ಮಾಜಿ ಕುಲಪತಿ ಡಾ.ಅಯ್ಯಪ್ಪ ಕೊಲೆ ಪ್ರಕರಣ: ಶಿಕ್ಷಣ ತಜ್ಞ ಸೇರಿ ಇಬ್ಬರ ಬಂಧನ

Update: 2019-10-17 12:30 GMT

ಬೆಂಗಳೂರು, ಅ.17: ಅಲಯನ್ಸ್ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ. ಅಯ್ಯಪ್ಪದೊರೆ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಶಿಕ್ಷಣ ತಜ್ಞ ಸುಧೀರ್ ಅಂಗೂರ್ ಸೇರಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಟಿಎಂ ಲೇಔಟ್‌ನ ಸುಧೀರ್ ಅಂಗೂರ್(57) ಕೃತ್ಯದ ಸೂತ್ರಧಾರನಾಗಿದ್ದಾನೆ. ಅಲಯನ್ಸ್ ವಿವಿಯಲ್ಲಿ ಎಕ್ಸಿಕ್ಯೂಟಿವ್ ಆಗಿದ್ದ ಜೆಸಿನಗರದ ಸೂರಜ್‌ಸಿಂಗ್(29) ಬಂಧಿತ ಆರೋಪಿಯಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೂ ನಾಲ್ವರ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಹೇಳಿದರು.

ಅಲಯನ್ಸ್ ವಿವಿಗೆ ಸಂಬಂಧಿಸಿದ ಜಮೀನು ಪ್ರಕರಣದ ಸಂಬಂಧ ಮಾಜಿ ಕುಲಪತಿ ಡಾ.ಅಯ್ಯಪ್ಪದೊರೆಯನ್ನು ಹತ್ಯೆ ಮಾಡಲು 4-5ತಿಂಗಳಿಂದ ಸಂಚು ರೂಪಿಸಲಾಗಿತ್ತು. ಆರೋಪಿ ಸೂರಜ್ ಸಿಂಗ್ ವಿಶ್ವವಿದ್ಯಾಲಯದಲ್ಲಿ ನೆಪ ಮಾತ್ರಕ್ಕೆ ಎಕ್ಸಿಕ್ಯೂಟಿವ್ ಆಗಿದ್ದು, ಆತ ಆಯ್ಯಪ್ಪ ದೊರೆಯ ಚಲನ-ವಲನಗಳನ್ನು ಗಮನಿಸುವುದಕ್ಕಾಗಿಯೇ ನಿಯೋಜಿಸಲಾಗಿತ್ತು ಎಂದು ಅವರು ವಿವರಿಸಿದರು.

ಒಂದು ಕೋಟಿ ರೂ. ಸುಪಾರಿ: ಆರೋಪಿ ಸುಧೀರ್ ಅಂಗೂರ್ ಹಾಗೂ ಆತನ ಸಹೋದರ ಮಧುಕರ್ ಅಂಗೂರ್ ನಡುವೆ 25ಕ್ಕೂ ಹೆಚ್ಚು ಪ್ರಕರಣಗಳಿರುವುದು ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ಮಾಜಿ ಕುಲಪತಿ ಡಾ.ಅಯ್ಯಪ್ಪ ದೊರೆ ಹಾಗೂ ಮಧುಕರ್ ಅಂಗೂರ್ ಇಬ್ಬರ ಹತ್ಯೆಗೆ ಒಂದು ಕೋಟಿ ರೂ. ಸುಪಾರಿ ನೀಡಲಾಗಿತ್ತು ಎಂದು ಅವರು ಹೇಳಿದರು.

ಒಂದು ಕೋಟಿ ಸುಪಾರಿಯಲ್ಲಿ ಇಬ್ಬರನ್ನು ಮುಗಿಸುವ ಸಂಬಂಧ ಪ್ರತಿಷ್ಠಿತ ವಕೀಲರೊಬ್ಬರ ಸಲಹೆ ಪಡೆಯಲಾಗಿತ್ತು. ಅವರೇ ಕೃತ್ಯಕ್ಕೆ ಮಾರ್ಗದರ್ಶಕರಾಗಿದ್ದರು. ಹತ್ಯೆಗೂ ಮುನ್ನವೇ ಸೂರಜ್ ಸಿಂಗ್ ಸೇರಿ ಕೃತ್ಯವೆಸಗಿದ ಇತರ ನಾಲ್ಕು ಮಂದಿಗೆ ತಲಾ 20 ಲಕ್ಷ ರೂ. ನೀಡಲಾಗಿತ್ತು ಎಂದು ಅವರು ಹೇಳಿದರು.

ಮಧುಕರ್ ಅಂಗೂರ್ ಕೊಲೆಗೆ ಸಂಚು ರೂಪಿಸುವಷ್ಟರಲ್ಲಿ ಅಯ್ಯಪ್ಪದೊರೆ ಕೊಲೆ ಪ್ರಕರಣ ಬೆನ್ನು ಹತ್ತಿದ ಉತ್ತರ ಭಾಗದ ಡಿಸಿಪಿ ಶಶಿಕುಮಾರ್ ನೇತೃತ್ವದ ತಂಡ ಸೂರಜ್‌ಸಿಂಗ್‌ನನ್ನು ಬಂಧಿಸಿ ಮತ್ತೊಂದು ಕೊಲೆ ಕೃತ್ಯವನ್ನು ವಿಫಲಗೊಳಿಸಿದೆ. ಈ ಪೊಲೀಸ್ ತಂಡಕ್ಕೆ ಒಂದು ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಅವರು ಹೇಳಿದರು.

ಡಾ.ಅಯ್ಯಪ್ಪ ದೊರೆ ಹಾಗೂ ಮಧುಕರ್ ಅಂಗೂರ್‌ರನ್ನು ಕೊಲೆ ಮಾಡಲು ನಗರದ ಪ್ರತಿಷ್ಠಿತ ವಕೀಲರೊಬ್ಬರು ಸಲಹೆ ನೀಡಿದ್ದರು. ಡಾ.ಅಯ್ಯಪ್ಪ ದೊರೆ ಕೊಲೆ ಕೃತ್ಯದಲ್ಲಿ ಅವರ ಪಾತ್ರವಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ತನಿಖೆಯಿಂದ ಮತ್ತಷ್ಟು ಮಾಹಿತಿ ಸಂಗ್ರಹಿಸಿ ಪ್ರತಿಷ್ಠಿತ ವಕೀಲರೊಬ್ಬರನ್ನು ಬಂಧಿಸಲು ಕ್ರಮಕೈಗೊಳ್ಳಲಾಗುವುದು.
-ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News