ಜನರ ಜೀವನದ ಜೊತೆ ಚೆಲ್ಲಾಟ ಆಡಿದವರ ಪರ ಸಿಎಂ ಯಡಿಯೂರಪ್ಪ ಮತ ಯಾಚನೆ: ಕುಮಾರಸ್ವಾಮಿ ವಾಗ್ದಾಳಿ

Update: 2019-10-17 14:48 GMT

ಬೆಂಗಳೂರು, ಅ.17: ರಾಜ್ಯದ ಜನರ ಜೀವನದ ಜೊತೆ ಚೆಲ್ಲಾಟ ಆಡಿದ ಮಹಾರಾಷ್ಟ್ರ ಬಿಜೆಪಿ ಸರಕಾರದ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಸಚಿವ ಸಂಪುಟದ ಸದಸ್ಯರಿಗೆ ನಾಚಿಕೆಯಾಗಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಗುರುವಾರ ಜೆ.ಪಿ.ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ ನೀಡಿದರೆ ಕರ್ನಾಟಕದ ನೀರು ಮಹಾರಾಷ್ಟ್ರಕ್ಕೆ ಬಿಡುತ್ತೇವೆ ಎನ್ನುವ ಮೂಲಕ, ನಮಗೆ ಮೋಸ ಮಾಡಿದವರ ಪರವಾಗಿ ಯಡಿಯೂರಪ್ಪ ಮಾತನಾಡಿದ್ದಾರೆ. ರಾಜ್ಯದ ಜನ ಈ ಕುತಂತ್ರವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ನನ್ನ ಸರಕಾರದ ಅವಧಿಯಲ್ಲಿ ನಾನು ಹಾಗೂ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಪದೇ ಪದೇ ಮನವಿ ಮಾಡಿದರೂ ನಮ್ಮ ರಾಜ್ಯಕ್ಕೆ ಹನಿ ನೀರು ಬಿಡಲು ಮಹಾರಾಷ್ಟ್ರ ಸರಕಾರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮನಸ್ಸು ಮಾಡಿಲ್ಲ. ನಮಗೆ ಮೋಸ ಮಾಡಿದವರ ಪರವಾಗಿ ಮತ ಯಾಚನೆ ಮಾಡಲು ಯಡಿಯೂರಪ್ಪ ಹೋಗಿದ್ದಾರೆ ಎಂದು ಅವರು ಕಿಡಿಗಾರಿದರು.

ನನ್ನ ಅಧಿಕಾರಾವಧಿಯಲ್ಲಿ ಘೋಷಣೆ ಮಾಡಿದ ರೈತರ ಸಾಲಮನ್ನಾದಿಂದಾಗಿ ಯಡಿಯೂರಪ್ಪ ಸರಕಾರಕ್ಕೆ ಯಾವುದೇ ಹೊರೆಯಾಗುವುದಿಲ್ಲ. ನಾನು ಬಜೆಟ್‌ನಲ್ಲಿಯೇ ಅಗತ್ಯ ಹಣಕಾಸು ಇಟ್ಟಿದ್ದೇನೆ. ಹೊಸದಾಗಿ ಹಣ ಕ್ರೋಡೀಕರಿಸುವ ಅಗತ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಅನರ್ಹ ಶಾಸಕ ಎಚ್.ವಿಶ್ವನಾಥ್ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್ ನಡುವಿನ ಆಣೆ ಪ್ರಮಾಣದ ಕುರಿತು ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಖರೀದಿ ಬಗ್ಗೆ ಜನ ಸಾಮಾನ್ಯರಿಗೂ ಗೊತ್ತಿದೆ. ಇವತ್ತು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಡೆದ ನಾಟಕದ ಅಗತ್ಯ ಇರಲಿಲ್ಲ. ಮುಂದಿನ ತೀರ್ಮಾನವನ್ನು ಹುಣಸೂರಿನ ಮತದಾರರು ಮಾಡುತ್ತಾರೆ ಎಂದರು. ಸಾ.ರಾ.ಮಹೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ನಿಜ. ನಾವಿಬ್ಬರೂ ಸಹೋದರರಂತೆ ಇದ್ದೇವೆ. ರಾಜೀನಾಮೆಯನ್ನು ಅವರು ವಾಪಸ್ ಪಡೆಯುತ್ತಾರೆ. ಈಗಾಗಲೇ ಸ್ಪೀಕರ್ ಜೊತೆಯೂ ನಾನು ಈ ಸಂಬಂಧ ಮಾತನಾಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ಅನರ್ಹ ಶಾಸಕ ಕೆ.ಗೋಪಾಲಯ್ಯ ನಮಗೆ ಎರಡು ಬಾರಿ ಮೋಸ ಮಾಡಿದ್ದಾರೆ. ದೇವೇಗೌಡರ ಬಳಿ ಬೇಡಿಕೊಂಡು ಪಕ್ಷಕ್ಕೆ ವಾಪಸ್ ಆದರು. ಈಗ ಮತ್ತೆ ನಮಗೆ ದ್ರೋಹ ಬಗೆದಿದ್ದಾರೆ. ಅನರ್ಹ ಶಾಸಕರ ಪೈಕಿ ಯಾರೊಬ್ಬರನ್ನೂ ಪಕ್ಷಕ್ಕೆ ಪುನಃ ಸೇರಿಸಿಕೊಳ್ಳುವುದಿಲ್ಲ ಎಂದು ಅವರು ತಿಳಿಸಿದರು.

ನಾಯಕತ್ವ ತ್ಯಜಿಸಲು ಸಿದ್ಧ

ನಮ್ಮ ಪಕ್ಷದ ಮುಖಂಡರಿಗೆ ನನ್ನ ನಾಯಕತ್ವದ ಮೇಲೆ ವಿಶ್ವಾಸ ಇಲ್ಲದಿದ್ದರೆ ನಾನು ನಾಯಕತ್ವ ತ್ಯಜಿಸಲು ಸಿದ್ಧ. ಅಸಮಾಧಾನಿತ ಮುಖಂಡರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ಜೊತೆ ಚರ್ಚೆ ಮಾಡಿ ಹೊಸ ನಾಯಕತ್ವವನ್ನು ಹುಡುಕಿಕೊಳ್ಳಲಿ. ನನ್ನ ಅಭ್ಯಂತರವೇನು ಇಲ್ಲ.

- ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News