9 ವರ್ಷ ಜೈಲುವಾಸದ ಬಳಿಕ ಅಮಾಯಕನೆಂದು ಬಿಡುಗಡೆ

Update: 2019-10-17 13:26 GMT

ಬೆಂಗಳೂರು, ಅ.17: "ಮುಂಬೈನಲ್ಲಿ 2006ರ ಜುಲೈ 11ರಂದು ಸಂಭವಿಸಿದ ಬಾಂಬ್ ಸ್ಪೋಟ ಪ್ರಕರಣದಲ್ಲಿ ಮಹಾರಾಷ್ಟ್ರ ಎಟಿಎಸ್ ನನ್ನನ್ನು ಬಂಧಿಸಿ 9 ವರ್ಷ ಜೈಲಿನಲ್ಲಿಟ್ಟಿತ್ತು. ಆನಂತರ, ನನ್ನ ವಿರುದ್ಧ ಯಾವುದೇ ಸಾಕ್ಷಾಧಾರಗಳಿಲ್ಲವೆಂದು ವಿಶೇಷ ನ್ಯಾಯಾಲಯ ಬಿಡುಗಡೆ ಮಾಡಿತು" ಎಂದು ಶಿಕ್ಷಕ ಅಬ್ದುಲ್ ವಾಹಿದ್ ಶೇಕ್ ಗದ್ಗದಿತರಾದರು.

ನಗರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 13 ಆರೋಪಿಗಳನ್ನು ಈ ಪ್ರಕರಣದಲ್ಲಿ ಮಹಾರಾಷ್ಟ್ರ ಎಟಿಎಸ್ ಬಂಧಿಸಿತು. ಈ ಪೈಕಿ ನಾನೊಬ್ಬ ಮಾತ್ರ ಬಿಡುಗಡೆಯಾಗಿದ್ದೇನೆ. ಇನ್ನುಳಿದ 12 ಮಂದಿ ಜೈಲಿನಲ್ಲಿದ್ದಾರೆ ಎಂದರು.

"ಶಿಕ್ಷಕನಾಗಿದ್ದ ನನ್ನನ್ನು 2006ರಲ್ಲಿ ಬಂಧಿಸಲಾಗಿತ್ತು. 2015ರವರೆಗೆ ನಾನು 9 ವರ್ಷಗಳ ಕಾಲ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದೆ. ಈ ಅವಧಿಯಲ್ಲಿ ನಾನು ಹಾಗೂ ನನ್ನ ಕುಟುಂಬ ಅನುಭವಿಸಿರುವ ಮಾನಸಿಕ ಯಾತನೆಯನ್ನು ಬಾಯಿ ಮಾತಿನಲ್ಲಿ ವಿವರಿಸಲು ಸಾಧ್ಯವಿಲ್ಲದಷ್ಟು ಸಂಕಟವಾಗುತ್ತದೆ" ಎಂದು ಅವರು ಹೇಳಿದರು.

ಜೈಲಿನಲ್ಲಿ ಕಳೆದ ಅವಧಿಯಲ್ಲಿನ ನನ್ನ ಅನುಭವದ ಕುರಿತು ‘ಬೇಗುನ್ಹಾ ಕೈದಿ-ಆತಂಕ್‌ವಾದ್ ಕೆ ಝೂಟೆ ಮೊಕದ್ದಮೊಂಮೆ ಫಸಾಯೆಗಯೇ ಮುಸ್ಲಿಮ್ ನೌಜವಾನೋಂಕಿ ದಾಸ್ತಾನ್’(ನಿರಪರಾಧಿ ಕೈದಿ-ಆತಂಕವಾದದ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿರುವ ಮುಸ್ಲಿಮ್ ಯುವಕರ ಕಥನ) ಎಂಬ ಪುಸ್ತಕವನ್ನು ಬರೆದಿದ್ದು, ಉರ್ದು ಹಾಗೂ ಹಿಂದಿ ಭಾಷೆಯಲ್ಲಿ ಲಭ್ಯವಿದೆ ಎಂದು ಅವರು ಹೇಳಿದರು.

ಒಬ್ಬ ಸಾಮಾನ್ಯ ನಾಗರಿಕ ಯಾವುದೇ ತಪ್ಪು ಮಾಡದೇ ತನ್ನ ಜೀವಿತಾವಧಿಯ 9 ವರ್ಷಗಳ ಕಾಲ ಜೈಲಿನಲ್ಲಿ ಕಳೆದು ಬಿಡುಗಡೆಯಾಗುತ್ತಾನೆ. ಆದರೆ, ಸರಕಾರದ ವತಿಯಿಂದ ಒಂದೇ ಒಂದು ವಿಷಾದ ಅಥವಾ ಕ್ಷಮಾಪಣೆಯ ಹೇಳಿಕೆ ಹೊರ ಬರುವುದಿಲ್ಲ ಎಂದು ಅಬ್ದುಲ್ ವಾಹಿದ್ ಶೇಕ್ ತಿಳಿಸಿದರು.

"ನಮ್ಮಂತಹವರನ್ನು ಬಂಧಿಸಿದಾಗ ಮಾಧ್ಯಮಗಳಲ್ಲಿ ಹಲವಾರು ಬಗೆಯ ವರದಿಗಳು ಪ್ರಕಟವಾಗುತ್ತವೆ. ಆದರೆ, ನಾವು ನಿರಪರಾಧಿ ಎಂದು ನ್ಯಾಯಾಲಯ ಬಿಡುಗಡೆ ಮಾಡಿದಾಗ ಯಾವ ಮಾಧ್ಯಮಗಳು ಈ ಬಗ್ಗೆ ಪ್ರಾಮುಖ್ಯತೆ ಕೊಡುವುದಿಲ್ಲ" ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಭಯೋತ್ಪಾದನೆಯ ಪ್ರಕರಣಗಳಲ್ಲಿ ಅಮಾಯಕ ಮುಸ್ಲಿಮ್ ಯುವಕರನ್ನು ಸಿಲುಕಿಸಿ ಅವರಿಗೆ ಕೊಡುತ್ತಿರುವ ಮಾನಸಿಕ ಹಾಗೂ ದೈಹಿಕ ಹಿಂಸೆಯ ಕುರಿತು ನನ್ನ ಪುಸ್ತಕದಲ್ಲಿ ವಿವರವಾಗಿ ತಿಳಿಸಿದ್ದೇನೆ. ಸಮಾಜದ ಎಲ್ಲ ವರ್ಗದ ಜನರು ಈ ಪುಸಕ್ತವನ್ನು ಓದಬೇಕು ಎಂಬುದು ನನ್ನ ಕಳಕಳಿಯ ಮನವಿಯಾಗಿದೆ ಎಂದು ಅವರು ಹೇಳಿದರು.

ಸಕಾರಣವಿಲ್ಲದೆ ಒಬ್ಬ ವ್ಯಕ್ತಿಯನ್ನು ಬಂಧಿಸಿ, ವರ್ಷಾನುಗಟ್ಟಲೆ ಜೈಲಿನಲ್ಲಿಡುವುದರಿಂದ ಅವರ ಕುಟುಂಬ ಹಾಗೂ ವೈಯಕ್ತಿಕ ಜೀವನದ ಮೇಲೆ ಬೀರುವಂತಹ ಗಂಭೀರ ಪರಿಣಾಮಗಳ ಕುರಿತು ನಮ್ಮ ತನಿಖಾ ಸಂಸ್ಥೆಗಳು, ಸರಕಾರ ಗಮನಹರಿಸುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ ಎಂದು ಅಬ್ದುಲ್ ವಾಹಿದ್ ಶೇಕ್ ತಿಳಿಸಿದರು.

ಸುಳ್ಳು ಪ್ರಕರಣದಲ್ಲಿ ನನ್ನನ್ನು ಸಿಲುಕಿಸಿ ಸೆರೆವಾಸ ಅನುಭವಿಸುವಂತೆ ಮಾಡಿದ ಸರಕಾರದ ವಿರುದ್ಧ ವಕೀಲರ ಸಲಹೆಯಂತೆ ನಾನು ಯಾವುದೇ ರೀತಿಯ ಮಾನನಷ್ಟ ಮೊಕದ್ದಮೆ ದಾಖಲು ಮಾಡಿಲ್ಲ. ಆದರೆ, ಇಲ್ಲಿ ಮಾನವೀಯತೆಯ ಪ್ರಶ್ನೆ ಎದುರಾಗುತ್ತದೆ. ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಸರಕಾರ ಅಥವಾ ಪೊಲೀಸರು ನಿರಪರಾಧಿಗಳನ್ನು ಬಲಿಪಶು ಮಾಡುವುದು ಎಷ್ಟರ ಮಟ್ಟಿಗೆ ಸರಿ?

-ಅಬ್ದುಲ್ ವಾಹಿದ್ ಶೇಕ್, ಬೇಗುನ್ಹಾ ಕೈದಿ ಕೃತಿಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News