ವೈಜ್ಞಾನಿಕ ರೀತಿಯಲ್ಲಿ ಕಸ ನಿರ್ವಹಣೆ ಮಾಡದಿದ್ದರೆ ಸೂಪರ್ ಸೀಡ್: ಬಿಬಿಎಂಪಿಗೆ ಹೈಕೋರ್ಟ್ ಎಚ್ಚರಿಕೆ

Update: 2019-10-15 18:36 GMT

ಬೆಂಗಳೂರು, ಅ.15: ಬಿಬಿಎಂಪಿ ವ್ಯಾಪ್ತಿಯಲ್ಲಿ ಸರಿಯಾಗಿ ಕಸ ನಿರ್ವಹಣೆ ಮಾಡದಿದ್ದರೆ, ಮನೆಗಳನ್ನು ನಿರ್ಮಾಣ ಮಾಡದಂತೆ ಆದೇಶ ಮಾಡಬೇಕಾಗುತ್ತದೆ ಹಾಗೂ ಬಿಬಿಎಂಪಿಯನ್ನು ಸೂಪರ್ ಸೀಡ್ ಮಾಡಲು ಚಿಂತನೆ ನಡೆಸಬೇಕಾಗುತ್ತದೆ ಎಂದು ಹೈಕೋರ್ಟ್ ಬಿಬಿಎಂಪಿ ಹಾಗೂ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದೆ.

ಕಸ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದಂತೆ ಜಿ.ಆರ್.ಮೋಹನ್ ಸೇರಿ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಬಿಬಿಎಂಪಿ ಮತ್ತು ರಾಜ್ಯ ಸರಕಾರದ ನಿರ್ಲಕ್ಷತನದಿಂದ ನಗರದ ಜನತೆ ಸಂಕಟ ಅನುಭವಿಸುತ್ತಿದ್ದಾರೆ. ತ್ಯಾಜ್ಯ ನಿರ್ವಹಣೆ ವಿಚಾರದಲ್ಲಿ ಬಿಬಿಎಂಪಿ ಹಾಗೂ ರಾಜ್ಯ ಸರಕಾರ ಸೂಕ್ತ ನಿರ್ಧಾರ ತೆಗೆದುಕೊಂಡಿಲ್ಲ. ಸದ್ಯದ ಪರಿಸ್ಥಿತಿಯಲ್ಲೇ ಪ್ರತಿನಿತ್ಯ 5 ಸಾವಿರಕ್ಕೂ ಹೆಚ್ಚು ಮೆಟ್ರಿಕ್ ಟನ್ ಕಸ ಉತ್ಪತ್ತಿ ಆಗುತ್ತಿದೆ. ಆದರೆ, ಆ ಪೈಕಿ ಕೇವಲ ನಾಲ್ಕರಲ್ಲಿ ಒಂದು ಭಾಗ ಮಾತ್ರ ಸರಿಯಾಗಿ ವಿಲೇವಾರಿ ಆಗುತ್ತಿದೆ. ಉಳಿದ ಮೂರು ಭಾಗ ಕಾನೂನು ಬಾಹಿರ ಮತ್ತು ಅವೈಜ್ಞಾನಿಕವಾಗಿ ವಿಲೇವಾರಿ ಆಗುತ್ತಿದೆ ಎಂದು ನ್ಯಾಯಪೀಠವು ಅಭಿಪ್ರಾಯ ವ್ಯಕ್ತಪಡಿಸಿತು.

ರಾಜ್ಯ ಸರಕಾರ ಕಸ ವಿಲೇವಾರಿ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ಕೂಡಲೇ ಕೈಗೊಳ್ಳಬೇಕಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ತಿಂಗಳೊಳಗೆ ಬಿಬಿಎಂಪಿ ಆಕ್ಷೇಪಣೆ ಸಲ್ಲಿಸಬೇಕು. ಬಿಬಿಎಂಪಿ ಕನ್‌ಸ್ಟ್ರಕ್ಷನ್ ತ್ಯಾಜ್ಯವನ್ನು ಹೇಗೆ ವಿಲೇವಾರಿ ಮಾಡುತ್ತಿದ್ದಾರೆ ಎಂಬುದರ ಬಗ್ಗೆಯೂ ಮಾಹಿತಿ ನೀಡಬೇಕು. ರಾಜ್ಯ ಸರಕಾರ ಹಾಗೂ ಬಿಬಿಎಂಪಿ ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಡಿ.16ರೊಳಗೆ ವರದಿ ಸಲ್ಲಿಸಬೇಕು ಸೂಚನೆ ನೀಡಿತು.

ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧವೂ ಗರಂ:

ಈ ವೇಳೆ ಕಸ ಸರಿಯಾಗಿ ವಿಲೇವಾರಿ ಮಾಡದ ಬಿಬಿಎಂಪಿ ಮೇಲೆ ಕ್ರಮ ತೆಗೆದುಕೊಳ್ಳದ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕೋರ್ಟ್ ತರಾಟೆ ತೆಗೆದುಕೊಂಡಿದೆ. ಹೈಕೋರ್ಟ್ ಆದೇಶದಂತೆ ಬಿಬಿಎಂಪಿ ಸರಿಯಾಗಿ ಕಸ ನಿರ್ವಹಣೆ ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿತು. ಮಾಲಿನ್ಯ ನಿಯಂತ್ರಣ ಮಂಡಳಿಗೆ ಬಿಬಿಎಂಪಿ ಮೇಲೆ ಕಾನೂನು ಉಲ್ಲಂಘಿಸಿರುವುದಕ್ಕೆ ಯಾವುದೇ ರೀತಿಯ ಕ್ರಮ ಜರುಗಿಸಬಹುದು. ಆದರೆ, ಇಲ್ಲಿಯತನಕ ಯಾವುದೇ ಕ್ರಮ ತೆಗೆದುಕೊಂಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿತು. ಜೊತೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಡಿ.16ರೊಳಗೆ ವರದಿ ಸಲ್ಲಿಸಬೇಕು. ಇಲ್ಲಿಯತನಕ ಸರಿಯಾಗಿ ಕಸ ನಿರ್ವಹಣೆ ಮಾಡದ ಬಿಬಿಎಂಪಿ ವಿರುದ್ಧ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂಬುದರ ಬಗ್ಗೆ ವರದಿಯಲ್ಲಿ ತಿಳಿಸಲು ಸೂಚಿಸಿದೆ.

ವೀಕ್ಷಣಾ ಕಮಿಟಿ ಬಗ್ಗೆಯೂ ಆಕ್ರೋಶ

ನಗರದಲ್ಲಿ ಕಸ ನಿರ್ವಹಣೆಗೆ ಬಗ್ಗೆ ನಿಗಾ ಇಡಲು ರಾಜ್ಯ ಸರಕಾರ ರಚಿಸಿದ್ದ ವಿಶೇಷ ತಂಡದ ಕಾರ್ಯ ವೈಖರಿಗೆ ನ್ಯಾಯಪೀಠವು ಕಿಡಿಕಾರಿತು. ಈ ವಿಶೇಷ ತಂಡ ಆಗಾಗ ಕಸ ನಿರ್ವಹಣೆ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಹಾಗೂ ಸಭೆಗಳನ್ನು ಮಾಡಬೇಕಿತ್ತು. ಆದರೆ, 2016ರಿಂದ 2019ರ ತನಕ ಈ ತಂಡ ಬರೀ 4 ಸಭೆಗಳನು ಮಾಡಿದ್ದು, ಸಭೆಗಳ ಬಗ್ಗೆ ಯಾವುದೇ ನಡವಳಿಗಳನ್ನು ಇಟ್ಟಿಲ್ಲ. ಅದಕ್ಕೆ ಈ ವೀಕ್ಷಣಾ ತಂಡ ಸಹ ವರದಿ ಸಲ್ಲಿಸಲು ಸೂಚನೆ ನೀಡಿದೆ. ಈ ವೇಳೆ ಇನ್ನು ಮುಂದೆ 6 ತಿಂಗಳಿಗೊಮ್ಮೆ ಸಭೆ ನಡೆಸಬೇಕೆಂದು ಸೂಚಿಸಿ, ವಿಚಾರಣೆಯನ್ನು ಡಿ.18ಕ್ಕೆ ಮುಂದೂಡಿಕೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News