ಪ್ರತಿಪಕ್ಷಗಳನ್ನು ದೂರುತ್ತಾ ಕುಳಿತರೆ ಕುಸಿಯುತ್ತಿರುವ ಆರ್ಥಿಕತೆ ಸುಧಾರಿಸುವುದಿಲ್ಲ

Update: 2019-10-17 14:03 GMT

ಮುಂಬೈ,ಅ.17: ಕೇವಲ ಪ್ರತಿಪಕ್ಷಗಳನ್ನೇ ದೂರುತ್ತಿರುವುದಕ್ಕಾಗಿ ಮತ್ತು ಕುಸಿಯುತ್ತಿರುವ ಆರ್ಥಿಕತೆಯನ್ನು ಎತ್ತಿ ಹಿಡಿಯಲು ಯಾವುದೇ ಪರಿಹಾರ ಕಂಡುಕೊಳ್ಳದ್ದಕ್ಕಾಗಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಗುರುವಾರ ಕೇಂದ್ರ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.

ಆರ್ಥಿಕತೆಯನ್ನು ಸರಿಪಡಿಸುವ ಮುನ್ನ ಅದರ ಹಿಂಜರಿತಕ್ಕೆ ಕಾರಣಗಳನ್ನು ವಿಶ್ಲೇಷಿಸುವುದು ಅಗತ್ಯವಾಗಿದೆ,ಆದರೆ ಸರಕಾರವು ಕೇವಲ ಪ್ರತಿಪಕ್ಷಗಳನ್ನು ದೂರುವುದರಲ್ಲಿಯೇ ನಿರತವಾಗಿದೆ ಮತ್ತು ಇದೇ ಕಾರಣದಿಂದ ಆರ್ಥಿಕ ಕುಸಿತಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಅದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಂಗ್ ಹೇಳಿದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾತನಾಡುತ್ತಿದ್ದ ಅವರು,ಸರಕಾರದ ನಿರಾಸಕ್ತಿ ಮತ್ತು ಅಸಾಮರ್ಥ್ಯದಿಂದಾಗಿ ಆರ್ಥಿಕ ಹಿಂಜರಿತದ ದುಷ್ಪರಿಣಾಮಗಳು ಎಲ್ಲ ರಾಜ್ಯಗಳ ಜನರನ್ನು,ವಿಶೇಷವಾಗಿ ಮಹಾರಾಷ್ಟ್ರವನ್ನು ಹೆಚ್ಚು ತೀವ್ರವಾಗಿ ಕಾಡುತ್ತಿವೆ. ಮಹಾರಾಷ್ಟ್ರದಲ್ಲಿ ಕೈಗಾರಿಕಾ ಕ್ಷೇತ್ರವು ಅತ್ಯಂತ ಮಂದಗತಿಯಲ್ಲಿ ಸಾಗುತ್ತಿದೆ. ಚೀನಾದಿಂದ ಹೆಚ್ಚಿನ ಉತ್ಪನ್ನಗಳು ಆಮದಾಗುತ್ತಿದ್ದು,ರಾಜ್ಯದ ಸ್ವಂತ ಉತ್ಪಾದನಾ ಕ್ಷೇತ್ರವು ವಿಫಲಗೊಳ್ಳುತ್ತಿದೆ ಮತ್ತು ಉದ್ಯಮ ಆಸಕ್ತಿಗಳು ಕ್ಷೀಣಿಸುತ್ತಿವೆ. ಮಹಾರಾಷ್ಟ್ರದ ತಯಾರಿಕೆ ಬೆಳವಣಿಗೆ ದರವು ಕಳೆದ ನಾಲ್ಕು ವರ್ಷಗಳಿಂದಲೂ ನಿರಂತರವಾಗಿ ಕುಸಿಯುತ್ತಿದೆ ಎಂದರು.

ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳಿಗಾಗಿಯೂ ಕೇಂದ್ರವನ್ನು ಟೀಕಿಸಿದ ಅವರು,ಹೂಡಿಕೆಯಲ್ಲಿ ನಂ.1 ಆಗಿರುತ್ತಿದ್ದ ಮಹಾರಾಷ್ಟ್ರವು ಇಂದು ರೈತರ ಆತ್ಮಹತ್ಯೆಯಲ್ಲಿ ನಂ.1 ಆಗಿದೆ ಎಂದರು.

ಅಸ್ವಸ್ಥ ಕ್ಷೇತ್ರಗಳ ಚೇತರಿಕೆಗೆ ಸರಕಾರವು ಚುರುಕಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ದೇಶದಲ್ಲಿ ಆರ್ಥಿಕ ಹಿಂಜರಿತ ಸುದೀರ್ಘ ಕಾಲ ಮುಂದುವರಿಯಲಿದೆ ಎಂಬ ತನ್ನ ಎಚ್ಚರಿಕೆಯನ್ನು ಪುನರುಚ್ಚರಿಸಿದ ಅವರು,ಆರ್ಥಿಕತೆಯ ವಿಸ್ತರಣೆಯನ್ನು ಬಿಟ್ಟರೆ ನಿರುದ್ಯೋಗ ಸಮಸ್ಯೆಗೆ ಬೇರೆ ಕಾರ್ಯಸಾಧ್ಯ ಪರಿಹಾರವಿಲ್ಲ. ಸರಕಾರವು ಉದ್ಯಮಗಳು ಮತ್ತು ಕೈಗಾರಿಕೆಗಳಿಗೆ ಸಾಧ್ಯವಿದ್ದಷ್ಟು ಉತ್ತೇಜನ ನೀಡಬೇಕು ಎಂದರು.

ಪಿಎಂಸಿ ಬ್ಯಾಂಕಿನ ಹತಾಶ ಗ್ರಾಹಕರನ್ನೂ ಭೇಟಿಯಾದ ಸಿಂಗ್,ಬ್ಯಾಂಕಿನಲ್ಲಿ ನಡೆದಿರುವುದು ಅತ್ಯಂತ ದುರದೃಷ್ಟಕರವಾಗಿದೆ. ಈ ಬಗ್ಗೆ ತಕ್ಷಣ ಗಮನ ಹರಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ,ಪ್ರಧಾನಿ ಮತ್ತು ವಿತ್ತ ಸಚಿವರನ್ನು ತಾನು ಕೋರುತ್ತಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News