ಮಹಾರಾಷ್ಟ್ರ ಚುನಾವಣಾ ಪ್ರಚಾರದಿಂದ ಗಡ್ಕರಿಯನ್ನು ದೂರವಿಟ್ಟ ಬಿಜೆಪಿ

Update: 2019-10-19 12:02 GMT

ನಾಗ್ಪುರ್, ಅ.19: ಕಳೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭ ಬಿಜೆಪಿ ಪ್ರಚಾರಾಭಿಯಾನದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರ ಪ್ರಚಾರ ಕಾರ್ಯ ಈ ಬಾರಿ ತವರು ಕ್ಷೇತ್ರವಾದ ವಿದರ್ಭಕ್ಕೆ ಸೀಮಿತಗೊಂಡಿದೆ. 

ಈ ಕ್ಷೇತ್ರದಲ್ಲಿ ತಮ್ಮ ಪ್ರಭಾವದಿಂದ ಬಿಜೆಪಿಗೆ ಗರಿಷ್ಠ ಲಾಭ ತರುವ ಪ್ರಯತ್ನ ತಮ್ಮದೆಂದು ಗಡ್ಕರಿ ಹೇಳಿಕೊಂಡರೂ ಪಕ್ಷದ ನಾಯಕತ್ವ ಉದ್ದೇಶಪೂರ್ವಕವಾಗಿ ಅವರ ಪ್ರಚಾರ ಕಾರ್ಯವನ್ನು ಕೇವಲ ವಿದರ್ಭಕ್ಕೆ ಸೀಮಿತಗೊಳಿಸಿದೆ ಎಂದು  ಪಕ್ಷದ ಕೆಲ ಮೂಲಗಳು ತಿಳಿಸಿವೆ. ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳ ಪೈಕಿ 62 ಕ್ಷೇತ್ರಗಳು ವಿದರ್ಭ ಪ್ರಾಂತ್ಯದಲ್ಲಿವೆ.

ಈ ಬಾರಿ ಗಡ್ಕರಿ ಇಲ್ಲಿಯ ತನಕ 49 ಚುನಾವಣಾ ರ್ಯಾಲಿಗಳಲ್ಲಿ ಭಾಷಣ ನೀಡಿದ್ದರೆ ಅವುಗಳಲ್ಲಿ ಒಂದು ರ್ಯಾಲಿ ಮಾತ್ರ ವಿದರ್ಭ ಪ್ರಾಂತ್ಯದಿಂದ ಹೊರಗೆ, ಅಂದರೆ ಮರಾಠವಾಡದಲ್ಲಿ ನಡೆದಿತ್ತು.

ಸೆಪ್ಟೆಂಬರ್ 19ರಂದು ನಾಸಿಕ್ ನಲ್ಲಿ ಪಡ್ನವಿಸ್ ರಥಯಾತ್ರೆ ಮುಕ್ತಾಯಗೊಂಡ ಸಂದರ್ಭ ಪ್ರಧಾನಿ ಭಾಗವಹಿಸಿದ್ದ ರ್ಯಾಲಿಯಲ್ಲಿ ಹಾಗೂ ಕೆಲ ದಿನಗಳ ನಂತರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮುಂಬೈಯಲ್ಲಿ ಭಾಗವಹಿಸಿದ್ದ ರ್ಯಾಲಿಯಲ್ಲಿ ನಿತಿನ್ ಗಡ್ಕರಿ ಕಾಣಿಸಿಕೊಂಡಿರಲಿಲ್ಲ.

ಟಿಕೆಟ್ ಹಂಚಿಕೆ ವೇಳೆಯೂ ಗಡ್ಕರಿಯವರನ್ನು ದೂರವಿರಿಸಿ ದೇವೇಂದ್ರ ಫಡ್ನವಿಸ್ ಅವರೇ ಪ್ರಮುಖ ಪಾತ್ರ ವಹಿಸಿದ್ದರು. ಮೂರು ಬಾರಿಯ ಶಾಸಕ ಹಾಗೂ ಹಾಲಿ ಸಚಿವ ಚಂದ್ರಶೇಖರ್ ಬಾವನ್ಕುಲೆ ಸಹಿತ ಹಲವು ಗಡ್ಕರಿ ಸಮೀಪವರ್ತಿಗಳು ಈ ಬಾರಿ ಟಿಕೆಟ್ ಪಡೆದಿಲ್ಲ ಎಂಬುದೂ ಉಲ್ಲೇಖನೀಯ.

ಸ್ಥಳೀಯ ದಿನಪತ್ರಿಕೆಗಳಿಗೆ ಬಿಜೆಪಿ ನೀಡುತ್ತಿರುವ ಜಾಹೀರಾತುಗಳಲ್ಲಿಯೂ ಮೋದಿ, ಶಾ, ಫಡ್ನವಿಸ್ ಹಾಗು ಜೆಪಿ ನಡ್ಡಾ ಚಿತ್ರಗಳಿದ್ದರೂ ಗಡ್ಕರಿ ಚಿತ್ರ ಎಲ್ಲೂ ಕಾಣುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News