ಮಹದಾಯಿ ಕಳಸಾ-ಬಂಡೂರಿ ಅಧಿಸೂಚನೆಗೆ ಒತ್ತಾಯ: ಎರಡನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ

Update: 2019-10-18 17:20 GMT

ಬೆಂಗಳೂರು, ಅ.18: ಮಹದಾಯಿ ಕಳಸಾ-ಬಂಡೂರಿ ಯೋಜನೆಯ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಿ ರೈತರು ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಸರಕಾರ ಅಧಿಸೂಚನೆ ಹೊರಡಿಸುವವರೆಗೆ ಹೋರಾಟ ನಿಲ್ಲಿಸುವುದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ. 

ಗುರುವಾರ ಹುಬ್ಬಳ್ಳಿಯಿಂದ ರೈಲಿನಲ್ಲಿ ಬಂದು ಪಾದಯಾತ್ರೆ ಮೂಲಕ ರಾಜಭವನದತ್ತ ಸಾಗಲು ನಿರ್ಧರಿಸಿದ್ದ ರೈತ ಹೋರಾಟಗಾರರನ್ನು ಪೊಲೀಸರು ರೈಲ್ವೆ ನಿಲ್ದಾಣದಲ್ಲಿಯೇ ತಡೆದಿದ್ದರು. ಆದರೆ, ಅಷ್ಟಕ್ಕೆ ವಾಪಾಸ್ ಹೋಗದ ಹೋರಾಟಗಾರರು ರಾತ್ರಿಯಿಡೀ ರೈಲು ನಿಲ್ದಾಣದಲ್ಲೇ ಕಳೆದಿದ್ದು, ವಾಹನ ನಿಲುಗಡೆ ಸ್ಥಳದಲ್ಲಿಯೇ ಮಲಗಿದ್ದರು.

ಶುಕ್ರವಾರ ಮಹದಾಯಿ ಕಳಸಾ-ಬಂಡೂರಿ ಯೋಜನೆಗೆ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಿ ರೈತ ಸೇನಾ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ವೀರೇಶ್ ಸಬರದಮಠ ನೇತೃತ್ವದ ನಿಯೋಗ ರಾಜಭವನಕ್ಕೆ ತೆರಳಲು ಮುಂದಾಯಿತು. ಆದರೆ, ಅಲ್ಲಿನ ಅಧಿಕಾರಿಗಳು ಮನವಿ ಪತ್ರ ತಮ್ಮ ಬಳಿಗೆ ನೀಡಲು ಸೂಚಿಸಿದ್ದಾರೆ. ಆದರೆ, ರೈತ ನಿಯೋಗದ ಸದಸ್ಯರು ರಾಜ್ಯಪಾಲರೊಡನೆ ಮಾತನಾಡಲು ಪಟ್ಟು ಹಿಡಿದರು. ಇದಕ್ಕೆ ಅಧಿಕಾರಿಗಳು ಅವಕಾಶ ನೀಡದಿರುವುದರಿಂದ ಮರಳಿ ಪ್ರತಿಭಟನಾ ಸ್ಥಳಕ್ಕೆ ಬಂದು ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದಾರೆ.

ಧರಣಿ ನಿರತ ರೈತರು ರಾಜ್ಯಪಾಲ ವಜುಭಾಯಿ ವಾಲಾ ಭೇಟಿಗೆ ಅವಕಾಶ ನೀಡಬೇಕು. ಯೋಜನೆಗೆ ಅಧಿಸೂಚನೆ ಹೊರಡಿಸಲು ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಅಹೋರಾತ್ರಿ ಧರಣಿ ನಡೆಯುತ್ತಿದ್ದರೂ, ಸರಕಾರದ ಪ್ರತಿನಿಧಿಗಳು ಸ್ಥಳಕ್ಕೆ ಬಂದಿಲ್ಲ. ಶುಕ್ರವಾರ ಬಿಸಿಲಿನಲ್ಲಿಯೇ ಪ್ರತಿಭಟನೆ ಮುಂದುವರಿಸಿದ್ದಾರೆ.

ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ವೀರೇಶ್ ಸಬರದಮಠ, ರಾಜ್ಯಪಾಲರನ್ನು ಖುದ್ದು ಭೇಟಿಯಾಗಿ ಮನವಿ ನೀಡುವವರೆಗೂ ಧರಣಿಯಿಂದ ಹಿಂದಕ್ಕೆ ಸರಿಯುವುದಿಲ್ಲ. ಒಂದು ವೇಳೆ ಭೇಟಿಯಾಗದಿದ್ದರೆ ಇದೇ ಸ್ಥಳದಲ್ಲಿ ಧರಣಿ ಮುಂದುವರೆಸುತ್ತೇವೆ. ಮಳೆ, ಚಳಿಗೆ ನಾವು ಹೆದರುವುದಿಲ್ಲ. ನಮಗೆ ನೀರು ಬೇಕು. ಕೇಂದ್ರ ಸರಕಾರ ಕೂಡಲೇ ಅಧಿಸೂಚನೆ ಹೊರಡಿಸಬೇಕು. ರಾಜ್ಯಪಾಲರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುತ್ತೇವೆ. ನಮ್ಮ ಸಮಸ್ಯೆಗಳನ್ನು ತಿಳಿಸಲು ಇಲ್ಲಿಗೆ ಬಂದಿದ್ದೇವೆ. ಯಾವುದೇ ತ್ಯಾಗಕ್ಕೂ ಸಿದ್ಧ ಎಂದರು.

ಶುಕ್ರವಾರ ಧರಣಿ ಸ್ಥಳಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಂಸದ ಉಗ್ರಪ್ಪ ಭೇಟಿ ನೀಡಿ ಪ್ರತಿಭಟನಾಕಾರರ ಜತೆ ಚರ್ಚಿಸಿ, ಬೆಂಬಲ ವ್ಯಕ್ತಪಡಿಸಿದರು.

ನಾಲ್ವರು ಆಸ್ಪತ್ರೆಗೆ ದಾಖಲು

ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರಲ್ಲಿ ನಾಲ್ವರು ಅಸ್ವಸ್ಥಗೊಂಡಿದ್ದು, ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯಪಾಲರ ನಿಯೋಗಕ್ಕಾಗಿ ಮಳೆ, ಬಿಸಿಲಿನಲ್ಲಿಯೇ ಕಾದು ಕುಳಿತಿದ್ದರು. ಗುರುವಾರ ಸುರಿದ ಮಳೆಯಿಂದ ಚಳಿಜ್ವರ ಬಂದಿದ್ದು, ಯಾವಗಲ್ ಗ್ರಾಮದ 4 ವರ್ಷದ ಬಾಲಕ ರಾಜು ಕೂಡ ಜ್ವರಕ್ಕೆ ತುತ್ತಾಗಿದ್ದಾನೆ. ಗಂಗಪ್ಪ, ವಾಸು ಚವ್ಹಾಣ್, ಬಸಪ್ಪ, ಚನ್ನಬಸಪ್ಪ ಕಾಗದಾಳ್ ಎಂಬುವವರು ಚಿಕಿತ್ಸೆ ಪಡೆದು ಧರಣಿಗೆ ಮರಳಿದ್ದಾರೆ.

ಗೋವಾ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಅಧಿಸೂಚನೆ ಹೊರಡಿಸಲು ಇದೇ ಸರಿಯಾದ ಸಮಯವಾಗಿದೆ. ಮಹದಾಯಿ ಕಳಸಾ -ಬಂಡೂರಿ ಯೋಜನೆಯಿಂದ ಸ್ಥಳೀಯ ಜನರಿಗೆ ಕುಡಿಯುವ ನೀರು ಸಿಗಲಿದ್ದು, ರೈತರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲವಿದೆ. ಶೀಘ್ರವಾಗಿ ರಾಜ್ಯ ಹಾಗೂ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಬೇಕು.

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News