ಭಾರೀ ಮಳೆಯ ನಡುವೆಯೂ ಚುನಾವಣೆ ಪ್ರಚಾರ ನಡೆಸಿದ ಶರದ್ ಪವಾರ್

Update: 2019-10-19 05:03 GMT

ಸತಾರ, ಅ.19: ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಶರದ್ ಪವಾರ್‌ರಂತಹ ರಾಜಕಾರಣಿಗಳ ಹುಮ್ಮಸ್ಸನ್ನು ಕುಗ್ಗಿಸಲು ಮಳೆಗೂ ಸಾಧ್ಯವಾಗಿಲ್ಲ. ಸತಾರದಲ್ಲಿ ಜೋರಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ಚುನಾವಣಾ ಭಾಷಣವನ್ನು ಮುಂದುವರಿಸಿದ ಎನ್‌ಸಿಪಿ ಮುಖ್ಯಸ್ಥ ಪವಾರ್ ಅವರ ಭಾಷಣದ ವಿಡಿಯೋ ಈಗ ಭಾರೀ ಸದ್ದು ಮಾಡುತ್ತಿದೆ.

ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಪವಾರ್‌ ಲೋಕಸಭಾ ಚುನಾವಣೆಯಲ್ಲಿ ಸತಾರದಿಂದ ಸ್ಪರ್ಧಿಸುವ ಧೈರ್ಯವನ್ನು ಮಾಡಿರಲಿಲ್ಲ ಎಂದು ಟೀಕಿಸಿದ್ದರು. ಸತಾರದಿಂದ ಎನ್‌ಸಿಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಶಿವಾಜಿ ಮಹಾರಾಜ್‌ರ ವಂಶಸ್ಠ ಉದಯನ್‌ರಾಜೇ ಭೋಸಲೆ ಇತ್ತೀಚೆಗೆ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬೋಸ್ಲೆ ಅವರು ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

‘‘ಒಂದು ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಳ್ಳಬೇಕು. ನಾನು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯ ಆಯ್ಕೆ ವೇಳೆ ತಪ್ಪು ಮಾಡಿದೆ. ಇದನ್ನು ನಾನು ಸಾರ್ವಜನಿಕವಾಗಿ ಒಪ್ಪಿಕೊಳ್ಳುವೆ. ಆದರೆ, ತಪ್ಪನ್ನು ಸರಿಪಡಿಸಿಕೊಳ್ಳಲು ನನಗೆ ಖುಷಿಯಾಗುತ್ತಿದೆ. ಸತಾರದ ಪ್ರತಿಯೊಬ್ಬ ಯುವಕ ಹಾಗೂ ವಯೋವೃದ್ಧರು ಅ.21ರ ಚುನಾವಣೆಯಲ್ಲಿ ಕಾಯುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸತಾರದಲ್ಲಿ ಪವಾಡ ನಡೆಯಲಿದೆ’’ ಎಂದು ಪವಾರ್ ಹೇಳಿದ್ದಾರೆ.

ಸುರಿಯುತ್ತಿರುವ ಮಳೆಯ ನಡುವೆ ಜನರನ್ನು ಉದ್ದೇಶಿಸಿ ಮಾತನಾಡಿದ ಪವಾರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News