ಮುಸ್ಲಿಮರನ್ನು ಹೊರತುಪಡಿಸಿ ಎಲ್ಲ ವಲಸಿಗರಿಗೂ ಪೌರತ್ವ: ಅಮಿತ್ ಶಾ ನೀಡಿದ ಕಾರಣವೇನು ಗೊತ್ತಾ?

Update: 2019-10-17 14:38 GMT

ಹೊಸದಿಲ್ಲಿ,ಅ.17: ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ತನ್ನ ನಿಲುವನ್ನು ತಿಳಿಸಿರುವ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು,ತಮ್ಮ ಜೀವಗಳನ್ನುಳಿಸಿಕೊಳ್ಳಲು ನೆರೆಯ ರಾಷ್ಟ್ರಗಳಿಂದ ಪರಾರಿಯಾಗಿರುವವರನ್ನು ಮಾತ್ರ ಭಾರತದಲ್ಲಿ ಆಶ್ರಯ ಪಡೆಯಲು ಅರ್ಹ ನಿರಾಶ್ರಿತರು ಎಂದು ಪರಿಗಣಿಸಬಹುದಾಗಿದೆ ಎಂದು ಹೇಳಿದ್ದಾರೆ.

ಆಂಗ್ಲ ಸುದ್ದಿವಾಹಿನಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಶಾ ಅವರು,ಮುಸ್ಲಿಮರನ್ನು ಹೊರತುಪಡಿಸಿ ಹಿಂದುಗಳು,ಕ್ರೈಸ್ತರು,ಬೌದ್ಧರು ಮತ್ತು ಜೈನರಿಗೆ ಮಾತ್ರ ಪೌರತ್ವವನ್ನು ನೀಡುವ ಸರಕಾರದ ನಿಲುವನ್ನು ವಿವರಿಸಿದ್ದಾರೆ.

“ಮುಸ್ಲಿಮರಿಗೇಕೆ ಪೌರತ್ವ ಕೊಡುಗೆಯನ್ನು ನೀಡಲಾಗಿಲ್ಲ” ಎಂಬ ಪ್ರಶ್ನೆಗೆ ಉತ್ತರಿಸಿದ ಶಾ,ಅಫಘಾನಿಸ್ತಾನ,ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಅಲ್ಪಸಂಖ್ಯಾತರು ಇಲ್ಲಿಗೆ ಬಂದಿದ್ದರೆ ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುವ ಉದ್ದೇಶ ಕಾರಣವಾಗಿದೆ. ಅವರು ನಿರಾಶ್ರಿತರಾಗಿದ್ದಾರೆ ಮತ್ತು ಅಕ್ರಮ ವಲಸಿಗರಲ್ಲ. ಯಾರಾದರೂ ಜೀವನೋಪಾಯವನ್ನು ಹುಡುಕಿಕೊಂಡು ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಲು ಇಲ್ಲಿಗೆ ಬಂದರೆ ಅವರು ನುಸುಳುಕೋರರಾಗುತ್ತಾರೆ ಎಂದು ಹೇಳಿದ್ದಾರೆ.

ಅಕ್ರಮ ವಲಸಿಗರ ವ್ಯಾಖ್ಯೆಯ ಕುರಿತು ತನ್ನ ಸ್ಪಷ್ಟನೆಯು ಮುಸ್ಲಿಮರು ನುಸುಳುಕೋರರು ಎಂಬ ಅರ್ಥವನ್ನು ನೀಡುವುದಿಲ್ಲ ಎಂದಿರುವ ಅವರು,ಮುಸ್ಲಿಮರು ತಮ್ಮ ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೊಳಗಾಗಲು ಸಾಧ್ಯವಿಲ್ಲ ಮತ್ತು ಇದೇ ಕಾರಣದಿಂದ ಉದ್ದೇಶಿತ ಮಸೂದೆಯಲ್ಲಿ ಅವರಿಗೆ ಪೌರತ್ವದ ಕೊಡುಗೆಯನ್ನು ನೀಡಲಾಗಿಲ್ಲ ಎಂದಿದ್ದಾರೆ.

ದೇಶಾದ್ಯಂತ ಎನ್‌ಆರ್‌ಸಿಯ ಸುಳಿವು

ದೇಶಾದ್ಯಂತ ಎನ್‌ಆರ್‌ಸಿಯನ್ನು ಜಾರಿಗೊಳಿಸಲು ಆಡಳಿತ ಬಿಜೆಪಿಯು ತೆರೆಮರೆಯಲ್ಲಿ ಕಾರ್ಯವನ್ನು ಆರಂಭಿಸಿದೆ ಎಂಬ ಸುಳಿವು ನೀಡಿರುವ ಶಾ,ದೇಶಾದ್ಯಂತ ಬಂಧನ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದ್ದು, ಸರಕಾರವು ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ.

 ಅಕ್ರಮ ವಲಸಿಗರ ಬಂಧನ ಪ್ರಕ್ರಿಯೆಯನ್ನು ವಿದೇಶಿಯರ ನ್ಯಾಯಾಧಿಕರಣ(ಎಫ್‌ಟಿ)ಗಳು ನಿರ್ವಹಿಸಲಿವೆ. ಸರಕಾರವು ತನ್ನದೇ ಆದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಎಫ್‌ಟಿಗಳಿಗೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಯಿದೆ. ಈ ಪ್ರಕ್ರಿಯೆ ಈಗಷ್ಟೇ ಆರಂಭಗೊಂಡಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿ ಬಂಧನ ಕೇಂದ್ರವೊಂದನ್ನು ಈಗಾಗಲೇ ನಿರ್ಮಿಸಲಾಗಿದೆ ಮತ್ತು ಮಹಾರಾಷ್ಟ್ರದಲ್ಲಿ ಅದಕ್ಕಾಗಿ ಜಾಗವನ್ನು ಗುರುತಿಸಲಾಗಿದೆ ಎಂಬ ವರದಿಗಳ ನಡುವೆಯೇ ಶಾ ಅವರ ಈ ಹೇಳಿಕೆ ಹೊರಬಿದ್ದಿದೆ. ಇವೆರಡೂ ಬಿಜೆಪಿ ಆಡಳಿತದ ರಾಜ್ಯಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News