ಅಧಿವೇಶನಕ್ಕೆ ಮಾಧ್ಯಮಗಳ ನಿರ್ಬಂಧ ಖಂಡಿಸಿ, ಔರಾದ್ಕರ್ ವರದಿ ಜಾರಿಗೆ ಆಗ್ರಹಿಸಿ ಧರಣಿ

Update: 2019-10-15 16:40 GMT

ಬೆಂಗಳೂರು, ಅ.15: ಪೊಲೀಸ್‌ರ ವೇತನ ಪರಿಷ್ಕರಣೆ ಸಂಬಂಧ ಔರಾದ್ಕರ್ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ಹಾಗೂ ಅಧಿವೇಶನಕ್ಕೆ ಮಾಧ್ಯಮಗಳ ನಿರ್ಬಂಧ ಖಂಡಿಸಿ ಕನ್ನಡ ಚಳವಳಿ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದಿಲ್ಲಿ ಪ್ರತಿಭಟನೆ ನಡೆಸಿದರು.

ಮಂಗಳವಾರ ನಗರದ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಪೊಲೀಸ್ ವೇಷ ಧರಿಸಿಕೊಂಡು, ಕೈಯಲ್ಲಿ ಕ್ಯಾಮೆರಾ ಹಿಡಿದು ಪ್ರತಿಭಟನೆ ನಡೆಸಿದರು. ಪೊಲೀಸ್ ಸಿಬ್ಬಂದಿಯ ವೇತನ ಪರಿಷ್ಕರಣೆ ಮಾಡಲು ಹಿಂದೇಟು ಹಾಕುತ್ತಿರುವುದು ಸಲ್ಲ. ಹಾಗೆ ಮಾಧ್ಯಮಗಳ ನಿರ್ಬಂಧವೂ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಧ್ಯಮದವರನ್ನು ಅಧಿವೇಶನದಿಂದ ದೂರವಿಟ್ಟಿರುವುದು ಪ್ರಜಾಪ್ರಭುತ್ವ ವಿರೋಧಿ. ಇದರಿಂದ ಮಾಧ್ಯಮದವರ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಈ ತೀರ್ಮಾನವನ್ನು ಸಭಾಧ್ಯಕ್ಷರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಮಾಧ್ಯಮದವರ ಕ್ಯಾಮರಾಗಳನ್ನು ನಿಷೇಧ ಮಾಡಿರುವಂತಹದು ಇತಿಹಾಸದಲ್ಲಿ ಇದೇ ಮೊದಲ ಬಾರಿಯಾಗಿದೆ. ಅಲ್ಲದೆ, ಸರಕಾರಿ ಕಾರ್ಯಕ್ರಮಗಳಿಗೂ ಮಾಧ್ಯಮದವರ ಪ್ರವೇಶಕ್ಕೆ ಅನುಮತಿ ನಿರಾಕರಿಸಿರುವುದು ಅತ್ಯಂತ ಖಂಡನೀಯ. ರಾಜ್ಯ ಸರಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಇದು ಪ್ರಜಾಪ್ರಭುತ್ವ ದೇಶ, ಇಂತಹ ಕ್ರಮಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದರು.

ಪೊಲೀಸ್ ಸಿಬ್ಬಂದಿ ಹಲವಾರು ತಿಂಗಳುಗಳಿಂದ ವೇತನ ಪರಿಷ್ಕರಣೆಗೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ, ರಾಜ್ಯ ಸರಕಾರ ಔರಾದ್ಕರ್ ವರದಿ ಜಾರಿ ಮಾಡುವ ಭರವಸೆ ನೀಡುತ್ತಿದೆಯಾದರೂ, ಅದನ್ನು ಅನುಷ್ಠಾನಕ್ಕೆ ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರಕಾರ ಕೂಡಲೇ ಔರಾದ್ಕರ್ ವರದಿಯನ್ನು ಜಾರಿ ಮಾಡುವ ಮೂಲಕ ಪೊಲೀಸರ ಮುಖದಲ್ಲಿ ಕಳೆ ತುಂಬಬೇಕು. ಅದೇ ರೀತಿ ಮಾಧ್ಯಮಗಳಿಗೆ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News