ಎನ್.ಆರ್.ರಮೇಶ್ ವಿರುದ್ಧ ನ್ಯಾಯಾಂಗ ತನಿಖೆಯಾಗಲಿ: ವಿ.ಎಸ್.ಉಗ್ರಪ್ಪ

Update: 2019-10-17 17:23 GMT

ಬೆಂಗಳೂರು, ಅ.17: ನಗರದ ಯಡಿಯೂರು ವಾರ್ಡ್ ಸಂಖ್ಯೆ 167ರ ವ್ಯಾಪ್ತಿಯಲ್ಲಿರುವ ರಸ್ತೆಗಳಿಗೆ ವೈಟ್ ಟಾಪಿಂಗ್‌ನಲ್ಲಿ ಕೋಟ್ಯಂತರ ರೂ. ಹಗರಣ ನಡೆದಿದ್ದು, ಈ ಸಂಬಂಧ ನಡೆದಿರುವ ಅವ್ಯವಹಾರದಲ್ಲಿ ಪಾಲಿಕೆಯ ಮಾಜಿ ಸದಸ್ಯ ಎನ್.ಆರ್.ರಮೇಶ್ ಜೊತೆ ಸರಕಾರದ ಪ್ರಭಾವಿ ಶಕ್ತಿಗಳು ಭಾಗಿಯಾಗಿರುವುದರಿಂದ ಇದನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಒತ್ತಾಯಿಸಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎನ್.ಆರ್.ರಮೇಶ್, ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ವೈಟ್ ಟಾಪಿಂಗ್‌ಗೆ 4ಜಿ ವಿನಾಯಿತಿ ಕೊಡಿ ಎಂದು ಮನವಿ ಮಾಡಿದ್ದಾರೆ. ಇವರೇನು ಮುಖ್ಯಮಂತ್ರಿಗಳಿಗಿಂತ ದೊಡ್ಡವರ. ಈ ಪ್ರಕರಣದಲ್ಲಿ ನಡೆದಿರುವ ಅವ್ಯವಹಾರದಲ್ಲಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಮುಖ್ಯಮಂತ್ರಿಗಳ ಕಚೇರಿ ಕೂಡ ಭಾಗಿಯಾಗಿರುವ ಅನುಮಾನವಿದೆ ಎಂದು ಆರೋಪಿಸಿದರು.

ಮಹಾನಗರ ಪಾಲಿಕೆಯಲ್ಲಿ ಟೆಂಡರ್ ಇಲ್ಲದೆ ಯಾವುದೇ ಕೆಲಸವನ್ನು ಮಾಡುವಂತಿಲ್ಲ. ಆದರೆ, ಬಿಜೆಪಿ ಸರಕಾರದ ಅವಧಿಯಲ್ಲಿ ಕಾಮಗಾರಿಗಳನ್ನು ಅಕ್ರಮವಾಗಿ ನೀಡಲಾಗಿದೆ. ಎನ್.ಆರ್. ರಮೇಶ್ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ವೈಟ್‌ಟಾಪಿಂಗ್‌ಗೆ 4ಜಿ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. 16 ಕೋಟಿ ರೂ.ಕಾಮಗಾರಿಗಳಿಗೆ ಟೆಂಡರ್ ನೀಡಿಲ್ಲ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ಅವರು ಒತ್ತಾಯಿಸಿದರು.

ಈ ವೇಳೆ ಮಾಜಿ ಮೇಯರ್‌ಗಳಾದ ಎಂ.ರಾಮಚಂದ್ರಪ್ಪ, ಪದ್ಮಾವತಿ, ಸತ್ಯನಾರಾಯಣ, ಶಿವರಾಜ್, ವಿಧಾನ ಪರಿಷತ್ ಸದಸ್ಯ ರಮೇಶ್ ಸೇರಿದಂತೆ ಮತ್ತಿತರರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಆಡಳಿತ ಕುಸಿದಿದೆ. ನಿನ್ನೆ ಮಾಜಿ ಕುಲಪತಿಯ ಕೊಲೆಯಾಗಿದೆ. ಜೈಲಿನಲ್ಲಿ ಪತ್ರಕರ್ತನ ಸಾವಾಗಿದೆ. ಬಾಗಲಕೋಟೆಯಲ್ಲಿ ಜೋಡಿ ಕೊಲೆಯಾಗಿದೆ. ಒಟ್ಟಾರೆ ರಾಜ್ಯದಲ್ಲಿ ಅಪರಾಧದ ಚಟುವಟಿಕೆಗಳು ವಿತಿಮೀರಿ ನಡೆಯುತ್ತಿವೆ. ಇದಕ್ಕೆಲ್ಲ ರಾಜ್ಯ ಸರಕಾರದ ನಿರ್ಲಕ್ಷವೇ ಹೊಣೆ.

-ವಿ.ಎಸ್.ಉಗ್ರಪ್ಪ, ಮಾಜಿ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News