ಸಾಮೂಹಿಕ ಸಾರಿಗೆ ವ್ಯವಸ್ಥೆಯಿಂದ ಬದಲಾವಣೆ ಸಾಧ್ಯ: ಡಾ.ಸಿ.ಎನ್.ಅಶ್ವಥ್ ನಾರಾಯಣ

Update: 2019-10-17 14:59 GMT

ಬೆಂಗಳೂರು, ಅ.17: ಸಾಮೂಹಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಿದಲ್ಲಿ ಶೀಘ್ರವೇ ವ್ಯತ್ಯಾಸವನ್ನು ಕಾಣಬಹದು ಎಂದು ತಜ್ಞರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಶೇ.50ರಷ್ಟು ಜನ 6 ಸಾವಿರ ಬಸ್ಸುಗಳಲ್ಲಿ ಪ್ರಯಾಣ ಮಾಡಿದರೆ, ಇನ್ನುಳಿದ ಶೇ.50ರಷ್ಟು ಜನ 80 ಲಕ್ಷ ವಾಹನಗಳನ್ನು ಅವಲಂಬಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದರು.

ಗುರುವಾರ ನಗರದ ಅಲಿ ಅಸ್ಕರ್ ರಸ್ತೆಯಲ್ಲಿರುವ ಬಿಎಂಆರ್‌ಡಿಎ ಕಚೇರಿಯಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಅನುಕೂಲವಾಗುವಂತೆ ಚರ್ಚಿಸಲು ಪರಿಣಿತರು, ನಗರದ ಪ್ರಮುಖ ನಾಗರಿಕರು ಹಾಗೂ ಟ್ರಾನ್ಸ್‌ಫೋರ್ಟ್ ಫಾರ್ ಲಂಡನ್ ಸಂಸ್ಥೆಯ ಪ್ರಮುಖ ಶಶಿ ವರ್ಮಾ ಮತ್ತು ಬೆನ್ ಅವರೊಂದಿಗೆ ನಡೆಸಿದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಎಂಟಿಸಿ, ಬಿಎಂಆರ್‌ಸಿಎಲ್, ಉಪ ನಗರ ರೈಲು ಸೇವೆ ಪರಸ್ಪರ ಯಾರಿಗೂ ಸ್ಪರ್ಧಿಗಳಲ್ಲ, ಜನಸಾಮಾನ್ಯರಿಗೆ ಸೇವೆ ಒದಗಿಸುವಂತಹ ಪೂರಕ ಸೇವಾದಾರರು ಆಗಿರಬೇಕು ಎಂಬುದು ತಜ್ಞರ ಸಲಹೆ. ಇಂದಿನ ಸಭೆಯಲ್ಲಿ ಹಲವಾರು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಇತರ ಅಂತರ್‌ರಾಷ್ಟ್ರೀಯ ನಗರಗಳ ಮಾದರಿಯಲ್ಲಿ ಬೆಂಗಳೂರಿನಲ್ಲೂ ಜನಸಾಮಾನ್ಯರ ಜೀವನ ಗುಣಮಟ್ಟ ಹೆಚ್ಚಿಸಲು ಹಲವಾರು ಬದಲಾವಣೆಗಳನ್ನು ತರಬೇಕಿದೆ. ಲಂಡನ್ ನಗರವು 1800ರಲ್ಲಿಯೇ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿತ್ತು. 1820ರಿಂದಲೇ ಅಲ್ಲಿ ಸಾರಿಗೆ ವ್ಯವಸ್ಥೆ ಸೇರಿದಂತೆ ಹಲವಾರು ವ್ಯವಸ್ಥೆಗಳನ್ನು ಪರಿಚಯಿಸಲಾಗಿತ್ತು ಎಂದು ಅವರು ಹೇಳಿದರು.

ಲಂಡನ್ ನಿವಾಸಿಗಳು ನಗರ ಬೆಳೆದಿರುವುದನ್ನು ನೋಡಿದ್ದಾರೆ, ಕುಸಿತವಾಗಿರುವುದನ್ನು ನೋಡಿದ್ದಾರೆ. ಒಂದು ಹಂತದಲ್ಲಿ ಅಲ್ಲಿನ ನಿವಾಸಿಗಳು ಯುದ್ಧಗಳು, ಗುಣಮಟ್ಟದ ಜೀವನದ ಕೊರತೆ, ಆರ್ಥಿಕ ಸಮಸ್ಯೆಗಳು ಸೇರಿದಂತೆ ಇನ್ನಿತರ ಕಾರಣಗಳಿಂದ ವಲಸೆ ಹೋಗುವಂತಾಗಿತ್ತು ಎಂದು ಅವರು ತಿಳಿಸಿದರು.

ಈ ಸಮಸ್ಯೆಗಳನ್ನು ಮುಂದಿಟ್ಟುಕೊಂಡು 1990ರಿಂದ ಲಂಡನ್ ನಗರಕ್ಕೆ ಮತ್ತಷ್ಟು ಚೈತನ್ಯ ಕೊಟ್ಟು, ಸಾರ್ವಜನಿಕ ವ್ಯವಸ್ಥೆಗಳನ್ನು ಉತ್ತಮಗೊಳಿಸಲಾಯಿತು. ಸಾಂಸ್ಥಿಕ ರಚನೆ, ಚಲನಶೀಲತೆ, ಭೂಮಿಯ ಬಳಕೆ, ಸಾರಿಗೆ ವ್ಯವಸ್ಥೆ ಎಲ್ಲವನ್ನೂ ಕ್ರೋಡೀಕರಿಸಲಾಯಿತು ಎಂದು ಅಶ್ವಥ್ ನಾರಾಯಣ್ ಹೇಳಿದರು.

ಲಂಡನ್ ನಗರ 1500 ಚ.ಕಿ.ಮೀ ವಿಸ್ತೀರ್ಣವಿದೆ. ನಮ್ಮ ನಗರ 1200 ಚ.ಕಿ.ಮೀ ಇದೆ. ಕೆಲವು ಕೇಂದ್ರೀಯ ವ್ಯಾವಹಾರಿಕ ಸ್ಥಳಗಳಲ್ಲಿ ಪ್ರತಿ ಚ.ಕಿ.ಮೀಗೆ ಒಂದು ಲಕ್ಷಕ್ಕಿಂತ ಹೆಚ್ಚು ಜನ ಉದ್ಯೋಗ ಮಾಡುತ್ತಿದ್ದಾರೆ. ಮುಂಬೈನಲ್ಲಿ 37 ಸಾವಿರ ಜನ, ಬೆಂಗೂರಿನಲ್ಲಿ 7 ಸಾವಿರ ಜನ ಕೆಲಸ ಮಾಡುತ್ತಿದ್ದಾರೆ. ಭೂಮಿಯ ಸದ್ಬಳಕೆಯಿಂದ ಮತ್ತಷ್ಟು ಪ್ರಗತಿ ಕಾಣಬಹುದು ಎಂದು ಅವರು ತಿಳಿಸಿದರು.

ಜಗತ್ತಿನಲ್ಲಿ ಸ್ಪರ್ಧೆ ಹೆಚ್ಚುತ್ತಿದೆ. ಆದುದರಿಂದ, ಬದಲಾವಣೆಯ ವಾತಾವರಣ ಶಿಕ್ಷಣ ಸಂಸ್ಥೆಗಳ ಆವರಣದಿಂದಲೇ ಆರಂಭವಾಗಬೇಕು. ಈಗಾಗಲೇ 20 ಆವಿಷ್ಕಾರ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಬೇಕು. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಾಧಕರನ್ನು ಹೊರತರಲು ಪ್ರಯತ್ನಿಸಬೇಕಿದೆ ಎಂದು ಅಶ್ವಥ್‌ನಾರಾಯಣ್ ತಿಳಿಸಿದರು.

ಸಭೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಬಿಎಂಆರ್‌ಸಿಎಲ್ ಮುಖ್ಯಸ್ಥ ಅಜಯ್‌ಸೇಠ್, ಶಿಖಾ, ನಗರ ಸಂಚಾರ ವಿಭಾಗದ ಆಯುಕ್ತ ರವಿಕಾಂತೇಗೌಡ, ಆರ್.ಕೆ.ಮಿಶ್ರಾ, ಬಿ-ಪ್ಯಾಕ್‌ನ ರೇವತಿ ಅಶೋಕ್, ಯುಎಂಟಿಎ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಗ್ಲೋಬಲ್ ಇನ್ನೋವೆಟಿವ್ ಸೂಚ್ಯಂಕದಲ್ಲಿ ಭಾರತದಲ್ಲಿಯೇ ನಮ್ಮ ಬೆಂಗಳೂರು ಪ್ರಥಮ ಸ್ಥಾನದಲ್ಲಿರುವುದು ಸಂತೋಷ ಹಾಗೂ ಅಭಿಮಾನದ ವಿಚಾರ. ಇದಕ್ಕೆ ಕಾರಣಕರ್ತರಾಗಿರುವ ತಂತ್ರಜ್ಞರು ಹಾಗೂ ಆವಿಷ್ಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಕ್ಷಣೆ, ಕೃಷಿ, ಸಾರಿಗೆ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆವಿಷ್ಕಾರಗಳಿಗೆ ಮತ್ತುಷ್ಟು ಅವಕಾಶಗಳಿವೆ. ನವೋದ್ಯಮಗಳು ಮತ್ತಷ್ಟು ಬೆಳವಣಿಗೆಯಾಗಬೇಕಿದ್ದು, ಸರಕಾರದಿಂದ ಅಗತ್ಯ ಪ್ರೋತ್ಸಾಹ ನೀಡಲಾಗುವುದು.

-ಡಾ.ಸಿ.ಎನ್.ಅಶ್ವಥ್‌ನಾರಾಯಣ, ಉಪ ಮುಖ್ಯಮಂತ್ರಿ

ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಉಪಸ್ಥಿತಿ

ನಗರದ ಸಂಚಾರ ದಟ್ಟಣೆ ಸುಗಮಗೊಳಿಸುವ ಸಂಬಂಧ ಉಪ ಮುಖ್ಯಮಂತ್ರಿ ಕರೆದಿದ್ದ ತಜ್ಞರ ಸಭೆಯಲ್ಲಿ ಬೆಂಗಳೂರು ನಗರ ಅಭಿವೃದ್ಧಿ ಇಲಾಖೆಯನ್ನು ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಕಂಡು ಬರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಜನಪ್ರತಿನಿಧಿಯೂ ಅಲ್ಲದ, ಯಾವುದೇ ತಜ್ಞರ ಸಂಸ್ಥೆಗಳ ಪ್ರತಿನಿಧಿಯೂ ಅಲ್ಲದ ವಿಜಯೇಂದ್ರ ಸಭೆಯಲ್ಲಿ ಉಪಸ್ಥಿತರಿದ್ದದ್ದು ಹಲು ಅನುಮಾನಗಳಿಗೆ ಕಾರಣವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News