ ಬಳಿ ಸಚಿವ ಸ್ಥಾನಕ್ಕೆ ಬೇಡಿಕೆ ಇಡುವುದಿಲ್ಲ. ಎಸ್ಟಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಹಾಗೂ ನೂರಾರು ವರ್ಷಗಳಿಂದ ಹಿಂದುಳಿದಿರುವ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಪರಿಶಿಷ್ಟ ವರ್ಗದ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ನೀಡಬೇಕು. ಸರಕಾರ 2 ತಿಂಗಳಲ್ಲಿ ನಿವೃತ್ತ ನ್ಯಾ.ನಾಗಮೋಹನದಾಸ್ ಸಮಿತಿಯಿಂದ ವರದಿ ಪಡೆದು ಮೀಸಲಾತಿ ಹೆಚ್ಚಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಹಾಗೂ ಪರಿಶಿಷ್ಟ ವರ್ಗದವರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂಬ ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ನಾಡೋಜ ಡಾ.ಕಮಲಾ ಹಂಪನಾ, ಶಿಕ್ಷಣ ತಜ್ಞ ಡಾ. ರಂಗಯ್ಯ ಹಾಗೂ ಓಬಳಪ್ಪಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಪರಿಶಿಷ್ಟ ವರ್ಗಗಳ ವಸತಿ ಶಾಲೆಗಳಲ್ಲಿ ಅಧ್ಯಯನ ಮಾಡಿ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಮಾರಂಭದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಾಗಾಂಬಿಕಾ ದೇವಿ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ ನಾಯಕ್, ಇಲಾಖೆಯ ಸಲಹೆಗಾರ ಈ.ವೆಂಕಟಯ್ಯ, ಇಲಾಖೆಯ ನಿರ್ದೇಶಕ ಸಂಗಪ್ಪ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹನುಮನರಸಯ್ಯ ಉಪಸ್ಥಿತರಿದ್ದರು.

‘ವಾಲ್ಮೀಕಿ ಸಮುದಾಯದ ನಾಯಕ ಏಕಲವ್ಯ ತನ್ನ ಗುರುವಿಗೆ ಕಾಣಿಕೆಯಾಗಿ ತನ್ನ ಹೆಬ್ಬರಳನ್ನೆ ಕತ್ತರಿಸಿ ಕೊಟ್ಟ. ಅದೇ ಮಾದರಿಯಲ್ಲಿ ಸಿಎಂ ಯಡಿಯೂರಪ್ಪ ಪರಿಶಿಷ್ಟ ಪಂಗಡದ ಮೀಸಲಾತಿ ಶೇ.7.5ರಷ್ಟು ಹೆಚ್ಚಿಸಿದರೆ ಕತ್ತು ಕತ್ತರಿಸಿ ಅವರ ಪಾದದಡಿ ಇಡಲು ಸಿದ್ದ’

-ರಾಜುಗೌಡ, ಶಾಸಕ

ಬಹಿಷ್ಕರಿಸಿದ ಮಾಧ್ಯಮಗಳು

ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಅವರ ಪುತ್ಥಳಿಗೆ ಸಿಎಂ ಯಡಿಯೂರಪ್ಪ ಮಾಲಾರ್ಪಣೆ ಕಾರ್ಯಕ್ರಮ ಚಿತ್ರೀಕರಿಸಲು ಅವಕಾಶ ನೀಡಿಲ್ಲ ಎಂದು ಖಾಸಗಿ ಸುದ್ಧಿ ವಾಹಿನಿಗಳ ಪ್ರತಿನಿಧಿಗಳು ವಿಧಾನಸೌಧ ಬ್ಯಾಕ್ವೆಂಟ್ ಸಭಾಂಗಣದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಬಹಿಷ್ಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News