ಈ ರೈಲು ವಿಳಂಬಕ್ಕೆ ಇಲಾಖೆಯಿಂದ ಪರಿಹಾರ ಪಡೆದ ಪ್ರಯಾಣಿಕರು !

Update: 2019-10-20 06:35 GMT

ಲಕ್ನೋ : ಭಾರತೀಯ ರೈಲ್ವೆಯ 150 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೈಲು ಸಂಚಾರ ವಿಳಂಬವಾದ ಕಾರಣಕ್ಕೆ ಇಲಾಖೆ ಪ್ರಯಾಣಿಕರಿಗೆ ಪರಿಹಾರ ಮೊತ್ತ ಪಾವತಿಸಿದೆ.

ಲಕ್ನೋದಿಂದ ಹೊಸದಿಲ್ಲಿಗೆ ಬರುವ ತೇಜಸ್ ಎಕ್ಸ್‌ಪ್ರೆಸ್ ರೈಲು ಗಾಡಿ ನಿಗದಿತ ಸಮಯಕ್ಕಿಂತ ಎರಡು ಗಂಟೆ ವಿಳಂಬವಾಗಿ ಬಂದಿದ್ದು, ಪ್ರತಿ ಪ್ರಯಾಣಿಕರಿಗೆ 250 ರೂ. ದಂಡ ಮೊತ್ತವನ್ನು ನೀಡುವುದಾಗಿ ಇಲಾಖೆ ಪ್ರಕಟಿಸಿದೆ.

ಕೃಷಕ್ ಎಕ್ಸ್‌ಪ್ರೆಸ್ ರೈಲು ಲಕ್ನೋ ಜಂಕ್ಷನ್ ಬಳಿ ಹಳಿ ತಪ್ಪಿದ ಪರಿಣಾಮ ದೆಹಲಿ- ಲಕ್ನೋ ಮತ್ತು ಲಕ್ನೋ- ದೆಹಲಿ ಎರಡೂ ರೈಲುಗಳು ಶುಕ್ರವಾರ ರಾತ್ರಿ ತಡವಾಗಿ ಸಂಚರಿಸಿದ್ದವು. ಎರಡೂ ರೈಲುಗಳಲ್ಲಿ ಕ್ರಮವಾಗಿ 451 ಹಾಗೂ 500 ಪ್ರಯಾಣಿಕರಿದ್ದರು. "ಎಲ್ಲ ಪ್ರಯಾಣಿಕರ ಮೊಬೈಲ್‌ಗಳಿಗೆ ಲಿಂಕ್ ಕಳುಹಿಸಲಾಗಿದ್ದು, ಇದನ್ನು ಕ್ಲಿಕ್ ಮಾಡಿ ಪ್ರಯಾಣಿಕರು ಪರಿಹಾರ ಮೊತ್ತ ಪಡೆಯಬಹುದಾಗಿದೆ" ಎಂದು ಐಆರ್‌ಸಿಟಿಸಿ ಪ್ರಾದೇಶಿಕ ವ್ಯವಸ್ಥಾಪಕ ಅಶ್ವಿನಿ ಶ್ರೀವಾಸ್ತವ ಹೇಳಿದ್ದಾರೆ.

ಈ ವಿಳಂಬಕ್ಕಾಗಿ ಪ್ರಯಾಣಿಕರಿಗೆ ಹೆಚ್ಚುವರಿ ಚಹಾ, ಊಟ ಮತ್ತು ಉಪಾಹಾರವನ್ನು "ವಿಳಂಬಕ್ಕೆ ಕ್ಷಮೆ ಇರಲಿ" ಎಂಬ ಸ್ಟಿಕ್ಕರ್ ಹಚ್ಚಿದ ಪ್ಯಾಕೆಟ್‌ಗಳಲ್ಲಿ ನೀಡಲಾಗಿತ್ತು.

ನಿಗದಿತ ಅವಧಿಗೆ ರೈಲು ವೇಳಾಪಟ್ಟಿ ಪ್ರಕಾರ ಗಮ್ಯತಾಣ ತಲುಪದಿದ್ದರೆ ಪರಿಹಾರ ನೀಡಲಾಗುತ್ತದೆ. ಆದರೆ ವಿಳಂಬವಾಗಿ ಹೊರಟರೂ ಸರಿಯಾದ ಸಮಯಕ್ಕೆ ತಲುಪಿದರೆ ಪರಿಹಾರ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News