ಉಗ್ರರ ನಿಗ್ರಹಕ್ಕೆ ಬೆಂಗಳೂರಿನಲ್ಲಿ ಎಟಿಎಸ್ ಕಾರ್ಯಾರಂಭ: ಗೃಹ ಸಚಿವ ಬೊಮ್ಮಾಯಿ

Update: 2019-10-15 11:59 GMT

ಬೆಂಗಳೂರು, ಅ.15: ಉಗ್ರಗಾಮಿ ಸಂಘಟನೆಯು ತನ್ನ ಜಾಲವನ್ನು ವಿಸ್ತರಿಸಿಕೊಳ್ಳಲು ಬೆಂಗಳೂರು ನಗರವನ್ನು ನೆಲೆಯಾಗಿ ಬಳಸಿಕೊಳ್ಳುತ್ತಿದೆ ಎಂಬ ಆತಂಕಕಾರಿ ಮಾಹಿತಿ ಎನ್‌ಐಎ ಬಹಿರಂಗಪಡಿಸಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿಗೆ ಸೀಮಿತವಾಗಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕಾರ್ಯಾರಂಭ ಮಾಡಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಂಗಳವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರನ್ನು ಉಗ್ರರು ಬಳಸಿಕೊಂಡಿದ್ದಾರೆ ಎನ್ನುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಎಟಿಎಸ್ ಸ್ಥಾಪಿಸಿ, ತ್ವರಿತಗತಿಯಲ್ಲಿಯೇ ಕಾರ್ಯಾಚರಣೆ ನಡೆಸಲಿದೆ ಎಂದರು.

ನಗರದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾಲ್‌ಗಳು, ಮಾರುಕಟ್ಟೆ, ಇನ್ನಿತರ ಜನನಿಬಿಡ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಿ ಕಟ್ಟೆಚ್ಚರ ವಹಿಸಲಾಗಿದೆ. ಶಂಕಿತರ ಮೇಲೆ ಹದ್ದಿನ ಕಣ್ಣಿಡಬೇಕೆಂದು ನಗರ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಸೈಬರ್, ಕಡಿವಾಣ: ರಾಜಧಾನಿ ವ್ಯಾಪ್ತಿಯೊಳಗೆ ಆನ್‌ಲೈನ್ ವಹಿವಾಟು ಹೆಚ್ಚಿರುವ ಹಿನ್ನೆಲೆ ದಿನೇ ದಿನೇ ಸೈಬರ್ ಅಪರಾಧ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮಾದಕ ವಸ್ತುಗಳ ಜಾಲ ಹಾಗೂ ಆರ್ಥಿಕ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನಗರದ ಎಲ್ಲಾ 8 ಮಂದಿ ಡಿಸಿಪಿ ಕಚೇರಿಗಳ ವ್ಯಾಪ್ತಿಯಲ್ಲಿ ಸೈಬರ್ ಸೆಲ್ (ಸಿಇಎನ್) ಸ್ಥಾಪಿಸಿ, ಇಂತಹ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಸುಮಾರು 1.20 ಕೋಟಿಗೂ ಅಧಿಕ ಜನಸಂಖ್ಯೆ ಇದ್ದು, ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಅಪರಾಧಗಳ ಪತ್ತೆಗೆ ಕಾಲಮಿತಿ ಹಾಕಿಕೊಳ್ಳಬೇಕು. ಯಾವುದೇ ಅಪರಾಧ ಪ್ರಕರಣಗಳನ್ನು ತ್ವರಿತವಾಗಿ ಪತ್ತೆಹಚ್ಚಿ, ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸುವಂತೆ ಸೂಚಿಸಲಾಗಿದೆ ಎಂದ ಅವರು, ನಗರದಲ್ಲಿ ರೌಡಿ ನಿಗ್ರಹ ದಳವನ್ನು ಬಲಗೊಳಿಸಿ, ಎಲ್ಲಿಯೂ ರೌಡಿ ಚಟುವಟಿಕೆಗಳು ನಡೆಯದಂತೆ ಸೂಚನೆ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಸುಗಮಗೊಳಿಸುವುದರ ಜೊತೆಗೆ ನಗರವನ್ನು ಸುಂದರಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಪೊಲೀಸರ ಜೊತೆ ಜನಸಾಮಾನ್ಯರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಉಮೇಶ್ ಕುಮಾರ್, ಮುರುಗನ್, ಹೇಮಂತ್ ನಿಂಬಾಳ್ಕರ್, ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News