​ಸೈನಿಕ ಶಾಲೆಗಳಲ್ಲಿನ್ನು ಬಾಲಕಿಯರಿಗೂ ಪ್ರವೇಶ

Update: 2019-10-19 04:07 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಅ.19: ಮುಂದಿನ ಶೈಕ್ಷಣಿಕ ವರ್ಷದಿಂದ ದೇಶದ ಎಲ್ಲ ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೂ ಪ್ರವೇಶ ನೀಡುವ ಪ್ರಸ್ತಾವಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ. ಆದರೆ ಇದು ಹಂತಹಂತವಾಗಿ ಜಾರಿಗೆ ಬರಲಿದೆ ಎಂದು ಅಧಿಕೃತ ಪ್ರಕಟನೆ ಹೇಳಿದೆ.

ಎರಡು ವರ್ಷಗಳ ಹಿಂದೆ ಮಿಝೋರಾಂನ ಚಿಂಗ್‌ಚಿಪ್ ಸೈನಿಕ ಶಾಲೆಯಲ್ಲಿ ಬಾಲಕಿಯರಿಗೆ ಪ್ರವೇಶ ನೀಡುವ ಪ್ರಾಯೋಗಿಕ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವರು, ಎಲ್ಲ ಶಾಲೆಗಳಿಗೆ ಇದನ್ನು ವಿಸ್ತರಿಸಲು ಅನುಮತಿ ನೀಡಿದ್ದಾರೆ. ಇದಕ್ಕೆ ಅಗತ್ಯವಾದ ಮೂಲ ಸೌಕರ್ಯವನ್ನು ಒದಗಿಸುವಂತೆ ಹಾಗೂ ಸಾಕಷ್ಟು ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಹೆಚ್ಚಿನ ಪಾಲ್ಗೊಳ್ಳುವಿಕೆ, ಲಿಂಗ ಸಮಾನತೆ, ಸಶಸ್ತ್ರ ಪಡೆಗಳಲ್ಲಿ ಹೆಚ್ಚಿನ ಮಹಿಳೆಯರ ಪಾಲ್ಗೊಳ್ಳುವಿಕೆ ಮತ್ತು ಬೇಟಿ ಬಚಾವೊ ಬೇಟಿ ಪಡಾವೊ ಉದ್ದೇಶವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟನೆ ವಿವರಿಸಿದೆ.

ದೇಶಾದ್ಯಂತ 33 ಸೈನಿಕ ಶಾಲೆಗಳಿದ್ದು, 2017ರಲ್ಲಿ ಮೊದಲ ಬಾರಿಗೆ ಬಾಲಕಿಯರಿಗೆ ಪರೀಕ್ಷಾರ್ಥ ಪ್ರವೇಶ ನೀಡಲಾಗಿತ್ತು. ಪ್ರಾಯೋಗಿಕ ಯೋಜನೆಯಡಿ ಆರು ವಿದ್ಯಾರ್ಥಿನಿಯರನ್ನು ಸೇರಿಸಿಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News