ಅಯೋಧ್ಯೆ ವಿವಾದ ಇತ್ಯರ್ಥವಾಗಬೇಕು, ತೀರ್ಪಿನ ಅಗತ್ಯವಿಲ್ಲ: ಸುನ್ನಿ ವಕ್ಫ್ ಬೋರ್ಡ್ ವಕೀಲ

Update: 2019-10-17 14:15 GMT

ಹೊಸದಿಲ್ಲಿ, ಅ. 17: ಅಯೋಧ್ಯೆ ಭೂ ಒಡೆತನ ವಿವಾದದಲ್ಲಿ ಭಾಗಿಯಾಗಿರುವ ಕೆಲವು ಕಕ್ಷಿಗಾರರು ಇತ್ಯರ್ಥಕ್ಕೆ ತಲುಪಿದ್ದಾರೆ. ಇದು ಇತ್ತಂಡಗಳಿಗೆ ಗೆಲುವಿನ ಖಾತರಿ ನೀಡುತ್ತದೆ. ಆದುದರಿಂದ ತೀರ್ಪಿನ ಅಗತ್ಯ ಇಲ್ಲ ಎಂದು ಸುನ್ನಿ ವಕ್ಫ್ ಮಂಡಳಿಯನ್ನು ಪ್ರತಿನಿಧಿಸಿದ ನ್ಯಾಯವಾದಿ ಹೇಳಿದ್ದಾರೆ.

ವಕ್ಫ್ ಮಂಡಳಿ ಅಧ್ಯಕ್ಷ ಝಫರ್ ಅಹ್ಮದ್ ಫಾರೂಕಿ ಅವರ ಪರವಾಗಿ ಮಾತನಾಡಿದ ನ್ಯಾಯವಾದಿ ಶಾಹಿದ್ ರಿಝ್ವಿ, ಇತ್ಯರ್ಥದ ನಿಯಮಗಳಿಂದ ಯಾವುದೇ ಕಕ್ಷಿಗಾರರು ನಿರಾಶೆಗೊಳ್ಳುವುದಿಲ್ಲ. ಆದುದರಿಂದ ಭಿನ್ನಾಭಿಪ್ರಾಯ ತ್ಯಜಿಸಿ ಹಲವು ವರ್ಷಗಳ ಹಳೆಯ ವಿವಾದವನ್ನು ಬಗೆಹರಿಸಲು ಕೈ ಜೋಡಿಸಿ ಎಂದು ನಾವು ಇತರ ಕಕ್ಷಿಗಾರ (ರಾಮ್ ಲಲ್ಲಾ ವಿರಾಜ್‌ಮಾನ್ ಹಾಗೂ ನಿರ್ಮೋಹಿ ಅಖಾಡ)ರಲ್ಲಿ ಆಗ್ರಹಿಸುತ್ತೇನೆ ಎಂದರು.

 ಪ್ರಕರಣದಲ್ಲಿ ಸುನ್ನಿ ವಕ್ಫ್ ಮಂಡಳಿ ಮುಸ್ಲಿಂ ಭಾಗದ ಒಂದು ಪ್ರಮುಖ ಕಕ್ಷಿಗಾರ. ಸ್ವಸಾಮರ್ಥ್ಯದಲ್ಲಿ ಮನವಿ ಸಲ್ಲಿಸಿದ ಕಕ್ಷಿಗಾರರ ಸಹಿತ ಇತರ ಮುಸ್ಲಿಂ ಕಕ್ಷಿಗಾರರು ಕೂಡ ಈ ಪ್ರಕರಣದಲ್ಲಿ ಒಳಗೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಮೊದಲ ಸುತ್ತಿನ ಮಧ್ಯಸ್ಥಿಕೆಯಲ್ಲಿ ಕಕ್ಷಿಗಾರರು ಸೌಹಾರ್ದಯುತ ನಿರ್ಧಾರಕ್ಕೆ ತಲುಪಲು ಸಾಧ್ಯವಾಗದ ಬಳಿಕ ಎರಡನೇ ಸುತ್ತಿನ ಮಾತುಕತೆಯಲ್ಲಿ ರಾಮ್ ಲಲ್ಲಾ ಹಾಗೂ ನಿರ್ಮೋಹಿ ಅಖಾಡ ಪಾಲ್ಗೊಂಡಿರಲಿಲ್ಲ. ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 6ರಿಂದ ದಿನಂಪ್ರತಿ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News