ಅಪ್ಪನಿಗೆ ಹಿಂಸೆ ನೀಡುವಾಗ 10 ವರ್ಷದ ಮಗನಿಗೆ ಚಿಪ್ಸ್ ನೀಡಿ ಠಾಣೆ ಹೊರಗೆ ನಿಲ್ಲಿಸಿದ್ದ ಪೊಲೀಸರು

Update: 2019-10-18 11:22 GMT

ಹಾಪುರ್ :  ಉತ್ತರ ಪ್ರದೇಶದ ಹಾಪುರ್ ಎಂಬಲ್ಲಿ 35 ವರ್ಷದ ಕಾವಲುಗಾರನೊಬ್ಬನ ಕಸ್ಟಡಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಡಿವೈಎಸ್ಪಿ ಸೇರಿದಂತೆ ಮೂವರು ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಆದರೆ ಯಾರನ್ನೂ ಬಂಧಿಸಲಾಗಿಲ್ಲ. 

ಸಂತ್ರಸ್ತ ವ್ಯಕ್ತಿಯನ್ನು ಠಾಣೆಯಲ್ಲಿ ಹಿಂಸಿಸುವ ಸಂದರ್ಭ ಆತನ ಹತ್ತು ವರ್ಷದ ಪುತ್ರನ್ನು ಪೊಲೀಸರು ಒಂದು ಪ್ಯಾಕೆಟ್ ಚಿಪ್ಸ್ ನೀಡಿ ಇಡೀ ರಾತ್ರಿ ಠಾಣೆಯ ಹೊರಗೆ ಕಾಯಿಸಿದ್ದರಲ್ಲದೆ ಬಾಯಿ ಮುಚ್ಚಿ ಕುಳಿತಿರುವಂತೆಯೂ ಎಚ್ಚರಿಸಿದ್ದರೆಂಬ ಮಾಹಿತಿ ಹೊರಬಿದ್ದಿದೆ.

ಸುಮಾರು ಒಂದೂವರೆ ತಿಂಗಳುಗಳ ಹಿಂದೆ ನಡೆದ ಸಂಬಂಧಿಯೊಬ್ಬರ ಪತ್ನಿಯ ಹತ್ಯೆಗೆ ಸಂಬಂಧಿಸಿದಂತೆ ಪ್ರಶ್ನಿಸಲು ಪೊಲೀಸರು ರವಿವಾರ  ರೈತನೊಬ್ಬನ ಪುತ್ರನಾಗಿರುವ ಪ್ರದೀಪ್ ತೋಮರ್ ಎಂಬಾತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು.

ವಿಚಾರಣೆ ವೇಳೆಗೆ ಆತನಿಗೆ ನಿರ್ದಯವಾಗಿ ಪೊಲೀಸರು ಥಳಿಸಿದ್ದರೆಂದು ತೋಮರ್ ಕುಟುಂಬ ಆರೋಪಿಸಿದೆ. ''ಟೋಲ್ ಬೂತ್ ನಿಂದ ನಮ್ಮನ್ನು ಕರೆದುಕೊಂಡು ಪೊಲೀಸರು ಹೋಗಿದ್ದರು. ತಂದೆಗೆ ಲಾಠಿಯಿಂದ ಹೊಡೆದು ಸ್ಕ್ರೂ ಡ್ರೈವರ್‍ನಿಂದ ದೇಹಕ್ಕೆ  ಚುಚ್ಚಿದ್ದರು. ನನ್ನ ಬಾಯಿಗೆ ಬಂದೂಕಿಟ್ಟು ನಾನು ಬಾಯ್ಮುಚ್ಚಿ ಇರಬೇಕೆಂದು  ಹೇಳಿದರು. ನಂತರ ಒಬ್ಬ ಪೊಲೀಸ್ ಸಿಬ್ಬಂದಿ ನನಗೆ ಒಂದು ಪ್ಯಾಕೆಟ್ ಚಿಪ್ಸ್ ತಂದಿತ್ತು ಠಾಣೆ ಹೊರಗೆ ನಿಂತುಕೊಳ್ಳುವಂತೆ  ಹೇಳಿದ್ದ. ನಾನು ಅಲ್ಲಿ ಅಳುತ್ತಾ ನಿಂತುಕೊಂಡಿದ್ದೆ'' ಎಂದು ತೋಮರ್ ಪುತ್ರ ಹೇಳಿದ್ದಾನೆ. ಘಟನೆ ನಡೆದ ಸಂದರ್ಭ ಪೊಲೀಸರು ಮದ್ಯದ ನಶೆಯಲ್ಲಿದ್ದರೆಂದು ಹೇಳಲಾಗಿದೆ.

ಪೊಲೀಸರು ತೋಮರ್ ಗೆ ಹಿಂಸೆ ನೀಡಿದ ನಂತರ ಆತನ ಕುಟುಂಬ ತೆಗೆದ ವೀಡಿಯೋದಲ್ಲಿ ದೇಹದ ಮೇಲೆ ಗಾಯದ ಗುರುತುಗಳು ಹಾಗೂ ರಕ್ತದ ಕಲೆಗಳಿರುವುದು ಕಾಣಿಸುತ್ತದೆ.

ರಾಜ್ಯದ ಮಾನವ ಹಕ್ಕು ಆಯೋಗವು  ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ಜಾರಿಗೊಳಿಸಿದ ನಂತರ  ಆರೋಪಿ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News