ಬೆಂಗಳೂರು: ರೈಲ್ವೆ ನಿಲ್ದಾಣದಲ್ಲಿ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಹಿಂಪಡೆದ ರೈತರು

Update: 2019-10-19 12:51 GMT

ಬೆಂಗಳೂರು, ಅ.19: ಮಹದಾಯಿ ಕಳಸಾ ಬಂಡೂರಿ ಯೋಜನೆಗೆ ಅಧಿಸೂಚನೆ ಹೊರಡಿಸುವಂತೆ ಆಗ್ರಹಿಸಿ ನಗರದ ರೈಲ್ವೆ ನಿಲ್ದಾಣದಲ್ಲಿ ಕಳೆದೆರಡು ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಹಿಂಪಡೆದ ರೈತರು, ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.

ಕಳಸಾ ಬಂಡೂರಿ ಯೋಜನೆಗೆ ಅಧಿಸೂಚನೆಗೆ ನೀಡುವಂತೆ ರಾಜ್ಯಪಾಲರು ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿ ಕಳೆದ ಎರಡು ದಿನಗಳಿಂದ ರೈತರ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಲು ಮುಂದಾದರೂ ಅವಕಾಶ ಕಲ್ಪಿಸಿಕೊಡಲಿಲ್ಲ. ಇದರಿಂದ ಸಿಟ್ಟಿಗೆದ್ದ ರೈತರು ರಾಜ್ಯಪಾಲರ ಭೇಟಿಗೆ ಅವಕಾಶ ಕಲ್ಪಿಸುವವರೆಗೆ ಅಹೋರಾತ್ರಿ ಧರಣಿ ಮುಂದುವರೆಸುವುದಾಗಿ ಪಟ್ಟು ಹಿಡಿದರು.

ಶನಿವಾರ ಪೊಲೀಸ್ ಆಯುಕ್ತರ ಮಾರ್ಗದರ್ಶನದ ಮೇರೆಗೆ ಐವರು ಮಹಿಳಾ ರೈತ ಮುಖಂಡರನ್ನು ರಾಜಭವನದ ರಾಜ್ಯಪಾಲರ ಕಚೇರಿಗೆ ಕರೆದೊಯ್ಯಲಾಯಿತು. ಮಹಿಳಾ ರೈತ ಮುಖಂಡರು ಸಲ್ಲಿಸಿದ ಮನವಿಯನ್ನು ರಾಜ್ಯಭವನದ ಕಚೇರಿಯ ಅಧಿಕಾರಿಗಳು ಸ್ವೀಕರಿಸಿದ ನಂತರ, ರೈತರು ಧರಣಿಯನ್ನು ಕೈಬಿಡಲು ನಿರ್ಧರಿಸಿದರು.

ಇದಕ್ಕೂ ಮೊದಲು, ಧರಣಿನಿರತ ಸ್ಥಳಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮನವಿಪತ್ರವನ್ನು ನನಗೆ ನೀಡಿ, ರಾಜ್ಯಪಾಲರಿಗೆ ತಲುಪಿಸುವುದಾಗಿ ರೈತ ಮುಖಂಡರಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಒಪ್ಪದ ರೈತರು, ರಾಜ್ಯಪಾಲರೇ ಬಂದು ಮನವಿ ಸ್ವೀಕರಿಸಬೇಕೆಂದು ಪಟ್ಟುಹಿಡಿದರು.

ನಿರಾಶರಾದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, 'ತಕ್ಷಣ ರಾಜ್ಯಪಾಲರನ್ನು ಭೇಟಿಯಾಗಿ ಮಹದಾಯಿ ಹೋರಾಟಗಾರರಿಂದ ಮನವಿ ಸ್ವೀಕರಿಸುವಂತೆ ಮನವಿ ಮಾಡಲಿದ್ದೇನೆ. ಅವರು ಏನು ಹೇಳುತ್ತಾರೋ ಅದನ್ನು ಹೋರಾಟಗಾರರಿಗೆ ತಿಳಿಸಲಿದ್ದೇನೆಂದು' ತಿಳಿಸಿ ಅಲ್ಲಿಂದ ಹೊರಟರು. ರಾಜ್ಯಪಾಲರು ಪ್ರತಿಭಟನಾ ಸ್ಥಳಕ್ಕೆ ಬರುವ ಯಾವುದೇ ಮುನ್ಸೂಚನೆ ಸಿಗದಿದ್ದಾಗ, ಕೆಲ ರೈತ ಮುಖಂಡರು, ರಾಜ್ಯಪಾಲರ ಭೇಟಿಗೆ ಅವಕಾಶ ಮಾಡಿಕೊಡಿ ಇಲ್ಲವೇ ಲಿಖಿತ ಉತ್ತರ ನೀಡಿ ಎಂದು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು, ಮುಂದೆ ಉಪವಾಸ ಸತ್ಯಾಗ್ರಹವನ್ನು ನಡೆಸುವುದಾಗಿ ಎಚ್ಚರಿಕೆಯನ್ನೂ ರವಾನಿಸಿದರು.

ಆಗ ಪೊಲೀಸ್ ಆಯುಕ್ತರ ಮಾರ್ಗದರ್ಶನದ ಮೇರೆಗೆ ಐವರು ಮಹಿಳಾ ರೈತ ಮುಖಂಡರನ್ನು ರಾಜ್ಯಭವನಕ್ಕೆ ಹೋಗಲು ಅವಕಾಶ ಮಾಡಿಕೊಟ್ಟರು. ಆದರೆ, ರಾಜಭವನದ ಗೇಟ್ ಬಳಿಯೇ ವಿಶೇಷ ಕರ್ತವ್ಯಾಧಿಕಾರಿ ಮಹಿಳಾ ಮುಖಂಡರಿಂದ ಮನವಿ ಸ್ವೀಕರಿಸಿ ವಾಪಾಸ್ ಕಳುಹಿಸಿದರು. ಇದರಿಂದ ನೊಂದ ಮಹಿಳೆಯರು ರಾಜಭವನದ ಮುಂದೆಯೇ ಕಣ್ಣೀರು ಹಾಕಿ, ಧರಣಿ ಸ್ಥಳಕ್ಕೆ ವಾಪಸಾದರು. 

ಕಾನೂನು ಹೋರಾಟಕ್ಕೆ ಮುಂದಾದ ರೈತರು

2018ರ ಆಗಸ್ಟ್‌ನಲ್ಲಿ ಮಹದಾಯಿ ನ್ಯಾಯಾಧೀಕರಣ ನೀರು ಹಂಚಿಕೆ ಕುರಿತಂತೆ ತೀರ್ಪು ನೀಡಿದೆ. ಮಹದಾಯಿಯಲ್ಲಿ ಒಟ್ಟು 180 ಟಿಎಂಸಿ ನೀರು ಲಭ್ಯತೆ ಆಧರಿಸಿ ಗೋವಾಕ್ಕೆ 30 ಟಿಎಂಸಿ, ಮಹಾರಾಷ್ಟ್ರಕ್ಕೆ 1.33 ಟಿಎಂಸಿ, ಕರ್ನಾಟಕಕ್ಕೆ 13.5 ಟಿಎಂಸಿ ಹಂಚಿಕೆಯಾಗಿದೆ. ಈ ತೀರ್ಪು ಬಂದು 14 ತಿಂಗಳು ಕಳೆದರೂ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿಲ್ಲ. ಹಾಗಾಗಿ ಕಾನೂನು ಹೋರಾಟ ಆರಂಭಿಸುತ್ತೇವೆ. ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಲಿದ್ದೇವೆ.

-ವೀರೇಶ್ ಸೊಬರದಮಠ, ರೈತ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News