ಕಾಲಮಿತಿಯೊಳಗೆ ದೂರುಗಳು ಪರಿಹರಿಸಲು ಬಿಬಿಎಂಪಿ ಚಿಂತನೆ

Update: 2019-10-17 16:47 GMT

ಬೆಂಗಳೂರು, ಅ.17: ಸಹಾಯ ಆ್ಯಪ್‌ನಲ್ಲಿ ದಾಖಲಾಗುವ ದೂರುಗಳನ್ನು ಕಾಲಮಿತಿಯೊಳಗೆ ಪರಿಹರಿಸಲು ಬಿಬಿಎಂಪಿ ಮುಂದಾಗಿದ್ದು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ.

ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ರೂಪಿಸಿರುವ ಸಹಾಯ ಆ್ಯಪ್‌ನಲ್ಲಿ ದಾಖಲಾಗುವ ದೂರುಗಳು ಶೀಘ್ರವಾಗಿ ಪರಿಹಾರವಾಗುತ್ತಿಲ್ಲ ಎಂಬ ಅಪವಾದವಿದೆ. ಅದನ್ನು ತಡೆಯಲು ಕಾಲಮಿತಿಯೊಳಗೆ ದೂರು ಪರಿಹರಿಸಲು ಬಿಬಿಎಂಪಿ ಸಿದ್ಧತೆ ನಡೆಸಿದ್ದು, ಸಹಾಯ ಆ್ಯಪ್‌ಗೆ ಸರ್ವಿಸ್ ಲೆವೆಲ್ ಅಗ್ರಿಮೆಂಟ್ ಎನ್ನುವ ಸಾಫ್ಟ್‌ವೇರ್ ಅಳವಡಿಸುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು 12 ಗಂಟೆಗಳ ಒಳಗೆ ಮುಗಿಸಬೇಕು ಎನ್ನುವ ನಿಯಮವಿದೆ. ಬಿಬಿಎಂಪಿ ಸಹಾಯ ಆ್ಯಪ್‌ನಲ್ಲಿ ದಾಖಲಾಗುವ ದೂರುಗಳನ್ನು ಪರಿಹರಿಸುತ್ತಿದೆಯಾದರೂ, ಕಾಲಮಿತಿಯ ಒಳಗೆ ಸಮಸ್ಯೆಯನ್ನು ಪರಿಹರಿಸುತ್ತಿಲ್ಲ. ಇದೇ ಕಾರಣಕ್ಕೆ ಕಳೆದ ವರ್ಷ ನಡೆದ ಸ್ವಚ್ಛ ಸರ್ವೇಯಲ್ಲಿ ನಿಗದಿತ ವಿಷಯದಲ್ಲಿ ಬಿಬಿಎಂಪಿ ಶೂನ್ಯ ಪಡೆದಿತ್ತು.

ಗಣನೀಯ ಪ್ರಮಾಣದಲ್ಲಿ ದೂರು ದಾಖಲು: ಬಿಬಿಎಂಪಿಯ ಸಹಾಯ ಆ್ಯಪ್‌ನಲ್ಲಿ ಈ ವರ್ಷ ಜನವರಿಯಿಂದ ಅ.14ರ ವರೆಗೆ ಒಟ್ಟು 93,232 ದೂರುಗಳು ದಾಖಲಾಗಿದ್ದು, ಇದರಲ್ಲಿ 53,360 ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಇನ್ನು 23,958 ದೂರುಗಳು ಪ್ರಗತಿ ಹಂತದಲ್ಲಿವೆ. ದೀರ್ಘಾವಧಿಯಲ್ಲಿ ಪರಿಹರಿಸ ಬೇಕಾಗಿರುವ 1,911 ದೂರುಗಳಿವೆ ಎಂದು ಗುರುತಿಸಲಾಗಿದೆ.

ಘನತ್ಯಾಜ್ಯಕ್ಕೆ ಸಂಬಂಧಿಸಿದ ದೂರುಗಳು ಅಧಿಕವಾಗಿ ದಾಖಲಾಗಿವೆ. ಉಳಿದಂತೆ ಶಿಕ್ಷಣಕ್ಕೆ ಸಂಬಂಧಿಸಿದಂತೆ 21 ದೂರು, ನಗರ ಯೋಜನೆಗೆ ಸಂಬಂಧಿಸಿ 62, ಆರೋಗ್ಯ 136, ತೋಟಗಾರಿಕೆ 437, ಹಣಕಾಸು 1,142 ಹಾಗೂ ಕಲ್ಯಾಣ ವಿಭಾಗ 22 ಮಾರುಕಟ್ಟೆಯಲ್ಲಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ 84 ದೂರುಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News