ಈ 25 ವರ್ಷದ ಉದ್ಯಮಿಯ ಸಂಪತ್ತು 7500 ಕೋಟಿ ರೂ. !

Update: 2019-10-15 05:56 GMT

ಹೊಸದಿಲ್ಲಿ :  ಇಪ್ಪತ್ತೈದರ ಅಸುಪಾಸಿನ ಯುವಕರು ಒಂದೋ ಉದ್ಯೋಗಗಳನ್ನು ಅರಸುತ್ತಿರುತ್ತಾರೆ, ಇಲ್ಲವೇ ಉದ್ಯೋಗದಲ್ಲಿದ್ದರೆ ಭಡ್ತಿಗಾಗಿ ಹಾತೊರೆಯುತ್ತಾರೆ. ಆದರೆ ಈ 25 ವರ್ಷದ ಯುವಕ ಅದಾಗಲೇ ಕೋಟ್ಯಾಧಿಪತಿ.

ಇವರೇ  ಓಯೋ ಹೋಟೆಲ್ಸ್ ಆ್ಯಂಡ್ ಹೋಮ್ಸ್ ಸ್ಥಾಪಕ ಹಾಗೂ ಸಿಇಒ  ರಿತೇಶ್ ಅಗರ್ವಾಲ್.

ಸ್ವಪ್ರಯತ್ನದಿಂದ ಉದ್ಯಮಿಯಾದ 40ರ ಹರೆಯದ ಕೆಳಗಿನ ಉದ್ಯಮಿಗಳ ಪೈಕಿ ಇವರೇ ಅತ್ಯಂತ ಕಿರಿಯರು. ಐಐಎಫ್‍ಎಲ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2019 ಪ್ರಕಾರ ಅವರ ಒಟ್ಟು ಸಂಪತ್ತಿನ ಮೌಲ್ಯ 7,500 ಕೋಟಿ ರೂ. ಈ ವರ್ಷ ಅವರ ಸಂಪತ್ತಿನ ಮೌಲ್ಯ ಶೇ 188ರಷ್ಟು ಏರಿಕೆಯಾಗಿದೆ.

ರಿತೇಶ್ ಅವರ ಓಯೋ ಸಂಸ್ಥೆಯ ನೆಟ್‍ವರ್ಕ್‍ನಲ್ಲಿ  ಭಾರತದ 500ಕ್ಕೂ ಅಧಿಕ ನಗರಗಳಲ್ಲಿ 18,000 ಕ್ಕೂ ಅಧಿಕ ಹೋಟೆಲ್‍ಗಳಿವೆ. ಈ  ಸಂಸ್ಥೆಗಳ ನಿವ್ವಳ ಮೌಲ್ಯ ಡಿಸೆಂಬರ್ 2018ರಲ್ಲಿ 1.8 ಬಿಲಿಯನ್ ಡಾಲರ್ ಆಗಿದ್ದು ವಿಶ್ವದಾದ್ಯಂತ 20,000 ಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ.

ಹಲವಾರು ಹೂಡಿಕೆದಾರರಿಂದ ಸಂಸ್ಥೆ ಐದು ಸುತ್ತುಗಳಲ್ಲಿ 1.5 ಬಿಲಿಯನ್ ಡಾಲರ್ ಗೂ ಹೆಚ್ಚು ಹೂಡಿಕೆಗಳನ್ನು ಪಡೆದಿದೆ. ಜಗತ್ತಿನಾದ್ಯಂತದ 80 ದೇಶಗಳ 800 ನಗರಗಳಲ್ಲಿ  ಓಯೋ ಜಾಲದಲ್ಲಿ 35,000 ಹೋಟೆಲ್‍ಗಳು ಹಾಗೂ 1,25,000 ಹಾಲಿಡೇ ಹೋಂಗಳು- ಹೀಗೆ ಒಟ್ಟು 12 ಲಕ್ಷ ಕೊಠಡಿಗಳಿವೆ.

ತಮ್ಮ 16ನೇ  ವಯಸ್ಸಿನಲ್ಲಿ ದೇಶದ ಉದ್ದಗಲ ಸಂಚರಿಸಿ ಬಜೆಟ್ ಹೋಟೆಲ್‍ಗಳಲ್ಲಿ ತಂಗಿದ್ದ ವೇಳೆ ಅವರಿಗೆ ಓಯೋ ಸ್ಥಾಪಿಸುವ ಐಡಿಯಾ ಹೊಳೆದಿತ್ತು. ಒಡಿಶಾದ ನಕ್ಸಲ್ ಪೀಡಿತ ಪಟ್ಟಣವಾದ ಬಿಸ್ಸಂಕಟಕ್ ಎಂಬಲ್ಲಿನವರಾಗಿರುವ ರಿತೇಶ್  ಕಾಲೇಜನ್ನು ಅರ್ಧದಲ್ಲಿಯೇ ಬಿಟ್ಟವರು. ಅಷ್ಟಕ್ಕೂ ಅವರೇಕೆ ಓಯೋ ರೂಮ್ಸ್ ಸ್ಥಾಪಿಸಿದರು ಗೊತ್ತೇ ? ಚಿಕ್ಕಂದಿನಲ್ಲಿ ಸಂಬಂಧಿಗಳ ಮನೆಯಲ್ಲಿದ್ದಾಗ ಟಿವಿ ರಿಮೋಟ್ ಅವರ ಕೈಗೆ ದೊರೆಯುತ್ತಲೇ ಇರಲಿಲ್ಲ. ಅವರಿಗೆ ಕಾರ್ಟೂನ್ ನೋಡಬೇಕಿದ್ದರೆ ಇತರರಿಗೆ ಧಾರಾವಾಹಿಗಳನ್ನು ನೋಡಬೇಕಿತ್ತು. ಓಯೋದ ಇಂಗ್ಲಿಷ್ ಸ್ಪೆಲ್ಲಿಂಗ್ ಒ ವೈ ಒ ಎಂದರೆ ಆನ್ ಯುವರ್ ಓನ್ ಎಂದು ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು.

2011ರಲ್ಲಿ ದಿಲ್ಲಿಗೆ ಉದ್ಯಮಿಯಾಗುವ ಕನಸಿನೊಂದಿಗೆ ಅವರು ಬಂದಿದ್ದರು. ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಹಾಜರಾಗದೇ ಇದ್ದ ಅವರು  ಮುಂದೆ ಯುನಿವರ್ಸಿಟ್ ಆಫ್ ಲಂಡನ್ ನ ಇಂಡಿಯಾ ಕ್ಯಾಂಪಸ್ ಗೆ  ಅರ್ಜಿ ಸಲ್ಲಿಸಿದ್ದರೂ ಅದು ಬೇಡವೆಂದು ಕೈಬಿಟ್ಟರು. 18 ವರ್ಷದವರಾಗಿರುವಾಗಲೇ ಒರಾವೆಲ್ ಸ್ಟೇಸ್ ಸ್ಥಾಪಿಸಿದ ಅವರು ವೆಂಚರ್ ನರ್ಸರಿ ಜತೆ ಸಂಪರ್ಕ ಸಾಧಿಸಿ ಮುಂಬೈಯಲ್ಲಿ ಮೂರು ತಿಂಗಳ ತರಬೇತಿ ನಂತರ ಮೂಲ  ಬಂಡವಾಳವಾಗಿ 30 ಲಕ್ಷ ರೂ. ಪಡೆದರು.

ಫೇಸ್ಬುಕ್ ಹೂಡಿಕೆದಾರ ಹಾಗೂ ಪೇ ಪಾಲ್ ಸಹ ಸ್ಥಾಪಕ ಪೀಟರ್ ಥೀಲ್ ಅವರಿಂದ  ಒಂದು ಲಕ್ಷ ಡಾಲರ್ ಪೀಟರ್ ಥೀಲ್ ಫೆಲ್ಲೋಶಿಪ್ ಪಡೆದ ಮೊದಲ ಭಾರತೀಯರಾದರು ರಿತೇಶ್. ತಮ್ಮದೇ ಉದ್ಯಮ ನಡೆಸುವ ಸಲುವಾಗಿ ಕಾಲೇಜನ್ನು ಅರ್ಧದಲ್ಲಿಯೇ ತೊರೆಯುವ 20 ವರ್ಷದ ಕೆಳಗಿನ ಉದ್ಯಮಿಗಳಿಗೆ ಈ ಫೆಲ್ಲೋಶೀಪ್ ದೊರೆಯುತ್ತದೆ.

ಅವರ ಕಂಪೆನಿಯಲ್ಲಿ 10ರಿಂದ 20 ಐಐಎಂ ಪದವೀಧರರು, ಇನ್ನೂರಕ್ಕೂ ಅಧಿಕ ಐಐಟಿ ಪದವೀಧರರು ಮತ್ತಿತರ ಪ್ರತಿಷ್ಠಿತ ಸಂಸ್ಥೆಗಳ ಪದವೀಧರರ ಪೈಕಿ ಅವರೊಬ್ಬರೇ ಕಾಲೇಜು ಡ್ರಾಪ್ ಔಟ್.

''ಭಾರತದಲ್ಲಿ ಕಾಲೇಜು ಡ್ರಾಪ್ ಔಟ್ ಗಳಲ್ಲಿ ಪ್ರತಿಭಾವಂತರನ್ನು ನಾನಿನ್ನೂ ನೋಡಿಲ್ಲ. ಮುಂದಿನ ವರ್ಷಗಳಲ್ಲಿ ಪ್ರತಿಭಾವಂತ ಡ್ರಾಪ್ ಔಟ್ ಗಳನ್ನು ನಾವು ಕಾಣಬಹುದು. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಭಾಷಣ ನೀಡಲು ಹೋದಾಗ ಸಲಹೆ ಕೇಳಿದರೆ ಕಾಲೇಜು ಬಿಡಿ ಎನ್ನುತ್ತೇನೆ ಎನ್ನುತ್ತಾರೆ ಈ ಯುವಕ.

ಮೈಕ್ರೋಸಾಫ್ಟ್ ಸ್ಥಾಪಕ ಹಾಗೂ ಕಾಲೇಜ್ ಡ್ರಾಪ್ ಔಟ್ ಆಗಿರುವ ಬಿಲ್ ಗೇಟ್ಸ್ ಹಾಗು ಓಲಾ ಕ್ಯಾಬ್ಸ್ ಸ್ಥಾಪಕ ಭವೀಶ್ ಅಗರ್ವಾಲ್ ಅವರಿಂದ ತಾವು ಸ್ಫೂರ್ತಿ ಪಡೆಯುತ್ತಿರುವುದಾಗಿ ರಿತೇಶ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News