ಕಬ್ಬು ಬೆಳಗಾರರಿಗೆ ಒಂದು ವಾರದೊಳಗೆ ಬಾಕಿ ಹಣ ಪಾವತಿ: ಸಿ.ಟಿ.ರವಿ

Update: 2019-10-17 17:16 GMT

ಬೆಂಗಳೂರು, ಅ.17: ರಾಜ್ಯದಾದ್ಯಂತ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಬಾಕಿಯಿರುವ ಹಣವನ್ನು ಮುಂದಿನ 10 ದಿನಗಳೊಳಗೆ ಕೊಡಿಸಲಾಗುವುದು ಎಂದು ಸಕ್ಕರೆ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಗುರುವಾರ ನಗರದ ಕೃಷ್ಣಾ ಅತಿಥಿ ಗೃಹದಲ್ಲಿ ಕಬ್ಬು ನಿಯಂತ್ರಣ ಮಂಡಳಿ ಸಭೆಯ ಬಳಿಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018-19 ನೆ ಸಾಲಿನಲ್ಲಿ ಶೇ.0.5 ರಷ್ಟು ಹಣವಷ್ಟೇ ಬಾಕಿಯುಳಿದಿದೆ. ಅದನ್ನು ಹತ್ತು ದಿನಗಳೊಳಗೆ ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

 ರಾಜ್ಯದಲ್ಲಿ 85 ಸಕ್ಕರೆ ಕಾರ್ಖಾನೆಗಳಿದ್ದು, ಅವುಗಳಲ್ಲಿ 67 ಕಾರ್ಖಾನೆಗಳು ಚಾಲ್ತಿಯಲ್ಲಿವೆ. ಈ ವರ್ಷ ಸುಮಾರು 410 ಲಕ್ಷ ಮೆ.ಟನ್ ಕಬ್ಬು ಕಟಾವು ಮಾಡಲಾಗಿದ್ದು, ಸುಮಾರು 11,948 ಕೋಟಿ ರೂ.ಗಳಷ್ಟು ರೈತರಿಗೆ ಪಾವತಿ ಮಾಡಬೇಕಿದೆ. ಅದರಲ್ಲಿ ಈಗಾಗಲೇ ಶೇ. 99.5 ರಷ್ಟು ಹಣವನ್ನು ಪಾವತಿ ಮಾಡಲಾಗಿದೆ. ಇನ್ನು 84 ಕೋಟಿ ರೂ. ಮಾತ್ರ ಬಾಕಿ ಇದೆ. ಅದನ್ನು ಸಂಪೂರ್ಣವಾಗಿ ಕೊಡಿಸಲಾಗುವುದು ಎಂದರು.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪಾವತಿ ಪ್ರಮಾಣ ಹೆಚ್ಚಿದೆ. ದೇಶದಲ್ಲಿ ಎಫ್‌ಆರ್‌ಪಿ ಪ್ರಕಾರ ರೈತರಿಗೆ ಪೂರ್ಣ ಮಟ್ಟದಲ್ಲಿ ಹಣ ಬಿಡುಗಡೆ ಮಾಡಿದ ರಾಜ್ಯ ಕರ್ನಾಟಕವಾಗಿದೆ. ಉತ್ತರ ಪ್ರದೇಶದಲ್ಲಿ ಶೇ. 15, ಮಹಾರಾಷ್ಟ್ರದಲ್ಲಿ ಶೇ. 5, ಆಂಧ್ರಪ್ರದೇಶದಲ್ಲಿ ಶೇ. 25, ತಮಿಳುನಾಡಿನಲ್ಲಿ ಶೇ. 30 ರಷ್ಟು ಕಬ್ಬು ಹಣ ರೈತರಿಗೆ ಬಾಕಿ ಇದೆ ಎಂದು ಅವರು ವಿವರಿಸಿದರು.

ರಾಜ್ಯ ಸರಕಾರ, ಕೇಂದ್ರ ಸರಕಾರ ನಿಗದಿ ಮಾಡಿರುವ ದರದ ಪ್ರಕಾರ ಕಬ್ಬು ಬೆಳೆಗಾರರಿಗೆ ಹಣ ಕೊಡಿಸುತ್ತಿದೆ. ಕೆಲವೆಡೆ ಕಬ್ಬು ಬೆಳೆಗಾರರು ಎಫ್‌ಆರ್‌ಪಿಗಿಂತ ಜಾಸ್ತಿ ಹಣ ನೀಡುತ್ತಾರೆಂದು ಕಾರ್ಖಾನೆಗಳಿಗೆ ಕಬ್ಬು ನೀಡಿದ್ದಾರೆ. ಹಾಗಾಗಿ ಈ ಹಣ ಪಾವತಿಯಾಗಿಲ್ಲ. ಇದರಲ್ಲಿ ಸರಕಾರದ ಪಾತ್ರ ಇಲ್ಲ. ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆಗಳ ನಡುವಿನ ಮೌಖಿಕ ಒಪ್ಪಂದ. ಇದನ್ನು ಸರಕಾರ ಕೊಡಿಸಲು ಸಾಧ್ಯಲ್ಲ ಎಂದು ನುಡಿದರು.

ಮುಂದಿನ ದಿನಗಳಲ್ಲಿ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಮೌಖಿಕ ಒಪ್ಪಂದಗಳನ್ನು ತಪ್ಪಿಸಲು ಈ ಹೆಚ್ಚುವರಿ ದರಕ್ಕೆ ಕಾನೂನು ಚೌಕಟ್ಟಿನಲ್ಲಿ ಒಪ್ಪಂದ ಮಾಡಿಕೊಳ್ಳುವಂತೆ ರೈತರಿಗೆ ಸೂಚಿಸುವ ತೀರ್ಮಾನವನ್ನು ಈ ಸಭೆಯಲ್ಲಿ ಕೈಗೊಳ್ಳಲಾಗಿದೆ. ಆಗ ಸರಕಾರ ಹೆಚ್ಚು ಹಣ ಕೊಡಿಸಲು ನೆರವಾಗಬಹುದು ಎಂದು ಹೇಳಿದರು.

ಶುದ್ಧ ಹಾಲಿಗಾಗಿ ಯಾವ ರೀತಿಯಲ್ಲಿ ಪರೀಕ್ಷೆಗೆ ಒಳಪಡಿಸುತ್ತಾರೆಯೋ ಅದೇ ರೀತಿ ಸಕ್ಕರೆಯ ಗುಣಮಟ್ಟ ಪರೀಕ್ಷಿಸಲು ಆಟೋಮ್ಯಾಟಿಕ್ ಶುಗರ್ ಮಿಷನ್ ಅಳವಡಿಕೆ ಮಾಡಲು ಚಿಂತಿಸಲಾಗಿದೆ. ಬೆಲೆ ಕುಸಿದಾಗ ರೈತರಿಗೆ ಎಫ್‌ಆರ್‌ಪಿ ದರದಂತೆ ಹಣ ಒದಗಿಸಲು ಸಕ್ಕರೆ ಬೆಲೆ ಸ್ಥಿರ ನಿಧಿಯನ್ನು ಸ್ಥಾಪಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳು ನಡೆದಿವೆ ಎಂದು ಅವರು ಹೇಳಿದರು.

ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ಬಗ್ಗೆ ಗಮನ ಹರಿಸಲು ಒಂದು ತಂಡ ರಚಿಸುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಈ ವರ್ಷ ಕೇಂದ್ರ ಸರಕಾರ ಎಫ್‌ಆರ್‌ಪಿ ದರದ ಪ್ರಕಾರ ಶೇ. 10 ರಷ್ಟು ಇಳುವರಿ ಹೊಂದಿರುವ ಪ್ರತಿಟನ್ ಕಬ್ಬಿಗೆ 2750 ರೂ. ನಿಗದಿ ಮಾಡಲಾಗಿದೆ. ಇಳುವರಿ ಪ್ರಮಾಣ ಹೆಚ್ಚಾದಂತೆ ಶೇ.1 ರಷ್ಟು ಇಳುವರಿಗೆ ಪ್ರತಿ ಟನ್‌ಗೆ 275 ರೂ. ಹೆಚ್ಚುವರಿಯಾಗಿ ನೀಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News