'ಹಿಂಸಾಚಾರ, ಸ್ಫೋಟ ನೆನಪಿದೆಯೇ?': ಚುನಾವಣಾ ಪ್ರಚಾರದಲ್ಲಿ ಬಿಜೆಪಿ ನಾಯಕನ ವಿವಾದಾತ್ಮಕ ಭಾಷಣ

Update: 2019-10-17 10:41 GMT

ಮುಂಬೈ, ಅ.17: ನಗರದ ಮುಸ್ಲಿಂ ಬಾಹುಳ್ಯ ಪ್ರದೇಶವಾದ ಮುಂಬಾದೇವಿಯ ಕುಂಭಾರ್ವಾಡ ಎಂಬಲ್ಲಿ ಶಿವಸೇನೆ ಅಭ್ಯರ್ಥಿ ಪಾಂಡುರಂಗ್ ಸಕ್ಪಾಲ ಪರವಾಗಿ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿದ್ದ ಮುಂಬೈ ಬಿಜೆಪಿ ಅಧ್ಯಕ್ಷ ಮಂಗಲ್ ಪ್ರಭಾತ್ ಲೋಧಾ ತಮ್ಮ ಭಾಷಣದಲ್ಲಿ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಅಮೀನ್ ಪಟೇಲ್ ಮತ್ತವರ ಬೆಂಬಲಿಗ ಮತದಾರರನ್ನು ಗುರಿಯಾಗಿಸಿ ಆಡಿದ ಮಾತುಗಳು ಸಾಕಷ್ಟು ವಿವಾದಕ್ಕೀಡಾಗಿವೆ.

ನಗರದಲ್ಲಿ 1992ರಲ್ಲಿ ನಡೆದ ಹಿಂಸಾಚಾರದ ವೇಳೆ ಶಾಂತಿ ಕದಡಲು ಬಳಸಲಾದ ಬಾಂಬುಗಳು ಹಾಗೂ ಬುಲೆಟ್ ಗಳನ್ನು ಇಲ್ಲಿನ ಗಲ್ಲಿಗಳಲ್ಲಿ ತಯಾರಿಸಲಾಗಿತ್ತು ಎಂದು ಅವರು ತಮ್ಮ ಭಾಷಣದಲ್ಲಿ ಆರೋಪಿಸಿದರು. "ನೆನಪಿದೆಯೇ ? 1992ರ ಹಿಂಸಾಚಾರದ ನಂತರ ಮುಂಬೈಯಲ್ಲಿ ಅದೆಷ್ಟು ಸ್ಫೋಟಗಳು ಸಂಭವಿಸಿದ್ದವು?, ಎಷ್ಟು ಗುಂಡುಗಳು ಹಾರಿದ್ದವು?, ಅವುಗಳೆಲ್ಲವನ್ನೂ ಇಲ್ಲಿನ ನಿಮ್ಮ ಐದು ಕಿಮೀ ವ್ಯಾಪ್ತಿಯ ಗಲ್ಲಿಗಳಲ್ಲಿ ತಯಾರಿಸಲಾಗಿತ್ತು. ಈ ಗಲ್ಲಿಗಳ ಜನರ ಮತ ಪಡೆದ ವ್ಯಕ್ತಿ ಮುಂದಿನ ದಿನಗಳಲ್ಲಿ ನಿಮ್ಮೆಲ್ಲರನ್ನು ಹೇಗೆ ನೋಡಿಕೊಳ್ಳಲು ಸಾಧ್ಯ?'' ಎಂದು ಲೋಧ ತಮ್ಮ ಭಾಷಣದಲ್ಲಿ ಪ್ರಶ್ನಿಸಿದ್ದಾರೆ.

ಅವರು ಯಾವುದೇ ಪ್ರದೇಶವನ್ನು ಉಲ್ಲೇಖಿಸದೇ ಇದ್ದರೂ ಮುಸ್ಲಿಂ ಬಾಹುಳ್ಯದ ಭೆಂಡಿ ಬಜಾರ್ ಹಾಗೂ ನಾಗ್ಪಾಡವನ್ನು ಉಲ್ಲೇಖಿಸುತ್ತಿದ್ದಾರೆಂಬುದು ಸ್ಪಷ್ಟವಾಗಿತ್ತು. ಲೋಧ ಅವರ ಭಾಷಣ ಮುಗಿದ ನಂತರ ಅಲ್ಲಿಗೆ ಆದಿತ್ಯ ಠಾಕ್ರೆ ಆಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News