ಹಸಿವನ್ನು ಹಿಂಗಿಸಲಾಗದ ಭಾರತ

Update: 2019-10-18 06:15 GMT

ಜಗತ್ತಿನ ಗುರುವಾಗಲು ಹೊರಟ ಭಾರತದಲ್ಲಿ ಹಸಿದವರ ಸಂಖ್ಯೆ ಉಳಿದ ದಕ್ಷಿಣ ಏಶ್ಯ ಹಾಗೂ ಬ್ರಿಕ್ಸ್ ದೇಶಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚು ಎಂಬ ಸಂಗತಿ ಆತಂಕಕಾರಿಯಾಗಿದೆ. ವಿಶ್ವದ ಹಸಿವು ಸೂಚ್ಯಂಕದಲ್ಲಿ ಭಾರತ 102ನೇ ಸ್ಥಾನವನ್ನು ಪಡೆದಿದೆ. ಅಕ್ಕಪಕ್ಕದ ದೇಶಗಳಾದ ಚೀನಾ(25), ಶ್ರೀಲಂಕಾ(66), ನೇಪಾಳ (73), ಬಾಂಗ್ಲಾದೇಶ (88), ಪಾಕಿಸ್ತಾನ (94) ಕ್ರಮಾಂಕದಲ್ಲಿದ್ದು ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿವೆ. ಇದರಿಂದ ಭಾರತ ಜಗತ್ತಿನಲ್ಲೇ ಹೆಚ್ಚು ಹಸಿವೆಯಿಂದ ಬಳಲುತ್ತಿರುವ ರಾಷ್ಟ್ರಗಳಲ್ಲಿ ಒಂದು ಎಂಬುದು ಇಡೀ ಜಗತ್ತಿಗೆ ಗೊತ್ತಾಗಿದೆ.

ಭಾರತವನ್ನು ಉದ್ಧಾರ ಮಾಡಲು ಅವತರಿಸಿ ಬಂದಿದ್ದಾರೆ ಎಂದು ಕೆಲವರಿಂದ ವರ್ಣಿಸಲ್ಪಡುವ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಅಮೆರಿಕಕ್ಕೆ ಹೋದಾಗ ಅನಿವಾಸಿ ಭಾರತೀಯರ ಭಾರೀ ಸಭೆಯನ್ನುದ್ದೇಶಿಸಿ ಮಾತಾಡುತ್ತ, ‘‘ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ’’ ‘‘ಎಲ್ಲರೂ ಸುಖವಾಗಿದ್ದಾರೆ’’ ಎಂದು ಹೇಳಿದಾಗ ಅಲ್ಲಿರುವ ಭಕ್ತರು ‘‘ಮೋದಿ, ಮೋದಿ’’ ಎಂದು ಕಿರುಚಿದರು. ಆದರೆ ಭಾರತದ ವಾಸ್ತವ ಸ್ಥಿತಿ ಭಿನ್ನವಾಗಿದೆ. ಆರ್ಥಿಕ ಪರಿಸ್ಥಿತಿ ವಿನಾಶದ ಅಂಚಿಗೆ ಬಂದು ನಿಂತಿದೆ. ಜಿಡಿಪಿ ಪಾತಾಳಕ್ಕೆ ಕುಸಿದಿದೆ. ಬ್ಯಾಂಕಿಂಗ್ ವಲಯ ಬಿಕ್ಕಟ್ಟಿನಲ್ಲಿದೆ. ಗೋರಕ್ಷಣೆ ಹೆಸರಿನಲ್ಲಿ ಹಾದಿ ಬೀದಿಗಳಲ್ಲಿ ಅಮಾಯಕರ ಹತ್ಯೆಗಳು ನಡೆಯುತ್ತಿವೆ. ಆದರೂ ನೀರೋ ದೊರೆಯ ಪ್ರಕಾರ ಎಲ್ಲವೂ ಸಮೃದ್ಧವಾಗಿದೆ.

ಭಾರತ ಹಸಿವೆಯಿಂದ ಬಳಲುತ್ತಿದೆ ಎಂದು ಯಾರೋ ವಿರೋಧ ಪಕ್ಷದ ನಾಯಕರು ಮಾಡಿದ ಟೀಕೆಯಲ್ಲ ಇದು. ಅಧಿಕೃತ ಅಂಕಿ ಅಂಶಗಳನ್ನು ಆಧರಿಸಿ ಸಿದ್ಧಪಡಿಸಿರುವ ವಿಶ್ವ ಹಸಿವು ಸೂಚ್ಯಂಕವಿದು. ಅಪೌಷ್ಟಿಕತೆ, ಮಕ್ಕಳ ಕುಂಠಿತ ಬೆಳವಣಿಗೆ, ಕಡಿಮೆ ತೂಕದ ಮಕ್ಕಳು ಮತ್ತು ಶಿಶು ಮರಣದ ಪ್ರಮಾಣವನ್ನು ಆಧರಿಸಿ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತದೆ. ಶಿಶು ಮರಣ ಹೊರತು ಪಡಿಸಿ ಉಳಿದ ಮೂರೂ ಕ್ಷೇತ್ರಗಳಲ್ಲಿ ಭಾರತದ ಸ್ಥಿತಿ ಆಶಾದಾಯಕವಾಗಿಲ್ಲ.

ಹಸಿವಿಗೆ ಸಂಬಂಧಿಸಿದ ಜಾಗತಿಕ ಸೂಚ್ಯಂಕದಲ್ಲಿ ಭಾರತ ವರ್ಷದಿಂದ ವರ್ಷಕ್ಕೆ ಕೆಳಗೆ ಕುಸಿಯುತ್ತಿದೆ. 2015ರಲ್ಲಿ ಭಾರತವು 93ನೇ ಸ್ಥಾನದಲ್ಲಿತ್ತು, 2018ರಲ್ಲಿ 103ನೇ ಸ್ಥಾನಕ್ಕೆ ಕುಸಿದಿದೆ. ಭಾರತದಲ್ಲಿ ಗರ್ಭಾವಸ್ಥೆಯಿಂದಲೇ ಅಪೌಷ್ಟಿಕತೆಯ ಸಮಸ್ಯೆ ಎದುರಾಗುತ್ತದೆ. 9 ತಿಂಗಳಿನಿಂದ 23 ತಿಂಗಳ ವರೆಗಿನ ಮಕ್ಕಳಲ್ಲಿ ಶೇಕಡಾ 9.6ರಷ್ಟು ಮಕ್ಕಳಿಗೆ ಮಾತ್ರ ಪೌಷ್ಟಿಕಾಂಶಯುಕ್ತ ಆಹಾರ ದೊರಕುತ್ತದೆ. ಅಪೌಷ್ಟಿಕತೆಯ ಪರಿಣಾಮವಾಗಿ ಐದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ.

ಪ್ರಧಾನ ಮಂತ್ರಿ ಬಾಯಿ ಬಿಟ್ಟರೆ ಐದು ಟ್ರಿಲಿಯನ್ ಆರ್ಥಿಕ ಗುರಿ ಸಾಧಿಸಿ ವಿಶ್ವದ ಗುರುವಾಗುವುದಾಗಿ ಹೇಳುತ್ತಾರೆ. ಆದರೆ ಈ ಹಸಿವಿನ ಸೂಚ್ಯಂಕ ಅದಕ್ಕೆ ತದ್ವಿರುದ್ಧವಾಗಿದೆ. ಜಿಡಿಪಿ ಕುಸಿದು ಬ್ಯಾಂಕಿಂಗ್ ವಲಯ ಸೇರಿದಂತೆ ಆರ್ಥಿಕ ಕ್ಷೇತ್ರ ತಲ್ಲಣಿಸಿ ಹೋಗಿದ್ದರೂ ಏನೂ ಆಗಿಯೇ ಇಲ್ಲವೆಂಬಂತೆ ಕೇಂದ್ರ ಹಣಕಾಸು ಸಚಿವರು ಮಾತಾಡುತ್ತಾರೆ. ಆರ್ಥಿಕ ಕ್ಷೇತ್ರದ ಪುನಶ್ಚೇತನ ಈ ಸರಕಾರದ ಆದ್ಯತಾ ಪಟ್ಟಿಯಲ್ಲಿ ಇದ್ದಂತೆ ಕಾಣುತ್ತಿಲ್ಲ. ಈ ದೇಶದ ಗೃಹ ಮಂತ್ರಿ ಬರೀ ಕಾಶ್ಮೀರ, ಆರ್ಟಿಕಲ್ 370 ಎಂದು ಕನವರಿಸುತ್ತಾರೆ. ರಕ್ಷಣಾ ಮಂತ್ರಿಯ ಬಾಯಲ್ಲಿ ಬರೀ ಯುದ್ಧದ ಮಾತುಗಳು ಬರುತ್ತವೆ. ಇವರೆಲ್ಲರೂ ಗುರು ಸಾವರ್ಕರ್ ಕಲ್ಪನೆಯ ರಾಷ್ಟ್ರ ನಿರ್ಮಾಣದ ಬಗ್ಗೆ ಮಾತಾಡುತ್ತಾರೆ. ನಾಗಪುರದಲ್ಲಿರುವ ಗುರುವಿನ ಗುರು ‘‘ಆರ್ಥಿಕ ಪರಿಸ್ಥಿತಿ ವಿಶ್ಲೇಷಣೆಗೆ ಜಿಡಿಪಿ ಮಾನದಂಡವಲ್ಲ, ಎಲ್ಲ ಸುಭಿಕ್ಷವಾಗಿದೆ’’ ಎಂದು ಹೇಳುತ್ತಾರೆ, ಆದರೆ ಇನ್ನೊಂದು ಕಡೆ ಹಸಿವಿನ ಸಾವುಗಳು, ರೈತರ ಆತ್ಮಹತ್ಯೆಗಳು, ನಿರಂತರವಾಗಿ ನಡೆಯತ್ತಿವೆ.

ಭಾರತ ಅಭಿವೃದ್ಧಿಶೀಲ ದೇಶವೆಂದು ಹೇಳಿಕೊಳ್ಳುತ್ತೇವೆ. ಆದರೆ ಬಡತನವನ್ನೇ ಹೊದ್ದು ಮಲಗುವ ನಮ್ಮ ನೆರೆ ಹೊರೆಯ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ದೇಶಗಳಿಗಿಂತ ನಮ್ಮ ದೇಶದ ಜನ ಹಸಿವೆಯಿಂದ ಹೆಚ್ಚು ನರಳುತ್ತಿದ್ದಾರೆ. ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಹಸಿವು ಸೂಚ್ಯಂಕದಲ್ಲಿ 25ನೇ ಸ್ಥಾನದಲ್ಲಿದೆ.

 ಬರೀ ಶಕ್ತಿಮಾನ್ ಭಾರತ, ಬಲಿಷ್ಠ ಭಾರತ ಎಂದು ಬಾಯಿಯಲ್ಲಿ ಮಾತಾಡಿದರೆ ಪ್ರಯೋಜನವಿಲ್ಲ. ಕೋಟ್ಯಂತರ ಮಕ್ಕಳು ಹಸಿವೆಯಿಂದ ನರಳುತ್ತಿದ್ದಾರೆ. ಅಪೌಷ್ಟಿಕತೆಯ ಪರಿಣಾಮವಾಗಿ ಗರ್ಭಿಣಿಯರು ಜನ್ಮ ನೀಡುವ ಮಕ್ಕಳು ಜಗತ್ತನ್ನು ನೋಡುವ ಮುನ್ನವೇ ಅಸುನೀಗುತ್ತವೆ ಎಂಬುದು ನಮ್ಮ ದೇಶಕ್ಕೆ ಒಳ್ಳೆಯ ಹೆಸರನ್ನು ತರುವುದಿಲ್ಲ.

 ಸಂಪತ್ತಿನ ಅಸಮಾನ ಹಂಚಿಕೆಯೇ ಈ ದೇಶ ಅನುಭವಿಸುತ್ತಿರುವ ಹಸಿವು ಮತ್ತು ಬಡತನಕ್ಕೆ ಮುಖ್ಯ ಕಾರಣ ಎಂದರೆ ಅತಿಶಯೋಕ್ತಿಯಲ್ಲ. ಈ ದೇಶದ ಶೇಕಡಾ 65ರಷ್ಟು ಸಿರಿ ಸಂಪತ್ತಿನ ಒಡೆತನ ಶೇಕಡಾ 1ರಷ್ಟಿರುವ ಕಾರ್ಪೊರೇಟ್ ಸಿರಿವಂತರ ಒಡೆತನದಲ್ಲಿದೆ. ಈ ದೇಶದ ಸಿರಿವಂತರು ಪ್ರತಿನಿತ್ಯ ತಿನ್ನುವ ಅನ್ನದಲ್ಲಿ ಶೇಕಡಾ 20.8ರಷ್ಟು ಅನ್ನವನ್ನು ಅಪವ್ಯಯ ಮಾಡುತ್ತಾರೆ. ಈ ದೇಶದಲ್ಲಿ ಒಂದೆಡೆ ಹಸಿವಿನ ಆಕ್ರಂದನ ಕೇಳಿ ಬರುತ್ತಿದೆ. ಇನ್ನೊಂದೆಡೆ ಸಿರಿವಂತಿಕೆಯ ಅಟ್ಟಹಾಸದ ಆರ್ಭಟ ಕೇಳಿ ಬರುತ್ತಿದೆ. ಈ ಹಸಿವನ್ನು ನಿವಾರಿಸಲು ಗರೀಬಿ ಹಠಾವೊ, ಹಸಿರು ಕ್ರಾಂತಿ, ಅಂತ್ಯೋದಯ, ಅನ್ನ ಭಾಗ್ಯದಂಥ ಕಾರ್ಯಕ್ರಮಗಳನ್ನು ನಮ್ಮ ಸರಕಾರಗಳು ರೂಪಿಸಿದರೂ ಹಸಿದವರ ಸಂಖ್ಯೆ ಕಡಿಮೆಯಾಗುತ್ತಲೇ ಇಲ್ಲ.

ಭಾರತದ ಅತಿದೊಡ್ಡ ಸಂಪನ್ಮೂಲವೆಂದರೆ ಇಲ್ಲಿನ ಜನ. ಈ ಜನರೇ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದರೆ ಅದು ನಮ್ಮ ದೇಶಕ್ಕೆ ಶೋಭೆ ತರುವುದಿಲ್ಲ. ಆಫ್ರಿಕಾದ ಬಡ ದೇಶಗಳ ಮಹಿಳೆಯರಿಗಿಂತ ನಮ್ಮ ದೇಶದ ಮಹಿಳೆಯರು ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರ, ಸಾರ್ವಜನಿಕ ಆರೋಗ್ಯ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ನಡೆಸಿದ ಸಮೀಕ್ಷೆಯ ವರದಿಯನ್ನು ನೋಡಿದರೆ ನಾಚಿಕೆಯಾಗುತ್ತದೆ.

ಬರೀ ಎಪ್ಪತ್ತು ವರ್ಷಗಳ ಪುರಾಣ ಹೇಳುತ್ತ ಕೂತರೆ ಈ ಹಸಿವಿನ ಸಮಸ್ಯೆ ಬಗೆಹರಿಯುವುದಿಲ್ಲ. ಹಸಿವಿನ ಸೂಚ್ಯಂಕದಲ್ಲಿ ದಾಖಲಾದ ಈಗಿರುವ ಪ್ರಮಾಣವನ್ನು ತಗ್ಗಿಸಲು ಕ್ರಮ ಕೈಗೊಳ್ಳಬೇಕು. ಅಧಿಕೃತ ಅಂಕಿ ಅಂಶಗಳು ವಾಸ್ತವಾಂಶವನ್ನು ಬಿಚ್ಚಿಟ್ಟರೂ ಅದೆಲ್ಲ ಸುಳ್ಳು ಎಂದು ದತ್ತಾಂಶವನ್ನೇ ಉಲ್ಟಾ ಪಲ್ಟಾ ಮಾಡುವ ಕೀಳು ಮಟ್ಟಕ್ಕೆ ಹೋಗುವುದು ಸರಿಯಲ್ಲ.

ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಆರ್ಥಿಕ ಪರಿಸ್ಥಿತಿ ಹದಗೆಡುತ್ತಲೇ ಇದೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಅಭಿಜಿತ್ ಬ್ಯಾನರ್ಜಿ ಅವರೂ ಈ ಮಾತು ಹೇಳಿದ್ದಾರೆ. ಆದರೆ ಈ ಸರಕಾರದ ಆದ್ಯತಾ ಪಟ್ಟಿಯಲ್ಲಿ ಬಡತನ ಮತ್ತು ಹಸಿವು ನಿವಾರಣೆಯ ಯಾವ ಕಾರ್ಯಕ್ರಮವೂ ಇಲ್ಲ. ವಿನಾಶಕಾರಿ ಆರ್ಥಿಕ ನೀತಿಯ ಪರಿಣಾಮವಾಗಿ ಕೈಗಾರಿಕೆಗಳು ಮುಚ್ಚಿ ಲಕ್ಷಾಂತರ ಕಾರ್ಮಿಕರು ಬೀದಿಗೆ ಬೀಳುತ್ತಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಹುಸಿಯಾಗಿದೆ. ದೇಶದ ಕೋಟ್ಯಂತರ ಯುವಜನ ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಇದಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದ ಸರಕಾರ ಮತ್ತು ಸರಕಾರ ನಡೆಸುವ ಪಕ್ಷ ಭಾವನಾತ್ಮಕ ವಿಷಯಗಳನ್ನು ಕೆದಕಿ, ಕೆರಳಿಸಿ ಜಾತಿ, ಧರ್ಮದ ಆಧಾರದಲ್ಲಿ ಜನರನ್ನು ಒಡೆದು ತನ್ನ ಫ್ಯಾಶಿಸ್ಟ್ ಕಾರ್ಯಸೂಚಿಯನ್ನು ಜಾರಿಗೆ ತರಲು ಹೊರಟಿದೆ. ಈ ಸರಕಾರ ಹಸಿವಿನಿಂದ ನರಳಿ ಸಾಯುವವರನ್ನು ಬದುಕಿಸುವ ಕನಿಷ್ಠ ಮನುಷ್ಯತ್ವವನ್ನಾದರೂ ತೋರಿಸಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News