ರಾಷ್ಟ್ರವಾದ ಬಡತನದಂತಹ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ

Update: 2019-10-15 11:24 GMT

ಹೊಸದಲ್ಲಿ, ಅ.15: ರಾಷ್ಟ್ರವಾದ ಮುಖ್ಯವಾಗಿ ಭಾರತದಂತಹ ದೇಶದಲ್ಲಿ ಬಡತನ ಮುಂತಾದ ಪ್ರಮುಖ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುತ್ತದೆ ಎಂದು ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಖ್ಯಾತ ಅರ್ಥಶಾಸ್ತ್ರಜ್ಞ ಅಭಿಜಿತ್  ವಿನಾಯಕ್ ಬ್ಯಾನರ್ಜಿ ಹೇಳಿದ್ದಾರೆ.

ತಮ್ಮ ಪತ್ನಿ ಎಸ್ತರ್ ಡುಫ್ಲೊ ಹಾಗೂ ಹಾರ್ವರ್ಡ್‍ ನ ಮೈಕಲ್ ಕ್ರೆಮೆರ್ ಜತೆಗೆ ನೊಬೆಲ್ ಪ್ರಶಸ್ತಿ ಜಂಟಿಯಾಗಿ ಪಡೆದಿರುವ ಬ್ಯಾನರ್ಜಿ, ಇಂಡಿಯಾ ಟುಡೆಯ ರಾಜದೀಪ್ ಸರ್ದೇಸಾಯಿ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, ನಮ್ಮ ಸಮಾಜದಲ್ಲಿ ಅಸಮ್ಮತಿಗೆ ಇರುವ ಸ್ಥಳಾವಕಾಶವನ್ನು ಸಂರಕ್ಷಿಸುವುದು ಅಗತ್ಯವಾಗಿದೆ ಎಂದರು.

ಕಾನೂನುಬದ್ಧ ಅಸಮ್ಮತಿಗೆ ಅವಕಾಶವಿರುವ ಸ್ಥಳದ ಬದಲು ದೇಶದ್ರೋಹಿ ಚಿಂತನೆಗಳಿಗೆ ಅವಕಾಶ ನೀಡುವ ಸ್ಥಳವೆಂಬಂತೆ ಜೆಎನ್‍ಯುವನ್ನು ಬಿಂಬಿಸಲಾಗಿದೆ ಎಂದು ಹೇಳಿದ ಅವರು, ರಾಷ್ಟ್ರವಾದ, ಆರ್ಥಿಕ ಪ್ರಗತಿ ಮುಂತಾದ ಮೂಲಭೂತ ವಿಚಾರಗಳ ಕುರಿತಂತೆ ಅಸಮ್ಮತಿಗೆ ಅವಕಾಶವಿರಬೇಕು ಎಂದರು.

ಭಾರತದಂತಹ ದೇಶದಲ್ಲಿ ಕನಿಷ್ಠ ಆದಾಯ ಯೋಜನೆಯ ಅಗತ್ಯವಿದೆ ಎಂದು ಹೇಳಿದ ಬ್ಯಾನರ್ಜಿ, ನೈಸರ್ಗಿಕ ವಿಕೋಪಗಳಲ್ಲಿ ತಮ್ಮದೆಲ್ಲವನ್ನೂ ಕಳೆದುಕೊಳ್ಳುವ ಸಂದರ್ಭ ಅಥವಾ ಒಂದು ಬ್ಯಾಂಕ್ ಮುಳುಗಿದಂತಹ ಸಂದರ್ಭದಲ್ಲಿ ಇಂತಹ ಯೋಜನೆ ಅಗತ್ಯವಾಗುತ್ತದೆ ಎಂದರು.

"ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ವಿಧಿಸಿ ಸರಕಾರ ಸರಿಯಾದ ಕ್ರಮವನ್ನೇ ಕೈಗೊಂಡಿದ್ದರೂ ನಂತರ ಕಾರ್ಪೊರೇಟ್ ತೆರಿಗೆ ಕಡಿತಗೊಳಿಸಿ ಇದರಿಂದ ದೇಶದ ಆರ್ಥಿಕ ನಿಧಾನಗತಿಯ ಸಮಸ್ಯೆಗೆ ಪರಿಹಾರ ದೊರೆಯಬಹುದೆಂದು ಅಂದುಕೊಂಡಿದೆ. ಇದು ದೇಶದ ಅರ್ಥವ್ಯವಸ್ಥೆಯನ್ನು ರಕ್ಷಿಸುವುದಿಲ್ಲ. ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ಸುಸ್ಥಿರ ಆರ್ಥಿಕತೆ ಸಾಧಿಸಬಹುದು'' ಎಂದು ಬ್ಯಾನರ್ಜಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News