ಸರಕಾರ ಅಸ್ತಿತ್ವಕ್ಕೆ ಬಂದು ತಿಂಗಳುಗಳು ಕಳೆದರೂ ಶಕ್ತಿ ಕಳೆದುಕೊಂಡಿರುವ ಬಿಎಂಪಿಸಿ

Update: 2019-10-15 18:47 GMT

ಬೆಂಗಳೂರು, ಅ.15: ಹೊಸ ಸರಕಾರ ಅಸ್ತಿತ್ವಕ್ಕೆ ಬಂದು ಎರಡೂವರೆ ತಿಂಗಳು ಕಳೆದರೂ ಬೆಂಗಳೂರು ಮಹಾನಗರ ಯೋಜನಾ ಸಮಿತಿ(ಬಿಎಂಪಿಸಿ)ಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿಲ್ಲ.

ನಗರಾಭಿವೃದ್ಧಿ ರೂಪುರೇಷೆ ತಯಾರಿಸುವಲ್ಲಿ ಮಹತ್ತರ ಪಾತ್ರ ವಹಿಸುವ ಬಿಎಂಪಿಸಿ ಇದ್ದೂ ಇಲ್ಲದಂತಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇದನ್ನು ರಚನೆ ಮಾಡಲಾಗಿತ್ತಾದರೂ, ಕೇವಲ ಎರಡು ಬಾರಿಯಷ್ಟೇ ಸಭೆ ಸೇರಲು ಸಾಧ್ಯವಾಗಿದೆ.

ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ನ್ಯಾಯಾಲಯಕ್ಕೆ ಉತ್ತರಿಸುವ ಸಲುವಾಗಿ ಬಿಎಂಪಿಸಿ ರಚನೆ ಮಾಡಲಾಗಿತ್ತು. ಆದರೆ, ಅದು ಎಂದೂ ರೂಪುರೇಷೆ ತಯಾರು ಮಾಡಲು ಕ್ರಿಯಾಶೀಲವಾಗಿಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ಸೇರಬೇಕಾದ ಸಮಿತಿ ನಾಲ್ಕು ವರ್ಷಗಳಲ್ಲಿ ಎರಡು ಬಾರಿಯಷ್ಟೇ ಸಭೆ ಸೇರಿದೆ ಎಂದು ಸಿಟಿಜನ್ಸ್ ಆಕ್ಷನ್ ಫೋರಂನ ಎನ್.ಎಸ್.ಮುಕುಂದ್ ಅಭಿಪ್ರಾಯಿಸಿದ್ದಾರೆ.

ಸಂವಿಧಾನದ 74ನೇ ತಿದ್ದುಪಡಿಗಳ ಪ್ರಕಾರ ನಗರದ ಅಭಿವೃದ್ಧಿ ಮುನ್ನೋಟಗಳಿಗೆ ಸಂಬಂಧಿಸಿದ ನೀತಿಯನ್ನು ರೂಪಿಸುವ ಅಧಿಕಾರ ಇರುವುದು ಬಿಎಂಪಿಸಿಗೆ. ಆದರೆ, ಅದರ ಮಹತ್ವವನ್ನು ಯಾವ ಸರಕಾರವೂ ಅರಿತುಕೊಂಡಿಲ್ಲ. ಹೀಗಿದ್ದರೂ, ಪಶ್ಚಿಮ ಬಂಗಾಳವನ್ನು ಬಿಟ್ಟರೆ ಬೇರೆ ಯಾವ ರಾಜ್ಯಗಳಲ್ಲಿಯೂ ಎಂಪಿಸಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿಲ್ಲ.

ನಗರದ ಮೂಲಸೌಕರ್ಯ ಅಭಿವೃದ್ಧಿಯ ಭಾರಿ ಯೋಜನೆಗಳಿಗೆಲ್ಲ ಬಿಎಂಪಿಸಿ ಅನುಮೋದನೆ ಅತ್ಯಗತ್ಯ. ಜನಪ್ರತಿನಿಧಿಗಳು ಹಾಗೂ ನಗರ ತಜ್ಞರನ್ನು ಒಳಗೊಂಡ ಈ ಸಮಿತಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದೇ ಆದರೆ, ನಗರದ ಅಭಿವೃದ್ಧಿಗೆ ವೇಗ ನೀಡಬಹುದು. ಸಾಕಷ್ಟು ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬಹುದು. ನೂತನ ಸರಕಾರವಾದರೂ ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News