ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಕರ್ ವಿರುದ್ಧ ವಂಚನೆ,ಅತಿಕ್ರಮಣ ಪ್ರಕರಣ ದಾಖಲು

Update: 2019-10-18 05:33 GMT

ಹೊಸದಿಲ್ಲಿ, ಅ.18: ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಕರ್, ಅವರ ಪತ್ನಿ, ಪುತ್ರ ಹಾಗೂ ಇತರ ಇಬ್ಬರ ವಿರುದ್ಧ ದಿಲ್ಲಿಯ ಪೊಲೀಸರು ಗುರುವಾರ ವಂಚನೆ ಹಾಗೂ ಅತಿಕ್ರಮಣ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾವು ಲಂಡನ್‌ನಲ್ಲಿರುವ ಸಂಧ್ಯಾ ಶರ್ಮಾ ಪಂಡಿತ್ ಎಂಬ ಮಹಿಳೆಯಿಂದ ದೂರೊಂದನ್ನು ಸ್ವೀಕರಿಸಿದ್ದೆವು. ದಕ್ಷಿಣ ದಿಲ್ಲಿಯ ಸರ್ವಪ್ರಿಯ ವಿಹಾರದಲ್ಲಿರುವ ಅಪಾರ್ಟ್‌ಮೆಂಟ್‌ನ ಎರಡನೇ ಮಾಳಿಗೆಯಲ್ಲಿ ತನಗೆ ಸ್ವಂತ ಫ್ಲಾಟ್ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಅಪಾರ್ಟ್‌ಮೆಂಟ್‌ನ ಮೊದಲ ಮಾಳಿಗೆಯಲ್ಲಿ ಪ್ರಭಾಕರ್ ತನ್ನ ಕುಟುಂಬ ಸದಸ್ಯರೊಂದಿಗೆ ವಾಸವಾಗಿದ್ದಾರೆ. ಪ್ರಭಾಕರ್ ತನ್ನ ಮನೆಯ ಬಾಗಿಲು ಒಡೆದು ತನ್ನ ಸ್ನೇಹಿತನಿಗೆ ವಾಸಕ್ಕೆ ನೀಡಿದ್ದಾಗಿ ಮಹಿಳೆ ಆರೋಪಿಸಿದ್ದಾರೆ.

1995ರಲ್ಲಿ ತನ್ನ ಪತಿ ಲಕ್ಷ್ಮಿ ಚಂದ್ ಬಿಲ್ಡರ್‌ನಿಂದ ಫ್ಲಾಟ್ ಖರೀದಿಸಿದ್ದು, ಲಂಡನ್‌ಗೆ ತೆರಳುವ ವರೆಗೆ 2006ರಲ್ಲಿ ಅದೇ ಫ್ಲಾಟ್‌ನಲ್ಲಿ ನೆಲೆಸಿದ್ದೆವು. ಬಳಿಕ ನಮ್ಮ ಸಂಬಂಧಿಕರು ಫ್ಲಾಟ್‌ನಲ್ಲಿದ್ದರು. 2018ರಲ್ಲಿ ಮನೆ ಖಾಲಿ ಮಾಡಲಾಗಿದ್ದು, ಆ ಬಳಿಕ ಅದಕ್ಕೆ ಬೀಗ ಹಾಕಲಾಗಿತ್ತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಸೆಪ್ಟಂಬರ್‌ನಲ್ಲಿ ದಿಲ್ಲಿಗೆ ಬಂದಿದ್ದ ಮಹಿಳೆ ತನ್ನ ಫ್ಲಾಟ್‌ನೊಳಗೆ ಪ್ರವೇಶಿಸಲು ಹೋದಾಗ ಅವರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿಲ್ಲ. ಪ್ರಭಾಕರ್ ಹಾಗೂ ಇತರರು ಖೋಟಾ ದಾಖಲೆಗಳನ್ನು ನೀಡಿ ತನ್ನ ಫ್ಲಾಟ್‌ನ್ನು ಅತಿಕ್ರಮಿಸಿಕೊಂಡಿದ್ದಾಗಿ ಮಹಿಳೆ ದೂರಿದ್ದಾರೆ.

ಪ್ರಾಥಮಿಕ ತನಿಖೆಯ ವೇಳೆ ಪ್ರಕರಣದ ಓರ್ವ ಆರೋಪಿಯಾಗಿರುವ ಮನೋಜ್ ಗೋಯಲ್, ಖೋಟಾ ದಾಖಲೆ ಸೃಷ್ಟಿಸಿ ಪ್ರಭಾಕರ್‌ಗೆ ಫ್ಲಾಟ್ ಖರೀದಿಸಲು ನೆರವಾಗಿದ್ದಾನೆ. ಆರಂಭಿಕ ತನಿಖೆಯ ಬಳಿಕ ಮಾಲ್ವಿಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪ್ರಭಾಕರ್‌ರನ್ನು ವಿಚಾರಣೆಗೆ ಕರೆಯಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳೆಯೊಬ್ಬರು ತಮ್ಮ ಮೇಲೆ ಮಾಡಿರುವ ಆರೋಪವನ್ನು ನಿರಾಕರಿಸಿರುವ ಮಾಜಿ ಕ್ರಿಕೆಟಿಗ ಪ್ರಭಾಕರ್, ‘‘ನಾನು ಕಳೆದ 23 ವರ್ಷಗಳಿಂದ ಮೊದಲ ಮಾಳಿಗೆಯ ಫ್ಲಾಟ್‌ನಲ್ಲಿ ನೆಲೆಸಿದ್ದು, ದೂರು ನೀಡಿದ್ದ ಮಹಿಳೆಯನ್ನು ಈ ತನಕ ನೋಡಿಲ್ಲ. ಅವರ ಬಗ್ಗೆ ಏನೂ ಗೊತ್ತಿಲ್ಲ. ಎರಡನೇ ಮಾಳಿಗೆಯಲ್ಲಿ ಯಾರಿದ್ದರು ಎಂದು ನನಗೆ ಗೊತ್ತಿಲ್ಲ'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News