ಮುಸ್ಲಿಂ ವಿರೋಧಿ ಹೇಳಿಕೆ: ಶಾಸಕನಿಗೆ ಬಿಜೆಪಿ ನೋಟಿಸ್

Update: 2019-10-13 14:19 GMT

 ಹೊಸದಿಲ್ಲಿ,ಅ.13: ಮುಸ್ಲಿಂ ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವ ಹಾಗೂ ಅವರ ಮತಗಳು ತನಗೆ ಅಗತ್ಯವಿಲ್ಲವೆಂದು ಹೇಳಿರುವ ಉತ್ತರಾಖಂಡದ ಬಿಜೆಪಿ ಶಾಸಕ ರಾಜ್‌ಕುಮಾರ್ ತುಕ್ರಾಲ್ ರಿಗೆ ಬಿಜೆಪಿಯು ನೋಟಿಸ್ ನೀಡಿದೆ.

    ಈ ವಿವಾದಾತ್ಮಕ ಹೇಳಿಕೆಯ ಬಗ್ಗೆ ಒಂದು ವಾರದೊಳಗೆ ವಿವರಣೆ ನೀಡುವಂತೆ ಬಿಜೆಪಿಯು ರುದ್ರಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ತುಕ್ರಾಲ್‌ಗೆ ಸೂಚಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ತುಕ್ರಾಲ್ ವಿವಾದಿತ ಹೇಳಿಕೆಯ ವಿಡಿಯೋ ತುಣುಕುಗಳು ಪ್ರಸಾರವಾದ ಬಳಿಕ ಬಿಜೆಪಿ ಅವರಿಗೆ ನೋಟಿಸ್ ನೀಡಿದೆ.

  ಆದಾಗ್ಯೂ, ಈ ವಿಡಿಯೋವನ್ನು ತಿರುಚಲಾಗಿದೆಯೆಂದು ತುಕ್ರಾಲ್ ಹೇಳಿಕೊಂಡಿದ್ದಾರೆ. 2011ರಲ್ಲಿ ರುದ್ರಪುರದಲ್ಲಿ ನಡೆದ ಗಲಭೆಗಳ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಮತ ಯಾಚನೆಗೆ ಮುಸ್ಲಿಮರ ಬಳಿಗೆ ನಾವು ಹೋಗುವುದಿಲ್ಲವೆಂಬುದು ನಿಜವೆಂದು ತುಕ್ರಾಲ್ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿತ್ತು.

 ವಿಡಿಯೋದಲ್ಲಿ ತುಕ್ರಾಲ್ ಅವರು ಭಾಷಣ ಆರಂಭಿಸುವ ಮುನ್ನ ಸಭೆಯಲ್ಲಿದ್ದ ಮುಸ್ಲಿಮರು ಸ್ಥಳದಿಂದ ನಿರ್ಗಮಿಸುವಂತೆ ಹೇಳುತ್ತಿರುವುದನ್ನು ತೋರಿಸಲಾಗಿದೆ. ‘‘ನನಗೆ ಮುಸ್ಲಿಮರ ಮತಗಳು ಬೇಕಿಲ್ಲ’’ ಎಂದು ಅವರು ಹೇಳುತ್ತಿರುವುದನ್ನು ಅದರಲ್ಲಿ ತೋರಿಸಲಾಗಿದೆ. ‘‘ನನ್ನ ಬದುಕೊಂದು ತೆರೆದ ಪುಸ್ತಕವಾಗಿದೆ. ನಾನು ಯಾವುದೇ ಮುಸ್ಲಿಮನ ಮನೆಯಿಂದ ನೀರನ್ನು ಕುಡಿಯುವುದಿಲ್ಲ. ಹಿಂದುಗಳನ್ನು ಅಶುದ್ಧಗೊಳಿಸಲು ಅವರ ಹೆಂಡಂದಿರು ಚಹಾ, ಶ್ಯಾವಿಗೆ, ರೋಟಿಗಳಿಗೆ ಉಗುಳುತ್ತಾರೆಂದು ಆತ ಹೇಳುತ್ತಿರುವುದನ್ನು ತೋರಿಸಲಾಗಿದೆ. ನಾನು ಬದುಕಿರುವವರೆಗೆ ನಾನು ಅವರ ಮನೆಗೆ ಹೋಗಲಾರೆ’’ ಎಂದು ತುಕ್ರಾಲ್ ಹೇಳುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ತಾನು ಮುಸ್ಲಿಮರಿಗಾಗಿ ಯಾವುದೇ ಕೆಲಸವನ್ನೂ ಮಾಡಿಲ್ಲವೆಂದೂ ಆತ ಹೇಳಿದ್ದಾರೆನ್ನಲಾಗಿದೆ. ತುಕ್ರಾಲ್‌ರ ವಿವಾದಾತ್ಮಕ ಹೇಳಿಕೆಯಿಂದ ತಮ್ಮ ಪಕ್ಷವು ಅಂತರವನ್ನು ಕಾಯ್ದುಕೊಂಡಿರುವುದಾಗಿ ಉತ್ತರಾಖಂಡದ ಬಿಜೆಪಿ ಅಧ್ಯಕ್ಷ ಹಾಗೂ ನೈನಿತಾಲ್ ಸಂಸದ ಅಜಯ್ ಭಟ್ ತಿಳಿಸಿದ್ದಾರೆ.

ಬಿಜೆಪಿಯು ಸರ್ವರಿಗೂ ಕಲ್ಯಾಣ ಹಾಗೂ ಸಂತುಷ್ಟಿಯನ್ನು ಬಯಸುವ ಸಿದ್ದಾಂತದಲ್ಲಿ ನಂಬಿಕೆಯಿಟ್ಟಿರುವ ಪಕ್ಷವಾಗಿದೆಯೆಂದು ಭಟ್ ತಿಳಿಸಿದ್ದಾರೆ. ಅಜಯ್ ಭಟ್ ಅವರು ನಿರ್ದೇಶನದ ಮೇರೆಗೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅನಿಲ್ ಗೋಯಲ್ ಅವರು ತುಕ್ರಾಲ್‌ಗೆ ನೋಟಿಸ್ ಜಾರಿಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News