ಭಾರತದ ಯುದ್ಧವಿಮಾನ ಎಂದು ಭಾವಿಸಿ ಸ್ಪೈಸ್‌ಜೆಟ್ ವಿಮಾನ ತಡೆಹಿಡಿದಿದ್ದ ಪಾಕ್ !

Update: 2019-10-17 15:05 GMT

ಹೊಸದಿಲ್ಲಿ, ಅ.17: ಬಾಲಕೋಟ್ ವಾಯುದಾಳಿಯ ಬಳಿಕ ಉಭಯ ದೇಶಗಳ ಮಧ್ಯೆ ಉದ್ವಿಗ್ನ ಸ್ಥಿತಿ ನೆಲೆಸಿರುವಂತೆಯೇ ಕಳೆದ ತಿಂಗಳು ದಿಲ್ಲಿಯಿಂದ ಕಾಬೂಲ್‌ಗೆ ಪ್ರಯಾಣಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನವನ್ನು ಪಾಕಿಸ್ತಾನದ ಎಫ್-16 ಜೆಟ್ ವಿಮಾನಗಳು ಸುತ್ತುಗಟ್ಟಿ ಸುಮಾರು ಒಂದು ಗಂಟೆ ಕಾಲ ತಡೆದು ನಿಲ್ಲಿಸಿದ್ದವು ಎಂದು ಮೂಲಗಳು ತಿಳಿಸಿವೆ.

 ಭಾರತದ ವಾಯುಪಡೆಗೆ ಸೇರಿದ ವಿಮಾನವಿದು ಎಂದು ಪಾಕಿಸ್ತಾನದ ಅಧಿಕಾರಿಗಳು ತಪ್ಪಾಗಿ ಭಾವಿಸಿದ್ದರಿಂದ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸೆ.23ರಂದು ಈ ಘಟನೆ ನಡೆದಿದೆ. ಆಗ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಭಾರತಕ್ಕೆ ಮುಚ್ಚಿರಲಿಲ್ಲ. ಸುಮಾರು 120 ಪ್ರಯಾಣಿಕರಿದ್ದ ಎಸ್‌ಜಿ-21 ಸ್ಪೈಸ್ ಜೆಟ್ ವಿಮಾನ ದಿಲ್ಲಿಯಿಂದ ಕಾಬೂಲ್‌ಗೆ ಪ್ರಯಾಣಿಸುತ್ತಿತ್ತು. ಆಗ ಪಾಕ್ ವಾಯುಪ್ರದೇಶದಲ್ಲಿ ಸ್ಪೈಸ್ ಜೆಟ್ ವಿಮಾನವನ್ನು ಆಗಸದಲ್ಲೇ ಸುತ್ತುವರಿದ ಎಫ್-16 ಜೆಟ್ ವಿಮಾನದ ಪೈಲಟ್ ವಿಮಾನವನ್ನು ಕೆಳಗಿಳಿಸುವಂತೆ ಹಾಗೂ ಪ್ರಯಾಣದ ಬಗ್ಗೆ ವಿವರಿಸುವಂತೆ ಸ್ಪೈಸ್ ಜೆಟ್ ವಿಮಾನದ ಪೈಲಟ್‌ಗೆ ಸೂಚಿಸಿದ್ದ.

ಪಾಕ್ ಯುದ್ಧವಿಮಾನದ ಪೈಲಟ್ ಕೈಸನ್ನೆಯ ಮೂಲಕ ಸ್ಪೈಸ್ ಜೆಟ್ ವಿಮಾನದ ಎತ್ತರವನ್ನು ತಗ್ಗಿಸಲು ಸೂಚಿಸುವುದನ್ನು ವಿಮಾನದಲ್ಲಿದ್ದ ಪ್ರಯಾಣಿಕರೂ ಗಮನಿಸಿದ್ದಾರೆ. ಅಲ್ಲದೆ ಎಫ್- 16 ವಿಮಾನ ಸ್ಪೈಸ್ ಜೆಟ್‌ನ ಸುತ್ತ ಹಾರಾಡುತ್ತಿದ್ದ ಸಂದರ್ಭ ವಿಮಾನದ ಕಿಟಕಿ ಮುಚ್ಚುವಂತೆ ಮತ್ತು ನಿಶ್ಯಬ್ದವಾಗಿರುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.

ಬಳಿಕ ಸ್ಪೈಸ್‌ಜೆಟ್ ವಿಮಾನದ ಪೈಲಟ್ ವಿಮಾನದ ಬಗ್ಗೆ ಮಾಹಿತಿ ನೀಡಿದರು. ನಂತರ ಪಾಕ್‌ನ ಯುದ್ಧವಿಮಾನಗಳು ಅಪಘಾನಿಸ್ತಾನದ ಗಡಿಯವರೆಗೂ ಸ್ಪೈಸ್ ಜೆಟ್‌ಗೆ ಬೆಂಗಾವಲಾಗಿದ್ದವು ಎಂದು ವರದಿಯಾಗಿದೆ. ಈ ಘಟನೆಗೆ ಪಾಕ್ ಅಧಿಕಾರಿಗಳ ತಪ್ಪು ಮಾಹಿತಿಯೇ ಕಾರಣ ಎನ್ನಲಾಗಿದೆ. ಪ್ರತಿಯೊಂದು ವಿಮಾನಕ್ಕೂ ಪ್ರತ್ಯೇಕ ಕೋಡ್ ಇರುತ್ತದೆ. ಅದರಂತೆ, ಸ್ಪೈಸ್ ಜೆಟ್‌ಗೆ ‘ಎಸ್‌ಜಿ’ ಎಂಬ ಕೋಡ್ ಇದೆ. ಪಾಕಿಸ್ತಾನದ ಎಟಿಸಿ(ಏರ್‌ಟ್ರಾಫಿಕ್ ಕಂಟೋಲರ್) ಇದನ್ನು ‘ಐಎ’ ಎಂದು ತಪ್ಪಾಗಿ ಭಾವಿಸಿ ಭಾರತದ ವಾಯುಪಡೆಯ ವಿಮಾನ ಪಾಕ್ ವಾಯು ವಲಯದಲ್ಲಿದೆ ಎಂದು ವರದಿ ಮಾಡಿದೆ. ತಕ್ಷಣ ಪಾಕಿಸ್ತಾನದ ಎಫ್-16 ಯುದ್ಧವಿಮಾನಗಳು ಭಾರತದ ವಿಮಾನವನ್ನು ತಡೆಹಿಡಿದಿದೆ. ಈ ಗೊಂದಲ ಬಗೆ ಹರಿದ ಬಳಿಕ ಸ್ಪೈಸ್‌ಜೆಟ್ ವಿಮಾನ ಕಾಬೂಲ್ ತಲುಪಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News