ಕಳವು ಪ್ರಕರಣದ ಆರೋಪಿಗಳ ಬಂಧನ: 1.70 ಕೋಟಿ ಮೌಲ್ಯದ 15 ಕಾರುಗಳು ಜಪ್ತಿ

Update: 2019-10-19 13:18 GMT

ಬೆಂಗಳೂರು, ಅ.19: ರಸ್ತೆಬದಿ ನಿಲ್ಲಿಸುವ ಕಾರುಗಳನ್ನೆ ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಪ್ರಕರಣವೊಂದನ್ನು ಭೇದಿಸಿರುವ ಆಗ್ನೇಯ ವಿಭಾಗದ ಪೊಲೀಸರು, ಇಬ್ಬರನ್ನು ಬಂಧಿಸಿ, 1.70 ಕೋಟಿ ರೂ. ಬೆಲೆಯ 15 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿದ್ದಾರೆ.

ತಮಿಳುನಾಡು ಮೂಲದ ಪರಮೇಶ್ವರನ್(38), ಸದ್ದಾಂ ಹುಸೇನ್(28) ಬಂಧಿತ ಆರೋಪಿಗಳೆಂದು ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್ ತಿಳಿಸಿದ್ದಾರೆ.

ಇಲ್ಲಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆ.13ರಂದು ಹರಿಕೃಷ್ಣ ಎಂಬುವರು ಬೈಕ್ ಕಳವು ಸಂಬಂಧ ನೀಡಿದ್ದ ದೂರಿನ್ವಯ, ಕಾರ್ಯಾಚರಣೆ ನಡೆಸಿದ ಪೊಲೀಸ್ ತನಿಖಾಧಿಕಾರಿಗಳ ತಂಡ, ತಮಿಳುನಾಡು ಮೂಲದ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಪ್ರಕರಣ ಬೆಳಕಿಗೆ ಬಂದಿದೆ.

ರಸ್ತೆಬದಿ ಹಾಗೂ ಮನೆಗಳ ಮುಂದೆ ಬೀಗ ಹಾಕಿ ನಿಲ್ಲಿಸಿರುವ ಕಾರುಗಳನ್ನು ಗುರುತಿಸಿ ಉಪಕರಣಗಳಿಂದ ಹೊಸ ಕೀ-ಯನ್ನು ಸ್ಥಳದಲ್ಲೇ ಕೆಲವೇ ನಿಮಿಷದಲ್ಲಿ ತಯಾರು ಮಾಡಿ ಕಾರುಗಳನ್ನು ಕಳ್ಳತನ ಮಾಡುತ್ತಿದುದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಕಳವು ಮಾಡಿದ ಕಾರುಗಳಲ್ಲಿನ ನೋಂದಣಿ ಸಂಖ್ಯೆ ಬದಲಾಯಿಸಿ ಚಾಲಕರಿಗೆ ಕೊಟ್ಟು ತಮಿಳುನಾಡಿಗೆ ಕಳುಹಿಸಿ ಅಲ್ಲಿ ಪರಿಚಯ ಇರುವವರಿಗೆ ಮಾರಾಟ ಮಾಡುತ್ತಿರುವುದು ವಿಚಾರಣೆಯಿಂದ ತಿಳಿದುಬಂದಿದೆ.

ಆರೋಪಿಗಳಿಂದ ಕಾರುಗಳನ್ನು ಜಪ್ತಿ ಮಾಡಲಾಗಿದೆ. ಇವರ ಬಂಧನದಿಂದ ಹತ್ತಕ್ಕೂ ಹೆಚ್ಚು ವಾಹನ ಕಳವು ಪ್ರಕರಣಗಳನ್ನು ಪತ್ತೆಯಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News